Advertisement

ಸಂತ್ರಸ್ತರ ದೇಣಿಗೆ ಸಂಗ್ರಹದಲ್ಲೂ ವಂಚನೆ ಎಚ್ಚರ…

06:00 AM Aug 21, 2018 | |

ಬೆಂಗಳೂರು: ಮಳೆಯಿಂದ ಸಂಕಷ್ಟಕ್ಕೊಳಗಾಗಿರುವ ಕೊಡಗು ಜನತೆಗೆ ರಾಜ್ಯವ್ಯಾಪಿ ನೆರವಿನ ಮಹಾಪೂರ ಹರಿದು ಬರುತ್ತಿದೆ. ಆದರೆ, ಇದನ್ನೇ ದುರುಪಯೋಗಪಡಿಸಿಕೊಂಡ ಕೆಲವರು ಸಂತ್ರಸ್ತರ ಪರಿಹಾರ ನಿಧಿ ಹೆಸರಿನಲ್ಲಿ ಹಣ ಮತ್ತು ಆಹಾರ ಪದಾರ್ಥ, ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ವಂಚನೆ ಮಾಡುತ್ತಿರುವ ದೂರುಗಳು ಕೇಳಿಬಂದಿವೆ.

Advertisement

ಪರಿಸ್ಥಿತಿಯ ದುರ್ಲಾಭ ಪಡೆದ ಕೆಲವು ಸಂಘ-ಸಂಸ್ಥೆಗಳು, ನಾಗರಿಕ ಸಂಘಟನೆಗಳು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿವೆ. ಆದರೆ ಅವು ನಿರಾಶ್ರಿತರಿಗೆ ತಲುಪುತ್ತಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಗೂ ಸಲ್ಲಿಕೆಯಾಗುತ್ತಿಲ್ಲ. ಹೀಗಾಗಿ, ನೆರವು ಸಂಗ್ರಹದ ಬಗ್ಗೆಯೇ ಅನುಮಾನಗಳು ಉಂಟಾಗಿವೆ.

ದೇಣಿಗೆ ಸಂಗ್ರಹಕ್ಕಾಗಿ ಕೆಲವೊಂದು ಸಂಘಗಳು ಹುಟ್ಟಿಕೊಂಡಿದ್ದು, ಬಸ್‌ ಹಾಗೂ ರೈಲು ನಿಲ್ದಾಣ, ವಾಣಿಜ್ಯ ಪ್ರದೇಶಗಳು, ಟೋಲ್‌ಗೇಟ್‌ಗಳ ಬಳಿ ಡಬ್ಟಾ ಹಿಡಿದು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಅವರು ಯಾರು, ಅವರು ಸಂಗ್ರಹಿಸಿದ್ದು ಯಾರಿಗೆ ತಲುಪಿಸಲಾಗುತ್ತಿದೆ ಎಂಬುದರ ಮಾಹಿತಿಯೇ ಇಲ್ಲ.

ಈ ಕುರಿತು ಎಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ. ದೇಣಿಗೆ ಸಂಗ್ರಹಿಸಿ ವಂಚಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಅಧಿಕೃತವಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿ ಅಥವಾ ಜಿಲ್ಲಾಧಿಕಾರಿಗಳ ಮೂಲಕವೇ ಹಣ ಸೇರಿ ಆಹಾರ ಧಾನ್ಯ ನೆರವು ಕಳುಹಿಸುವಂತೆ ಕೊಡಗು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ದೇಣಿಗೆಯನ್ನು ಸಿಎಂ ಪರಿಹಾರ ನಿಧಿ ಹಾಗೂ ಆಹಾರ ಪದಾರ್ಥ ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ತಲುಪಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ಜತೆಗೆ, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಆನ್‌ಲೈನ್‌ ಮೂಲಕವೂ ಹಣ ಜಮೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕ್‌ ಖಾತೆ ಜತೆಗೆ ಐಎಫ್ಎಸ್‌ಸಿ ಕೋಡ್‌ ಸಹ ನೀಡಲಾಗಿದೆ.

Advertisement

ದೂರು: ದೇಣಿಗೆ ಸಂಗ್ರಹಕ್ಕಾಗಿ ಕೊಡವ ಸಮಾಜದ ಹೆಸರು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಎ. ರವಿ ಉತ್ತಪ್ಪ ಮನವಿ ಮಾಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದ್ಮನಾಭನಗರದಲ್ಲಿ ವ್ಯಕ್ತಿಯೊಬ್ಬ ಕೊಡವ ಸಮಾಜದ ಹೆಸರಿನಲ್ಲಿ ತನ್ನ ಸ್ವಂತ ಬ್ಯಾಂಕ್‌ ಖಾತೆಯನ್ನು ನೀಡಿ, ದೇಣಿಗೆ ರೂಪದಲ್ಲಿ ಸಂಗ್ರಹವಾದ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಿಸಿಬಿಗೆ ದೂರು ದಾಖಲಿಸಲಾಗುವುದು. ವಂಚನೆ ಪ್ರಕರಣಗಳು ಬೆಳಕಿಗೆಬರುತ್ತಿರುವ ಹಿನ್ನೆಲೆಯಲ್ಲಿ ಜನ ಎಚ್ಚರ ವಹಿಸಬೇಕು ಎಂದಿದ್ದಾರೆ.
ಈ ಮಧ್ಯೆ ಕೊಡಗು ಸಂತ್ರಸ್ತರ ಸಂಕಷ್ಟಕ್ಕೆ ಬೆಂಗಳೂರಿನಿಂದ ನೆರವಿನ ಮಹಾಪೂರವೇ ಹರಿದುಬಂದಿದ್ದು, ಕೇವಲ ಮೂರು ದಿನಗಳಲ್ಲಿ 25 ಲಕ್ಷ ರೂ. ಸಂಗ್ರಹವಾಗಿದೆ. 48 ಲಾರಿಗಳಲ್ಲಿ ವಿವಿಧ ಪ್ರಕಾರದ ಸಾಮಗ್ರಿಗಳನ್ನು ಸಾಗಿಸಲಾಗಿದೆ ಎಂದು ಹೇಳಿದರು.

ಕೊಡವ ಸಮಾಜಕ್ಕೆ ಆರ್ಥಿಕ ನೆರವು ನೀಡಬಯಸುವವರಿಗೆ ಕೆನರಾ ಬ್ಯಾಂಕ್‌ ವಸಂತನಗರ ಶಾಖೆಯಲ್ಲಿ ಕೊಡವ ಸಮಾಜ “ಫ್ಲಡ್‌ ರಿಲೀಫ್ ಫ‌ಂಡ್‌’ ಹೆಸರಿನಲ್ಲಿ ಖಾತೆ ತೆರೆದಿದ್ದು, ಖಾತೆ ಸಂಖ್ಯೆ: 1370101084312 ಮತ್ತು ಐಎಫ್ಎಸ್ಸಿ ಕೋಡ್‌ 0001370 ಇಲ್ಲಿಗೆ ಸಂದಾಯ ಮಾಡಬಹುದು. ಇಲ್ಲಿಗೆ ಆನ್‌ಲೈನ್‌ ಮೂಲಕ ಇಲ್ಲವೇ ಚೆಕ್‌ ರೂಪದಲ್ಲೂ ಹಣ ಜಮೆ ಮಾಡಬಹುದು ಎಂದು ತಿಳಿಸಿದರು.

ಸಿಎಂ ನಿಧಿಗೆ ಆನ್‌ಲೈನ್‌ ಮೂಲಕ ಪಾವತಿಗೆ ಅವಕಾಶ
ಮಳೆಯಿಂದ ಸಂಕಷ್ಟಕ್ಕೊಳಗಾಗಿರುವ ಕೊಡಗು ಸಂತ್ರಸ್ತರ ನೆರವಿಗಾಗಿ ಸ್ಥಾಪಿಸಲಾಗಿರುವ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ  ಆನ್‌ಲೈನ್‌ ಮೂಲಕವೂ ದೇಣಿಗೆ ನೀಡಬಹುದು. “ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ-2018′  ಬ್ಯಾಂಕ್‌ ಖಾತೆ ಸಂಖ್ಯೆ- 37887098605 , ಐಎಫ್ಎಸ್‌ಸಿ ಕೋಡ್‌- ಎಸ್‌ಬಿಐಎನ್‌0040277.  ಎಂಐಸಿಆರ್‌ ಸಂಖ್ಯೆ- 560002419. ಇದಲ್ಲದೆ ಜಿಲ್ಲಾಧಿಕಾರಿಗಳ ಮೂಲಕವೂ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣ, ಚೆಕ್‌, ಡಿಡಿ ಕಳುಹಿಸಬಹುದಾಗಿದೆ. ಆಹಾರ ಪದಾರ್ಥಗಳನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಬಹುದು.

ತುರ್ತು ಏನೇನು ಬೇಕು?
ಕೊಡಗಿನಲ್ಲಿ ಯಾವ ವಸ್ತುಗಳ ಅಗತ್ಯತೆ ಇದೆ ಎಂಬುದನ್ನು ಅಲ್ಲಿನ ಜಿಲ್ಲಾಡಳಿತ ಪಟ್ಟಿ ಮಾಡಿದ್ದು ಆ ಪಟ್ಟಿಯಲ್ಲಿರುವ ವಸ್ತುಗಳನ್ನು ಕಳುಹಿಸುವುದು ಸೂಕ್ತ.ಕೊಡಗಿನಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಜನರಿಗೆ ಅಗತ್ಯವಾಗಿರುವ ವಸ್ತುಗಳನ್ನು ಮಾತ್ರ ಕಳುಹಿಸುವಂತೆ ಅಲ್ಲಿನ ಜಿಲ್ಲಾಡಳಿತ ಮನವಿ ಮಾಡಿದೆ. ಅನಗತ್ಯ ವಸ್ತು ಕಳುಹಿಸುವುದು ತಪ್ಪಿಸಲು ಈ ಕ್ರಮ ಕೈಗೊಂಡಿದೆ.
ಬೆಚ್ಚನೆಯ  ಉಡುಪುಗಳು ಹಾಗೂ ದೈನಂದಿನ ಬಳಕೆಗೆ ಬಳಸುವ ಉಡುಪುಗಳು, ರೈನ್‌ ಕೋಟ್‌ಗಳು, ಟವೆಲ್‌, ಬೆಡ್‌ಶೀಟ, ತಲೆ ದಿಂಬುಗಳು, ಒಳ ಉಡುಪು, ಪಂಚೆ, ನೈಟ್‌ ಡ್ರೆಸ್‌ಗಳು, ಸೀರೆ ಹಾಗೂ ಮಕ್ಕಳ ಬಟ್ಟೆಗಳು.ಚಪ್ಪಲಿ, ಬೂಟು, ಹ್ಯಾಂಡ್‌ ಗ್ಲೌಸ್‌, ಮಾಸ್ಕ್, ಸೋಪು, ಪಿನಾಯಿಲ್‌, ಪ್ಲಾಸ್ಟಿಕ್‌ ಮ್ಯಾಟ್‌, ಛತ್ರಿ, ಟಾರ್ಚ್‌ ಲೈಟ್‌, ಇತರೆ ಸ್ವತ್ಛತಾ ಸಾಮಗ್ರಿ, ಮೇಣದ ಬತ್ತಿ, ಬೆಂಕಿ ಪೊಟ್ಟಣ, ಸೊಳ್ಳೆ ಬತ್ತಿ, ಚಾಪೆ.

ಸ್ಯಾನಿಟರಿ ಪ್ಯಾಡ್‌ ಆ್ಯಂಟಿ ಸೆಪ್ಟಿಕ್‌ ಲೋಷನ್‌,  ಆ್ಯಂಡಿ ಪಂಗಲ್‌ ಪೌಡರ್‌ ಹಾಗೂ ಲೋಷನ್‌, ಅಡುಗೆ ಎಣ್ಣೆ, ಸಣ್ಣಪುಟ್ಟ ಅಡುಗೆ ಸಾಮಗ್ರಿ, ದವಸ ಧಾನ್ಯ ಕಳುಹಿಸಲು ಕೋರಲಾಗಿದೆ.

ಕೊಡಗು, ಮಡಿಕೇರಿ ನೆರೆ ಸಂತ್ರಸ್ಥರಿಗೆ ನೆರವು ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡಿ ವಂಚಿಸುವ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ. ಸಾರ್ವಜನಿಕರು ಈ ಕುರಿತು ದೂರು ನೀಡಬಹುದು.
– ಕಮಲ್‌ ಪಂಥ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ, ಕಾನೂನು ಸುವ್ಯವಸ್ಥೆ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next