Advertisement

ಪಾಂಡುರಂಗಪುರ ಗ್ರಾಮದಲ್ಲಿ ಸೌಕರ್ಯ ಮರೀಚಿಕೆ

03:33 PM Sep 15, 2021 | Team Udayavani |

ದೇವನಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಸಹ ಇಂದಿಗೂ ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಪಾಂಡುರಂಗಪುರ ಗ್ರಾಮದಲ್ಲಿ ಮೂಲ ಸೌಕರ್ಯ ಕಣ್ಮರೆಯಾಗಿದೆ.

Advertisement

ಬೆಳಕು ಭಾಗ್ಯ ಇಲ್ಲ: ಪಾಂಡುರಂಗಪುರ ಗ್ರಾಮದಲ್ಲಿ ರಸ್ತೆ, ಚರಂಡಿ, ವಿದ್ಯುತ್‌ ಸಂಪರ್ಕವಿಲ್ಲದೇ ಸುಮಾರು 35 ಕುಟುಂಬಗಳು ಜೀವನ ನಡೆಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 207ರ ಲಕ್ಷ್ಮೀಪುರ ಮತ್ತು ಸೋಲೂರು ಗೇಟ್‌ ಮಧ್ಯೆ ಇರುವ ಈ ಚಿಕ್ಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ವರ್ಷ ಕಳೆದರೂ ಮನೆಗಳಿಗೆ ಬೆಳಕು ಭಾಗ್ಯವೇ ಇಲ್ಲದಂತಾಗಿದೆ.

ವಿದ್ಯುತ್‌ ಸಂಪರ್ಕ ನೀಡಿಲ್ಲ: ಗ್ರಾಮಕ್ಕೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ವರ್ಷದ ಹಿಂದೆ ಬೆಸ್ಕಾಂನವರು ಈ ಗ್ರಾಮಕ್ಕೆ ಬಂದು ವಿದ್ಯುತ್‌ ಮೀಟರ್‌ ಅಳವಡಿಸಿ ಹೋಗಿದ್ದಾರೆ. ಆದರೆ, ವಿದ್ಯುತ್‌ ಸಂಪರ್ಕ ಮಾತ್ರ ನೀಡಿಲ್ಲ. ಮೀಟರ್‌ ಅಳವಡಿಸಲು 1500 ರೂ. ಸಹ ಪಡೆದು ಕೊಂಡಿದ್ದಾರೆ ಎನ್ನಲಾಗಿದೆ. ಉಳಿದಂತೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಾದರೆ ಪ್ರತ್ಯೇಕವಾಗಿ ಹಣ ಪಾವತಿಸಬೇಕೆಂದು ಹೇಳಿದ್ದಾರೆ.

ವಿದ್ಯುತ್‌ ಸಂಪರ್ಕ ಇಲ್ಲದ 35 ಕುಟುಂಬಗಳು ಎಸ್‌.ಸಿ., ಎಸ್‌.ಟಿ. ಜನಾಂಗದವರಾಗಿರುತ್ತಾರೆ. ಕಳೆದ ಬಾರಿ ಇದೇ ಗ್ರಾಮಕ್ಕೆ ಶೌಚಾಲಯ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಗ್ರಾಪಂಗೆ ಮನವಿ ಮಾಡಲಾಗಿತ್ತು. ಸಮುದಾಯ ಶೌಚಾಲಯ ನಿರ್ಮಿಸಿದ ಫ‌ಲವಾಗಿ ಪಾಂಡುರಂಗಪುರ ಗ್ರಾಮ ದ 10ಕ್ಕೂ ಹೆಚ್ಚು ಶೌಚಾಲಯ ರಹಿತ ಮನೆಯವರು ಸಮುದಾಯ ಶೌಚಾಲಯ ಬಳಸಿಕೊಳ್ಳಲು ಅನುಕೂಲವಾಯಿತು.

ರಸ್ತೆ ದುರಸ್ತಿಗೆ ಆಗ್ರಹ: ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ.ಮಂಜೂರು ಮಾಡುತ್ತಿದ್ದಾರೆ. ಗ್ರಾಮಕ್ಕೆ ಹೋಗುವ ರಸ್ತೆಯು ಹದಗೆಟ್ಟಿದ್ದು, ರಸ್ತೆಯಲ್ಲಿ ಯಾವುದೇ ವಾಹನಗಳು ಹೋಗಲು ಕಷ್ಟವಾಗುತ್ತಿದೆ. ಈ ರಸ್ತೆಯಲ್ಲಿ ಗುಂಡಿಗಳು ಹೆಚ್ಚು ಇರುವುದರಿಂದ ಗುಂಡಿ ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ.

Advertisement

ಇದನ್ನೂ ಓದಿ:ಸೂರ್ಯ ನಮಸ್ಕಾರದ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ ತುಕಾರಾಮ

ರಸ್ತೆಗೆ ಡಾಂಬರೀಕರಣ ಮಾಡಿದರೆ ಪ್ರತಿಯೊಬ್ಬರು ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ರಸ್ತೆಗೆ ಡಾಂಬರೀಕರಣ ಭಾಗ್ಯ ಕಲ್ಪಿಸಬೇಕು ಎಂದಗ್ರ ಮಸ್ಥರು ಒತ್ತಾಯಿಸಿದ್ದಾರೆ. ಗ್ರಾಪಂನವರು ಇತ್ತ ಗಮನಹರಿಸಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಾಂಡುರಂಗಪುರ ಗ್ರಾಮಕ್ಕೆ ಸುಮಾರು 1.75 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಪೈಪ್‌ಲೈನ್‌ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. 15ನೇ ಹಣಕಾಸು ಯೋಜನೆಯಡಿ 2 ಲಕ್ಷ ರೂ.ಗಳ ಕಾಮಗಾರಿ ಮಾಡಲು ಪಟ್ಟಿಗೆ ಸೇರಿಸಲಾಗಿದೆ.
– ಗಂಗರಾಜು, ವಿಶ್ವನಾಥಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ

ವಿದ್ಯುತ್‌ ಸಂಪರ್ಕ ಇಲ್ಲದಿರುವುದರ ಬಗ್ಗೆ ನಮ್ಮ ಗಮನಕ್ಕೆ ಬಂದಿರುವುದರಿಂದ 35 ಮನೆಗಳಲ್ಲಿ ಎಸ್‌ಸಿ., ಎಸ್‌ಟಿಗೆ ಸೇರಿದ್ದರೆ ಶೇ.25 ಹಾಗೂ ಅಂಗವಿಕಲರಾಗಿದ್ದರೆ, ಶೇ.5ರ ಅನುದಾನದಲ್ಲಿ ವಿದ್ಯುತ್‌ ಸಂಪರ್ಕ ನೀಡಬಹುದು. ಹದಗೆಟ್ಟಿರುವ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಲು
ಸೂಚಿಸ ಲಾಗುವುದು.
– ವಸಂತ್‌ಕುಮಾರ್‌, ತಾಪಂ ಇಒ

ಮನೆಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಸಿ ವರ್ಷವಾದರೂ ಸಂಪರ್ಕ ನೀಡಿಲ್ಲ. ರಸ್ತೆಗೆ ನೀರು ಹರಿಯುತ್ತದೆ. ಮಳೆ ಬಂದರೆ ಮನೆಗಳ ಅಕ್ಕಪಕ್ಕಗಳಲ್ಲಿ ನೀರು ನಿಲ್ಲುವುದರಿಂದ ಸಾಂಕ್ರಾ ಮಿಕ ರೋಗ ಭೀತಿ ಆವರಿಸಿದೆ.
-ನಾಗಮ್ಮ, ಗೃಹಿಣಿ, ಪಾಂಡುರಂಗಪುರ

ಶೀಘ್ರ ಚರಂಡಿ ಕಾಮಗಾರಿ ಕೈಗೆತ್ತಿಕೊಂಡು ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಕಾಂಕ್ರೀಟ್‌ ರಸ್ತೆಗೆ ಶಾಸಕರಅನುದಾನದಲ್ಲಿ 10 ಲಕ್ಷ ನೀಡುವ ಭರವಸೆ ನೀಡಿದ್ದರು. ಮಂಜೂರಾದ ನಂತರ ರಸ್ತೆ ಕಾಮಗಾರಿ ನಡೆಸಲಾಗುತ್ತದೆ.
-ಮಂಗಳ ನಾರಾಯಣಸ್ವಾಮಿ,
ಅಧ್ಯಕ್ಷರು, ವಿಶ್ವನಾಥಪುರ ಗ್ರಾಪಂ

● ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next