ದಾವಣಗೆರೆ: ನಾಟಕ ಒಳಗೊಂಡಂತೆ ಮಾಧ್ಯಮಗಳು ಮಾನವ ಸಂಬಂಧ ಬೆಸೆಯುವ ಕೆಲಸ ಮಾಡಬೇಕು ಎಂದು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಎಂ. ನಂಜುಂಡಸ್ವಾಮಿ ತಿಳಿಸಿದ್ದಾರೆ. ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶ್ರೀ ಗುರು ವಾದ್ಯವೃಂದದಿಂದ ಹಮ್ಮಿಕೊಂಡಿದ್ದ ಪೌರಾಣಿಕ ನಾಟಕೋತ್ಸವದಲ್ಲಿ ಮಾತನಾಡಿದರು.
ಟಿವಿ, ಸಿನಿಮಾಗಳು ಎಲ್ಲಿಯೋ ಒಂದು ಕಡೆ ಮಾನವೀಯ ಸಂಬಂಧ ಧಕ್ಕೆ ಉಂಟು ಮಾಡುತ್ತಿವೆ ಎಂದರು. ರಂಗಭೂಮಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಮಾಧ್ಯಮ. ರಂಗಭೂಮಿಯನ್ನು ಎಲ್ಲರೂ ಉಳಿಸಿ, ಬೆಳೆಸುವಂತಾಗಬೇಕು. ಧಾರಾವಾಹಿ ಮುಂತಾದ ಮಾಧ್ಯಮಗಳಲ್ಲಿನ ಒಳ್ಳೆಯ ಅಂಶ ಮಾತ್ರ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೃತ್ತಿ ರಂಗಭೂಮಿ ಎಂದಾಕ್ಷಣ ನೆನಪಿಗೆ ಬರುವುದು ಚಿಂದೋಡಿ ಮನೆತನ. ಚಿಂದೋಡಿ ಶಂಭುಲಿಂಗಪ್ಪ ರಂಗಭೂಮಿಗೆ ಸಾಕಷ್ಟು ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾಟಕೋತ್ಸವ ಉದ್ಘಾಟಿಸಿದ ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ರಂಗಭೂಮಿ, ಕಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿದೆ.
ತಾವು ತಮ್ಮ ಕೈಲಾದಷ್ಟು ಸಹಾಯ, ನೆರವು ನೀಡುವುದಾಗಿ ತಿಳಿಸಿದರು. ನಗರಪಾಲಿಕೆ ಸದಸ್ಯ ಜಿ.ಬಿ. ಲಿಂಗರಾಜ್, ಹಿರಿಯ ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ, ಕನ್ನಡ ಪರ ಹೋರಾಟಗಾರ ಬಸವರಾಜ್ ಐರಣಿ, ಕಣಕುಪ್ಪಿ ಮುರುಗೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಲಕ್ಷ್ಮಿಪತಿ, ಚಿಂದೋಡಿ ದರ್ಶನ್, ಬಿ. ಶಿವಕುಮಾರ್ ಇತರರು ಇದ್ದರು.
ಬೆಂಗಳೂರಿನ ಹುಲಿಬೆಲೆ ಸಿದ್ದರಾಮಯ್ಯ ಮಿತ್ರಮಂಡಳಿ ಕಲಾವಿದರು ಪಂಚವಟಿ ರಾಮಾಯಣ ನಾಟಕ ಪ್ರದರ್ಶಿಸಿದರು.