ಕಲಬುರಗಿ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆಯಿಂದ ಬಾಣಂತಿಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಹರಡಿರುವ ಸೋಂಕಿನಿಂದಾಗಿ ಕಳೆದ ಏಳು ತಿಂಗಳಲ್ಲಿ ಒಟ್ಟು 20ಕ್ಕೂ ಹೆಚ್ಚು ತಾಯಂದಿರು ಸಾವನ್ನಪ್ಪಿದ್ದಾರೆ.
ಅಚ್ಚರಿ ಎಂದರೆ ಹಾಸಿಗೆ ಕೊರತೆ ಕಾರಣ ಒಂದೇ ಬೆಡ್‌ನಲ್ಲಿ ಇಬ್ಬರು ಅಥವಾ ಮೂವರು ತಾಯಂದಿರಿಗೆ ಮಲಗಲು ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭ ಪರಸ್ಪರ ಸೋಂಕು ಹರಡಿ 20ಕ್ಕೂ ಹೆಚ್ಚು ತಾಯಂದಿರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಏಳು ತಿಂಗಳಲ್ಲಿ 300ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪಿವೆ. ತುರ್ತು ನಿಗಾ ಘಟಕದಲ್ಲೂ ವ್ಯವಸ್ಥೆ ಸರಿಯಾಗಿಲ್ಲ. ಒಂದೇ ಹಾಸಿಗೆಯಲ್ಲಿ ನಾಲ್ಕು ಶಿಶುಗಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂದರ್ಭ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಸಾವನ್ನಪ್ಪಿವೆ.
ಸರಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ 100 ಹಾಸಿಗೆಗಳಿವೆ. ನವಜಾತ ಶಿಶುಗಳಿಗಾಗಿ 22 ಹಾಸಿಗೆಗಳಿವೆ. ಪ್ರತಿ ದಿನವೂ 35ರಿಂದ 38 ಹೆರಿಗೆಗಳು ನಡೆಯುತ್ತವೆ. ಸರಳ ಹೆರಿಗೆ ಆದರೆ ಒಂದು ಅಥವಾ ಎರಡು ದಿನಗಳಲ್ಲಿ ತಾಯಿ-ಮಗು ಮನೆಗೆ ಹೋಗುತ್ತಾರೆ. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿದ್ದರೆ ಕನಿಷ್ಠ ಆರೇಳು ದಿನವಾದರೂ ಇರಬೇಕು. ದಿನದಲ್ಲಿ 10 ರಿಂದ 15ರಷ್ಟು ಸಿಜೆರಿಯನ್ ಹೆರಿಗೆ ನಡೆಯುತ್ತವೆ. ಇದರಿಂದಾಗಿ ಹಾಸಿಗೆ ಕೊರತೆ ಉಂಟಾಗಿದೆ. ಅದಕ್ಕಾಗಿ ತಾಯಂದಿರಿಗೆ ವಾರ್ಡುಗಳಲ್ಲಿನ ಒಂದು ಹಾಸಿಗೆಯಲ್ಲಿ ಇಬ್ಬರಿಗೆ ಮಲಗಲು ಅವಕಾಶ ಮಾಡಿಕೊಡಲಾಗಿದೆ ಎನ್ನುತ್ತವೆ ಆಸ್ಪತ್ರೆ ಮೂಲಗಳು.
ನಮ್ಮಲ್ಲಿ ಬೆಡ್‌ಗಳ ಸಂಖ್ಯೆ ಕಡಿಮೆ ಇದೆ. ಫೋಟೋಥೆರಪಿ ಮಷಿನ್‌ನಲ್ಲಿ ನಾಲ್ಕು ಶಿಶುಗಳನ್ನು ಇಡಲು ಬರುವುದಿಲ್ಲ. ಮೂರು ಮಕ್ಕಳನ್ನು ಇಡುತ್ತಿದ್ದೇವೆ. ಏನು ಮಾಡೋದು? ಜಾಗ ಇಲ್ಲ. ಹೆಚ್ಚುವರಿ ಬೆಡ್‌ಗಳನ್ನು ಕೇಳಿದ್ದೇವೆ, ಸಿಕ್ಕಿಲ್ಲ. ಪ್ರತ್ಯೇಕ ಹೆರಿಗೆ ಆಸ್ಪತ್ರೆ ಮಂಜೂರಾಗಿದೆ. ಈ ಆಸ್ಪತ್ರೆ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸುಪರ್ದಿಯಲ್ಲಿ ನಿರ್ಮಾಣ ಆಗಬೇಕು. ಅಲ್ಲಿಯವರೆಗೆ ಪರಿಸ್ಥಿತಿ ಹೀಗೆ ಇರುತ್ತದೆ. ಏನು ಮಾಡೋದು?
ಬಿ.ಎನ್.ಜೋಶಿ, ಜಿಲ್ಲಾ ಶಸ್ತ್ರಚಿಕಿತ್ಸಕರು
ಇವತ್ತಿನ ವೈಜ್ಞಾನಿಕ ಯುಗದಲ್ಲೂ ಇಷ್ಟು ಸಾವುಗಳು ಸಂಭವಿಸಿರುವುದನ್ನು ನೋಡಿದರೆ, ಸಾಯಲಿಕ್ಕೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕೇನು ಎನ್ನುವಂತಾಗಿದೆ. ಬಡತನ ಇದ್ದರೂ ಜ್ವರ ಬಂದ ಮಕ್ಕಳನ್ನು ಬೇರೆ ಕಡೆ ಮಲಗಿಸುತ್ತಾರೆ. ಆದರೆ, ಈ ಆಸ್ಪತ್ರೆಯೊಳಗೆ ಒಂದೇ ಹಾಸಿಗೆಯಲ್ಲಿ ಇಬ್ಬರು ಬಾಣಂತಿಯರನ್ನು ಮಲಗಿಸ್ತಾರೆ ಅಂದ್ರೆ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದರ್ಥ.
ನೀಲಾ, ರಾಜ್ಯ ಉಪಾಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ
ಇವರೆಲ್ಲಾ ಸೇರಿ ನನ್ನ ಮಗುವಿನ ಜೀವ ನುಂಗಿದರು. ಒಂದೇ ಹಾಸಿಗೆಯಲ್ಲಿ ನಾಲ್ಕು ಮಕ್ಕಳನ್ನು ಹಾಕ್ತಾರೆ. ಯಾವ ಮಗು ಅಳುತ್ತಿದೆ, ಏನಾಗುತ್ತಿದೆ ಎಂದು ತಿಳಿಯೋದಿಲ್ಲ. ಆ. 27ರಂದು ಮಗು ಹುಟ್ಟಿತು. ಮರುದಿನವೇ ಸಾವನ್ನಪ್ಪಿತು. ಏನಾಗಿದೆ? ಯಾಕೆ ಸತ್ತಿದೆ? ಎಂದು ಹೇಳಲಿಕ್ಕೆ ಯಾರೂ ತಯಾರಿಲ್ಲ.
ಗುರುಸ್ವಾಮಿ, ಮೃತ ನವಜಾತ ಶಿಶುವಿನ ತಂದೆ.