ಮಂಡ್ಯ: ಜನರಿಂದ, ಜನರಿಗಾಗಿ, ಜನರೇ ನಡೆಸುವ ಆಡಳಿತ ಹೊಂದಿರುವ ವಿನೂತನ ಗಣತಂತ್ರ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ಧರ್ಮ, ಭಾಷೆಗಳಿಗೂ ಸಮಾನ ಗೌರವ, ಮಾನ್ಯತೆ ಇದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ 72ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಲವು ಭಾಷೆ, ಧರ್ಮಗಳನ್ನು ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ನಮ್ಮ ಸಂವಿಧಾನದ ವಿಶೇಷ. ಇಂಥ ಅತ್ಯುತ್ತಮ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ.
ಭಾರತದ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಹೇಳಿದಂತೆ ಭಾರತ ದೇಶವನ್ನು ಶಾಂತಿಯುತ ಹಾಗೂ ಪ್ರಗತಿಪರ ರಾಷ್ಟ್ರವನ್ನಾಗಿಸುವ ನಮ್ಮ ಹಿರಿಯರ ಕನಸನ್ನು ನನಸು ಮಾಡಬೇಕು. ವರ್ಗರಹಿತ ಶ್ರೀಮಂತ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂದರು. ದೇಶದ ರೈತರು, ಸೈನಿಕರು ಹಾಗೂ ಉಳಿದ ಶ್ರಮಿಕರ ಭಾವನೆಗಳನ್ನು ಗೌರವಿಸುವ ಮೂಲಕ ಸಂವಿಧಾನಕ್ಕೆ ಬದ್ಧವಾಗಿ ಬದುಕುವ ಮನೋಭೂಮಿಕೆ ಇಂದಿನ ತುರ್ತು ಅನಿವಾ ರ್ಯತೆಯಾಗಿದೆ. ಆಗ ಮಾತ್ರವೇ ಸಂವಿಧಾನದ ಅತೀ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ನಿಜವಾದ ಅರ್ಥ ಬರಲಿದೆ ಎಂದು ಹೇಳಿದರು.
ಇದನ್ನೂ ಓದಿ:ಕೈಗಾರಿಕೆ ಸ್ಥಾಪಿಸಲು ಆದ್ಯತೆ: ಶಾಸಕಿ ರೂಪಕಲಾ
ಆತ್ಮನಿರ್ಭರ್ ಭಾರತ ಯೋಜನೆಯಡಿ ಅಭಿವೃದ್ಧಿ: ಆತ್ಮನಿರ್ಭರ ಭಾರತ ಅಭಿಯಾನದಡಿ ಜಿಲ್ಲೆಯ ಆಲೆಮನೆಗಳು, ಸಿರಿಧಾನ್ಯ ಉತ್ಪಾದನೆ ಘಟಕಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದ್ದು,ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಮಂಡ್ಯ ತಾಲೂಕಿನಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಕೊತ್ತತ್ತಿ ಹೋಬಳಿಯ 28 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹಾಗೂ 5 ಕೆರೆಗಳಿಗೆ ನೀರು ತುಂಬಿಸುವ 18.5 ಕೋಟಿ ರೂ. ವೆಚ್ಚದ ಏತ ನೀರಾವರ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಎನ್. ಅಪ್ಪಾಜಿಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು, ಉಪಾಧ್ಯಕ್ಷೆ ಇಶ್ರತ್ ಫಾತೀಮಾ, ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಾಪಂ ಅಧ್ಯಕ್ಷೆ ಎಚ್.ಎಸ್.ಶಿವಕುಮಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ ಎಸ್. ಎಂ.ಜುಲ್ ಫಿಖಾರ್ ಉಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಸೇರಿದಂತ ಮತ್ತಿತರರಿದ್ದರು.