ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಅರಿದ್ರಾ ಮಳೆ ಅಬ್ಬರಿಸಿ ಪ್ರಮುಖ ಜಲಾಶಯಗಳು, ನದಿ ನಾಲೆಗಳು ಮೈದುಂಬಿ ಹರಿಯುತ್ತಿದ್ದರೂ ಬಯಲು ಸೀಮೆ ಜಿಲ್ಲೆಗಳ ಪಾಲಿಗೆ ಮಾತ್ರ ಕಳೆದೊಂದು ತಿಂಗಳನಿಂದ ಮಳೆರಾಯನ ಕೃಪೆ ಇಲ್ಲದೇ ಮತ್ತೆ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬರದ ಕಾರ್ಮೋಡದ ಭೀತಿ ಎದುರಾಗಿದೆ. ಸದ್ಯ ಜಿಲ್ಲೆಯ ಮುಕ್ಕಾಲು ಭಾಗದ ಕೆರೆಗಳಲ್ಲಿ ಶೇ.20ರಷ್ಟು ನೀರು ಸಹ ಶೇಖರಣೆ ಇಲ್ಲದಿರುವುದು ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಕುಡಿಯುವ ನೀರಿನ ಸಂಕಷ್ಟ: ಜಿಲ್ಲೆಯಲ್ಲಿ ಪ್ರತಿ ವರ್ಷ ತಪ್ಪದೇ ಅನ್ನದಾತರ ಕೈ ಹಿಡಿಯುತ್ತಿದ್ದ ಆರಿದ್ರಾ ಮಳೆ ಕೂಡ ಈ ಬಾರಿ ಕೈ ಕೊಟ್ಟಿರುವ ಪರಿಣಾಮ ಇತ್ತ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯದಲ್ಲಿಯು ಸಾಕಷ್ಟು ಪ್ರಗತಿ ಕುಂಠಿತವಾಗಿದ್ದರೆ ಅತ್ತ ಜಿಲ್ಲೆಯ ಜೀವನಾಡಿಗಳಾಗಿರುವ ಸಹಸ್ರಾರು ಕೆರೆ, 1ಕುಂಟೆಗಳಿಗೆ ಮಳೆ ನೀರು ಹರಿಯದೇ ಇರುವ ಅಲ್ಪಸ್ವಲ್ಪ ನೀರು ಕೂಡ ಖಾಲಿ ಖಾಲಿಯಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಂಕಷ್ಟ ಎದುರಾಗಿರುವುದು ರೈತರನ್ನು ಹಾಗೂ ಜಿಲ್ಲಾಡಳಿತವನ್ನು ಕಂಗಾಲಾಗಿಸಿದೆ.
ಅನುದಾನದ ಪ್ರಸ್ತಾವನೆ ಸಲ್ಲಿಕೆ: ದಶಕಗಳಿಂದಲೂ ಶಾಶ್ವತ ನೀರಾವರಿಯಿಂದ ವಂಚಿತವಾಗಿರುವ ಬಯಲು ಸೀಮೆ ಚಿಕ್ಕಬಳ್ಳಾಫುರ ಜಿಲ್ಲೆಯ ಜನ ಜೀವನ ಕೆರೆ, ಕುಂಟೆಗಳ ಮೇಲೆಯೆ ಅವಲಂಬಿತಗೊಂಡಿವೆ. ಆದರೆ ಮಳೆಗಾಲದಲ್ಲಿ ಮೈದುಂಬಿ ಹರಿಯಬೇಕಿದ್ದ ಕೆರೆಗಳು ಈಗ ಮಳೆ ಕೈ ಕೊಟ್ಟಿರುವ ಪರಿಣಾಮ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ಇರುವ ನೀರು ಖಾಲಿಯಾಗ ತೊಡಗಿದ್ದು, ಮಳೆ ಹೀಗೆ ಕೈ ಕೊಟ್ಟರೆ ಬಯಲು ಸೀಮೆಗೆ ಮತ್ತೆ ಬರದ ಖಾಯಂ ಎಂಬ ಆತಂಕ ರೈತಾಪಿ ಜನರಲ್ಲಿ ಮನೆ ಮಾಡಿದೆ. ಈಗಾಗಲೇ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ
ನೀರು ಪೂರೈಸಲಾಗುತ್ತಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಕೈಗೊಳ್ಳಬೇಕಾದ ತುರ್ತು ಕಾರ್ಯಗಳಿಗೆ ಅಗತ್ಯವಾದ 25 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಈಗಾಗಲೇ ಜಿಲ್ಲಾ ಪಂಚಾಯ್ತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.
ಕೆರೆಗಳಲ್ಲಿ ಬರೀ 2,927ಮಿಲಿಯನ್ ಕ್ಯೂಬಿಕ್ ಪೀಟ್ ನೀರು: ಜಿಲ್ಲೆಯಲ್ಲಿನ ಒಟ್ಟು 1,402 ಕೆರೆಗಳಲ್ಲಿ ಬರೋಬ್ಬರಿ 4,182.44 ಮಿಲಿಯನ್ ಕ್ಯೂಬಿಕ್ ಪೀಟ್‌ರಷ್ಟು ನೀರಿನ ಸಂಗ್ರಹ ಸಾಮರ್ಥ್ಯ ಇದ್ದರೂ ಜಿಲ್ಲೆಯಲ್ಲಿ ಸಮರ್ಪಕವಾಗಿ ತಿಂಗಳನಿಂದ ಮಳೆಯಾಗದ ಪರಿಣಾಮ ಸದ್ಯ ಎಲ್ಲಾ ಕೆರೆಗಳಲ್ಲಿ ಕೇವಲ 2,927.44 ಮಿಲಿಯನ್ ಕ್ಯೂಬಿಕ್ ಪೀಟ್ ನೀರು ಮಾತ್ರ ಸಂಗ್ರಹ ಇದೆ. ಜುಲೈ ತಿಂಗಳಲ್ಲಿ ಮಳೆ ಆಗದಿದ್ದರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಬಿಗಾಡಿಸುತ್ತದೆ ಎಂಬ ಆತಂಕ ಅಧಿಕಾರಿಗಳಲ್ಲಿ ಮನೆ ಮಾಡಿದೆ.
ಶೇ.20ರಷ್ಟು ನೀರು ಇಲ್ಲ ಚಿಕ್ಕಬಳ್ಳಾಫುರ ಜಿಪಂ ವ್ಯಾಪ್ತಿಗೆ ಒಟ್ಟು 1,402 ಕೆರೆಗಳು ಬರಲಿದ್ದು, ಆ ಪೈಕಿ 354 ಕೆರೆಗಳಲ್ಲಿ ಹನಿ ನೀರು ಕೊಡ ಇಲ್ಲವಾಗಿದೆ. ಜತೆಗೆ ಮಳೆಗಾಲ ಅದರೂ ಇದುವರೆಗೂ ಯಾವುದೇ ಕೆರೆ ತುಂಬಿ ಕೋಡಿ ಹರಿದಿಲ್ಲ. ಜಿಲ್ಲೆಯಲ್ಲಿರುವ 1,402 ಕೆರೆಗಳ ಪೈಕಿ 863 ಕೆರೆಗಳಲ್ಲಿ ಶೇ.20ರಷ್ಟು ನೀರು ಮಾತ್ರ ಇದ್ದರೆ ಕೇವಲ 148 ಕೆರೆಗಳಲ್ಲಿ ಮಾತ್ರ ಶೇ.50ರಿಂದ 70ರಷ್ಟು ನೀರು ಸಂಗ್ರಹ ಇದ್ದರೆ ಬರೀ 37 ಕೆರೆಗಳಲ್ಲಿ ಮಾತ್ರ ಶೇ.75ದಿಂದ 90ರಷ್ಟು ನೀರು ಮಾತ್ರ ಸಂಗ್ರಹವಾಗಿದೆ ಎಂದು ಚಿಕ್ಕಬಳ್ಳಾಪುರ ಉಪ ವಿಭಾಗದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಅಭಿಯಂತ್ರರಾದ ಶಿವಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.