Advertisement

ಅಭ್ಯರ್ಥಿಗಳ ಭವಿಷ್ಯ ಭದ್ರತಾ ಕೊಠಡಿಯಲ್ಲಿ

06:00 AM Sep 02, 2018 | |

ಕುಂದಾಪುರ: ಪುರಸಭೆಗೆ ನಡೆದ ಚುನಾವಣೆಯಲ್ಲಿ ಬಳಸಿದ ಇವಿಎಂಗಳನ್ನು ಮಿನಿ ವಿಧಾನಸೌಧದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಈ ಮೂಲಕ ಕಣಕ್ಕಿಳಿದ 74 ಅಭ್ಯರ್ಥಿಗಳ ಪೈಕಿ ಗೆಲ್ಲುವ 23 ಅಭ್ಯರ್ಥಿಗಳು ಯಾರು ಎನ್ನುವುದು ಪ್ರಕಟವಾಗಲಷ್ಟೇ ಬಾಕಿ ಇವೆ. ಸದ್ಯ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ಯಾರಿಗೆ ಎಷ್ಟು ಮತ ಗಳಿಕೆಯಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಸೋಮವಾರವೇ ಈ ಎಲ್ಲ ಕಾತರಗಳಿಗೆ ತೆರೆ ಬೀಳಲಿವೆ.
  
ರಾಜಕೀಯ ನಡೆ
23 ವಾರ್ಡ್‌ಗಳಿಗೆ 74 ಅಭ್ಯರ್ಥಿ ಗಳಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್‌ ಮಾತ್ರ  ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಇತರ ಪಕ್ಷಗಳಾದ ಸಿಪಿಐಎಂ, ಬಿಎಸ್‌ಪಿ, ಜೆಡಿಎಸ್‌ ಎಲ್ಲ ಕ್ಷೇತ್ರಗಳ ಕಡೆಗೆ ಆಸಕ್ತಿ ತೋರಿಸಲಿಲ್ಲ. ಜೆಡಿಯು ಅಭ್ಯರ್ಥಿಗಳನ್ನೇ ಹಾಕಲಿಲ್ಲ. ಜೆಡಿಎಸ್‌ ಅಂತಿಮವಾಗಿ ಕಣದಿಂದ ಹಿಂದೆ ಸರಿದದ್ದೂ ನಡೆಯಿತು. ಕಳೆದ ಅವಧಿಯಲ್ಲಿ ಬಿಜೆಪಿ ಅಧಿಕ ಸ್ಥಾನ ಗಳಿಸಿದ್ದರೂ ಅಧಿಕಾರ ನಡೆಸಲು ಬೇಕಾದಷ್ಟು ಬಹುಮತ ಹೊಂದಿರಲಿಲ್ಲ. ಆಗ ನಾಲ್ವರು ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿಗೆ ಬೆಂಬಲ ಕೊಟ್ಟಿದ್ದರು. ಹಾಗೆ ಕಾಂಗ್ರೆಸ್‌ನಿಂದ ಬಂದವರಿಗೇ ಅಧಿಕಾರದ ಮಣೆ ಕೊಡಲಾಗಿತ್ತು. ಈ ಬಾರಿ ನಮಗೇ ಬಹುಮತ ಎನ್ನುತ್ತಾರೆ ಕಾಂಗ್ರೆಸ್‌ ಹಾಗೂ ಬಿಜೆಪಿಯವರು. 

Advertisement

ಖಾರ್ವಿಕೇರಿಯಲ್ಲಿ ಹೆಚ್ಚು 
ಖಾರ್ವಿಕೇರಿ ವಾರ್ಡ್‌ನಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಇಲ್ಲಿ ಶೇ.82.45ರಷ್ಟು ಮತದಾನವಾಗಿದ್ದು ಸಂಜೆ ಮತದಾನ ಅವಧಿ ಮುಗಿದ ಮೇಲೂ ಸರಣಿ ಇದ್ದುದರಿಂದ ಅವರಿಗೆ ಚೀಟಿ ಕೊಟ್ಟು ಮತದಾನ ಮಾಡಿಸಲಾಗಿತ್ತು. ಅತ್ಯಂತ ಹೆಚ್ಚು ಮಹಿಳಾ ಮತದಾರರು ಅಧಿಕಾರ ಚಲಾಯಿಸಿದ್ದು ಕೂಡಾ ಇಲ್ಲಿಯೇ. ಶೇ. 85.07ರಷ್ಟು ಪ್ರಮಾಣದಲ್ಲಿದೆ. ಅನಂತರದ ಅಧಿಕ ಮತದಾನ ನಡೆದ ಕೇಂದ್ರ ಮದ್ದುಗುಡ್ಡೆ ವಾರ್ಡ್‌.ಇಲ್ಲಿ ಶೇ 80.56ರಷ್ಟು ಮತದಾನವಾಗಿದೆ. ಅತಿ ಕಡಿಮೆ ಮತದಾನ ಎಂದರೆ ಜೆಎಲ್‌ಬಿ ವಾರ್ಡ್‌ನಲ್ಲಿ ಶೇ. 66.18ರಷ್ಟು ಮಾತ್ರ ಮತ ಚಲಾವಣೆಯಾಗಿದೆ. ಮಹಿಳಾ ಮತದಾರರ ಪ್ರಮಾಣ ಕೂಡಾ ಇಲ್ಲಿಯೇ ದಾಖಲಾದ್ದು. ಇಲ್ಲಿ ಶೇ.65.51 ಮಹಿಳಾ ಮತದಾರರು ಮತ ಹಾಕಿದ್ದಾರೆ. ಅತಿಹೆಚ್ಚು ಪುರುಷ ಮತದಾರರು ಮತದಾನ ಮಾಡಿದ ವಾರ್ಡ್‌ ಎಂದರೆ ಮದ್ದುಗುಡ್ಡೆ ವಾರ್ಡ್‌. ಶೇ.82.68ರಷ್ಟು. ಅತಿ ಕಡಿಮೆ ಎಂದರೆಚರ್ಚ್‌ರೋಡ್‌ವಾರ್ಡ್‌ನಲ್ಲಿ ಶೇ.66.51 ಮತದಾನ ಮಾಡಿದ್ದಾರೆ.

ಭದ್ರತೆ
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭದ್ರತಾ ಕೊಠಡಿಗೆ ಭದ್ರತೆ ಒದಗಿಸಲಾಗಿದೆ. ಇದಕ್ಕಾಗಿ 1 ಎಸ್‌ಐ, 2 ಎಎಸ್‌ಐ, 3 ಹೆಡ್‌ಕಾನ್ಸ್‌ ಟೇಬಲ್‌, 4 ಸಿಬಂದಿ, 1 ಕೆಎಸ್‌ಆರ್‌ಪಿ ಬೆಟಾಲಿಯನ್‌ರನ್ನು ನಿಯೋಜಿಸಲಾಗಿದೆ. ಹಗಲು 10 ಮಂದಿ, ರಾತ್ರಿ 10 ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. 

ಮತದಾನ ವಿವರ
23 ಮತಗಟ್ಟೆಗಳಲ್ಲಿ  ಒಟ್ಟು 23,302 ಮತದಾರರು ಮತ ಚಲಾಯಿಸಬೇಕಿತ್ತು. ಉತ್ತಮ ಪ್ರಮಾಣದಲ್ಲಿ ಮತದಾನ ನಡೆದಿದ್ದು ಶೇ.73.81 ಮತದಾನವಾಗಿದೆ. 17,200 ಮಂದಿ ಮತ ಚಲಾಯಿಸಿದ್ದಾರೆ. 11,292 ಪುರುಷ ಮತದಾರರ ಪೈಕಿ 8,331 ಮಂದಿ ಮತ ಚಲಾಯಿಸಿದ್ದು 12,010 ಮಹಿಳಾ ಮತದಾರರ ಪೈಕಿ 8,869 ಮಂದಿ ಮತದಾನ ಮಾಡಿದ್ದಾರೆ. ಈ ಮೂಲಕ ಮತದಾನದಲ್ಲೂ ಮಹಿಳೆಯರೇ ಮುಂದು ಎಂದು ಸಾಬೀತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next