ಒಂದು ಪ್ರೀತಿ, ಆರು ಕೊಲೆ. ಒಂದಕ್ಕಿಂತ ಒಂದು ಕೊಲೆಗಳು ಭೀಕರವಾದುವು. ಪ್ರತಿ ಕೊಲೆಯ ಹಿಂದೆಯೂ ಗೊತ್ತಿರುವ ಹಾಗೂ ಗೊತ್ತಿಲ್ಲದ ಒಂದು ಸತ್ಯ ಅಡಗಿರುತ್ತದೆ. ಇಲ್ಲಿ ವೈಯಕ್ತಿಕ ಪ್ರತಿಷ್ಠೆ, ಸೇಡು ಹಾಗೂ ಭಯ ಎಲ್ಲವೂ ಕೊಲೆಗೆ ದಾರಿ ಮಾಡಿಕೊಡುತ್ತವೆ. ಆ ಮಟ್ಟಿಗೆ “ಜಿಂದಾ’ ಒಂದು ಪಕ್ಕಾ ಕ್ರೈಮ್ ಬ್ಯಾಕ್‌ಡ್ರಾಪ್ ಸಿನಿಮಾ. ನಿರ್ದೇಶಕ ಮಹೇಶ್ ಪ್ರೀತಿಯ ಒಂದೆಳೆಯನ್ನು ಸಾಕ್ಷಿಯಾಗಿಟ್ಟುಕೊಂಡು ಉಳಿದಂತೆ ರಿವೆಂಜ್ ಸ್ಟೋರಿಯನ್ನು ಕಟ್ಟಿಕೊಟ್ಟಿದ್ದಾರೆ.
“ಜಿಂದಾ’ ಗ್ಯಾಂಗ್ ಎಂಬ ಆರು ಜನರ ಗ್ಯಾಂಗ್. ಒಬ್ಬೊಬ್ಬರದ್ದು ವಿಚಿತ್ರ ಮ್ಯಾನರೀಸಂ. ಆ ಊರಲ್ಲಿ ಕೊಲೆ, ಕಿಡ್ನಾಪ್, ರೇಪ್ … ಯಾವುದೂ ಇಲ್ಲ. ಆದರೆ, ಕಳ್ಳತನ ಮಾತ್ರ ತಪ್ಪಿದ್ದಲ್ಲ. ಅದು “ಜಿಂದಾ’ ಗ್ಯಾಂಗ್‌ನಿಂದ. ಕಳ್ಳತನಕ್ಕಾಗಿ ಆ ಗ್ಯಾಂಗ್ ಏನು ಬೇಕಾದರೂ ಮಾಡಲು ಸಿದ್ಧ. ಇಂತಹ ಗ್ಯಾಂಗ್ ಕಥೆಯನ್ನು ಎಷ್ಟು ರಗಡ್ ಆಗಿ ತೋರಿಸಬಹುದೋ ಅಷ್ಟು ತೋರಿಸಿದ್ದಾರೆ. ಆರಂಭದಲ್ಲಿ ಗ್ಯಾಂಗ್‌ನ ಮ್ಯಾನರೀಂ, ಲುಕ್, ಕಳ್ಳತನ ಮಾಡುವ ಶೈಲಿ, ಒಟ್ಟಾಗಿ ಮೇಲೆರಗುವ ಪರಿಯನ್ನು ನೋಡುವಾಗ ನಿಮಗೆ “ದಂಡುಪಾಳ್ಯ’ ಸಿನಿಮಾ ಗ್ಯಾಂಗ್ ನೆನಪಾದರೂ ಅಚ್ಚರಿಯಿಲ್ಲ.
ಇಡೀ ಸಿನಿಮಾ ಕೊಳ್ಳೇಗಾಲದಲ್ಲಿ ನಡೆಯುವುದರಿಂದ ಅಲ್ಲಿನ ಕನ್ನಡ ಹಾಗೂ ಪರಿಸರವನ್ನೇ ಬಳಸಲಾಗಿದೆ. ಆರಂಭದಲ್ಲಿ “ಜಿಂದಾ’ ತಂಡದ ಪರಿಚಯ, ಅವರ ಪೋಕರಿತನ, ಪರೀಕ್ಷೆ ಬರೆಯೋ ಸಂಭ್ರಮ … ಇಂತಹ ದೃಶ್ಯಗಳಲ್ಲೇ ಅರ್ಧ ಸಿನಿಮಾ ಮುಗಿದು ಹೋಗುತ್ತದೆ. ಹೊಸ ಹುಡುಗರ ಪರಿಚಯಕ್ಕಾಗಿಯೇ ಮಹೇಶ್ ಆ ಸಮಯವನ್ನು ಮೀಸಲಿಟ್ಟಂತಿದೆ. ಹಾಗಾಗಿ, ಇಲ್ಲಿ ಹೆಚ್ಚಿನದ್ದೇನನ್ನೂ ನಿರೀಕ್ಷಿಸುವಂತಿಲ್ಲ ಮತ್ತು ಮನಸ್ಸಿಗೆ ತಟ್ಟುವಂತಹ ಯಾವುದೇ ದೃಶ್ಯಗಳಿಲ್ಲ.
ಇಡೀ ಸಿನಿಮಾ ನಿಂತಿರೋದು ಸೆಕೆಂಡ್‌ಹಾಫ್ನಲ್ಲಿ. ಒಂದು ಕೊಲೆ ಹೇಗೆ ಸರಣಿ ಕೊಲೆಗಳಿಗೆ ದಾರಿಯಾಗುತ್ತದೆ ಮತ್ತು ಅದರ ಹಿಂದಿನ ಮೈಂಡ್‌ಗೆàಮ್ ಇಡೀ ಸಿನಿಮಾದ ಜೀವಾಳ ಎಂದರೆ ತಪ್ಪಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಸಿದ್ಧಾಂತದ ಮೂಲಕ ಸಾಗುವ ಈ ಕೊಲೆ ಸರಣಿ ಸಿನಿಮಾದ ಹೈಲೈಟ್. ಇಡೀ ಸಿನಿಮಾ ನಿಂತಿರೋದು ಸ್ನೇಹ, ಪ್ರೀತಿ ಹಾಗೂ ದ್ವೇಷದಲ್ಲಿ. ಇಲ್ಲಿ ಕೊಲೆಯ ಹಿಂದಿನ ಹುನ್ನಾರ ಹಾಗೂ ಅದನ್ನು ಕಣ್ಣುಮುಚ್ಚಿ ನಂಬುವ ಜನರ ಮನಸ್ಥಿತಿ ಸೇರಿದಂತೆ ಇಲ್ಲಿನ ಕೆಲವು ಅಂಶಗಳನ್ನು ಲಾಜಿಕ್ ಇಲ್ಲದೇ, ಪ್ರಶ್ನೆ ಮಾಡದೇ ಸಿನಿಮಾ ನೋಡಬೇಕು.
ಮೊದಲೇ ಹೇಳಿದಂತೆ ದ್ವಿತೀಯಾರ್ಧದ ಗೇಮ್‌ಪ್ಲ್ರಾನ್, ಕಾರಣವೇ ಗೊತ್ತಿಲ್ಲದೇ ಸಾಯುವ ಮಂದಿ, ದೂರದಲ್ಲಿ ನೋಡುತ್ತಾ ಖುಷಿ ಪಡುವ ವ್ಯಕ್ತಿ … ಇವೆಲ್ಲದರಲ್ಲಿ ಮಹೇಶ್ ಶ್ರಮ ಎದ್ದು ಕಾಣುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರ ಊಹೆಗೆ ನಿಲುಕದಂತಹ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ ಮಹೇಶ್. ಚಿತ್ರದಲ್ಲಿ ಯುವರಾಜ್, ಕೃಷ್ಣ, ಲೋಕಿ, ಅರುಣ್ ಸೇರಿದಂತೆ ಹೊಸ ಹುಡುಗರು ನಟಿಸಿದ್ದಾರೆ. ಆದರೆ, ಈ ಚಿತ್ರದ ನಿಜವಾದ ಹೀರೋ ದೇವರಾಜ್. ಇಡೀ ಸಿನಿಮಾದ ಸೂತ್ರಧಾರ ಅವರೆಂದರೆ ತಪ್ಪಲ್ಲ.
ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿರುವ ಅವರ ಖಡಕ್ ಲುಕ್, ಕಾನೂನಿನ ಹೊರತಾಗಿ ಅವರು ಕೈಗೊಳ್ಳುವ ನಿರ್ಧಾರ ಸಿನಿಮಾದ ಪ್ಲಸ್ ಪಾಯಿಂಟ್ ಎಂದರೆ ತಪ್ಪಲ್ಲ. ಯುವರಾಜ್ ಸೇರಿದಂತೆ “ಜಿಂದಾ’ ಗ್ಯಾಂಗ್‌ನಲ್ಲಿ ನಟಿಸಿದ ನಟರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಮೇಘನಾ ರಾಜ್ ಕ್ಲೈಮ್ಯಾಕ್ಸ್‌ನಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಶ್ರೀನಿವಾಸ್ ಮೂರ್ತಿ, ಸುಂದರ್‌ರಾಜ್ ಸೇರಿದಂತೆ ಹಿರಿಯ ನಟ-ನಟಿಯರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತದ ಒಂದು ಹಾಡು ಇಷ್ಟವಾಗುತ್ತದೆ. ನಾಗೇಶ್ ಆಚಾರ್ಯ ಛಾಯಾಗ್ರಹಣ ಚಿತ್ರಕ್ಕೆ ಪೂರಕ.
ಚಿತ್ರ: ಜಿಂದಾ
ನಿರ್ಮಾಣ: ದತ್ತ ಫಿಲಂಸ್
ನಿರ್ದೇಶನ: ಮಹೇಶ್
ತಾರಾಗಣ: ಯುವರಾಜ್, ಕೃಷ್ಣ, ಲೋಕಿ, ಅರುಣ್, ಅನಿರುದ್ಧ್, ದೇವ್, ಮೇಘನಾ ರಾಜ್, ದೇವರಾಜ್ ಮತ್ತಿತರರು.
* ರವಿಪ್ರಕಾಶ್ ರೈ