“ಆಪರೇಷನ್ ಅಲಮೇಲಮ್ಮ’ ಚಿತ್ರದ ಮೂಲಕ ಹೀರೋ ಆದ ರಿಷಿಯ ಹೆಸರು ಆ ನಂತರ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅವರ ಯಾವ ಚಿತ್ರಗಳು ತೆರೆಗೆ ಬರಲೇ ಇಲ್ಲ. ಒಂದು ವರ್ಷದಿಂದ ಯಾವ ಚಿತ್ರವೂ ಇಲ್ಲದೇ ಚಿತ್ರೀಕರಣದಲ್ಲಿ ತೊಡಗಿದ್ದ ರಿಷಿ 2019ರ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಅವರ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿರುವುದು. ಈ ಬಗ್ಗೆ ಮಾತನಾಡುವ ರಿಷಿ, “ಅಂದುಕೊಂಡಂತೆ ಆಗಿದ್ದರೆ ಈ ವರ್ಷದಲ್ಲಿ “ಕವಲುದಾರಿ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಶೂಟಿಂಗ್,ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸ್ವಲ್ಪ ಹೆಚ್ಚು ಸಮಯ ಹಿಡಿದಿದ್ದರಿಂದ, ಜೊತೆಗೆ ಸಾಕಷ್ಟು ಸಂಖ್ಯೆಯ ಚಿತ್ರಗಳು ಇದ್ದ ಕಾರಣ, “ಕವಲುದಾರಿ’ ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದೂಡಬೇಕಾಯಿತು. ಹೊಸ ವರ್ಷದ ಆರಂಭದಲ್ಲಿಯೇ ಈ ಚಿತ್ರ ಬಿಡುಗಡೆಯಾಗಲಿದೆ. ಈಗ ಮಾಡುತ್ತಿರುವ ಎಲ್ಲಾ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿವೆ’ ಎನ್ನುತ್ತಾರೆ. ಅಂದಹಾಗೆ, “ಕವಲುದಾರಿ’ ಚಿತ್ರ ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಈ ಬ್ಯಾನರ್ ಬಗ್ಗೆಯೂ ರಿಷಿ ಖುಷಿಯಿಂದ ಮಾತನಾಡುತ್ತಾರೆ. “ಅಣ್ಣಾವ್ರ ಫ್ಯಾಮಿಲಿ ಪ್ರೊಡಕ್ಷನ್ ಚಿತ್ರಗಳು ಅಂದ್ರೇನೆ ಅದರ ಬಗ್ಗೆ ಜನರಿಗೆ ನೂರಾರು ನಿರೀಕ್ಷೆ ಇರುತ್ತೆ. ಇನ್ನು ಅಪ್ಪು ಸಾರ್ ತಮ್ಮ ಪ್ರೊಡಕ್ಷನ್‌ನಲ್ಲಿ ಮೊದಲ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಅಂದಾಗ, ಕೂಡ ಅದೇ ನಿರೀಕ್ಷೆ ಇದ್ದೇ ಇರುತ್ತೆ. ಹಾಗಾಗಿ ಖುಷಿ ಮತ್ತು ಭಯ ಎರಡೂ ನನಗಿದೆ. ಆದರೆ ಇಡೀ ಚಿತ್ರ ಒಂದೊಳ್ಳೆ ಅನುಭವ ಕೊಟ್ಟಿದೆ. ಯಾವುದಕ್ಕೂ ಕೊರತೆಯಾಗದಂತೆ, ಕ್ರಿಯೇಟಿವ್ ಕೆಲಸಗಳಿಗೆ ಎಲ್ಲೂ ಹಸ್ತಕ್ಷೇಪ ಮಾಡದೆ, ತುಂಬ ವೃತ್ತಿಪರವಾಗಿ ಸಿನಿಮಾವನ್ನು ಮಾಡಿದ್ದಾರೆ. ದೊಡ್ಡ ಬ್ಯಾನರ್, ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದ್ರೂ, ಮನೆಯ ವಾತಾವರಣವಿತ್ತು’ ಎನ್ನುತ್ತಾರೆ.
ರಿಷಿಯ ಆಯ್ಕೆಗಳನ್ನು ಗಮನಿಸಿದರೆ ಅಲ್ಲಿ ಹೆಚ್ಚು ಹೀರೋಯಿಸಂ ಇರೋದಿಲ್ಲ. ಈ ತರಹದ ಆಯ್ಕೆ ಯಾಕೆ ಎಂಬ ಪ್ರಶ್ನೆ ಬರಬಹುದು. ಅದಕ್ಕೂ ರಿಷಿ ಉತ್ತರಿಸಿದ್ದಾರೆ. “ನನ್ನ ಪ್ರಕಾರ ಒಂದು ಚಿತ್ರಕ್ಕೆ ಕಥೆಯೇ ಮೊದಲ ಹೀರೋ. ನಿರ್ದೇಶಕ ಸೆಕೆಂಡ್ ಹೀರೋ. ಮೊದಲ ಎರಡು ಹೇಗಿದೆ ಅನ್ನೋದರ ಮೇಲೆ ಉಳಿದ ಸಂಗತಿಗಳು ನಿರ್ಧಾರವಾಗುತ್ತದೆ. ಹಾಗಾಗಿ ನನಗೆ ಹೀರೋಗೆ ಕಥೆಯಲ್ಲಿ ಎಷ್ಟು ಪ್ರಾಮುಖ್ಯತೆ ಇದೆ ಅನ್ನೋದಕ್ಕಿಂತ, ಕಥೆಗೆ ಎಷ್ಟು ಪ್ರಾಮುಖ್ಯತೆ ಇದೆ. ಒಬ್ಬ ನಟನಾಗಿ ನನ್ನ ಅಭಿನಯಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಅನ್ನೋದನ್ನ ಅಷ್ಟೇ ಗಮನಿಸುತ್ತೇನೆ’ ಎನ್ನುವುದು ಅವರ ಮಾತು.