ಬೆಂಗಳೂರು: ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಘಟನೆಯನ್ನು ಖಂಡಿಸಿದ ಅವರು, ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.
ಅವಿವೇಕಿಯೊಬ್ಬ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ. ಆತನಿಗೆ ಶಿಕ್ಷೆಯಾಗಬೇಕು ನಿಜ. ಆದರೇ ಪೈಗಂಬರ್ ಅನುಯಾಯಿಗಳು ದಾಂಧಲೆಗಿಳಿಯುವ ಮೂಲಕ ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ ಎಂದರು.
ಕಾನೂನು ಪಾಲಕ ಪೊಲೀಸರು ಮತ್ತು ವರದಿಗಾಗಿ ತೆರಳಿದ್ದ ಪತ್ರಕರ್ತರ ಮೇಲೆ ಅಮಾನುಷ ದೌರ್ಜನ್ಯ ನಡೆಸುವ ಮೂಲಕ ನಾಗರಿಕ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ ವರ್ತಿಸಿರುವುದು ಅತ್ಯಂತ ಖಂಡನೀಯ.
ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವ ಮೂಲಕ ಸಂವಿಧಾನದ ಮೇಲೆ ಸವಾರಿ ಮಾಡುವ ಇಂತಹ ಘಟನೆಗಳಿಂದ ಸಾರ್ವತ್ರಿಕ ತಿರಸ್ಕಾರಕ್ಕೆ ಮತ್ತು ಅವಗಣನೆಗೆ ಸಮುದಾಯವೊಂದು ಪದೇಪದೇ ಗುರಿಯಾಗುತ್ತಿರುವುದು ಸ್ವಯಂಕೃತ ಅಪರಾಧವಲ್ಲದೆ ಬೇರೇನಿಲ್ಲ. ಈ ಘಟನೆ ಪೂರ್ವಯೋಜಿತ ಸಂಚು ಎಂಬ ಅನುಮಾನಕ್ಕೂ ಪುಷ್ಟಿ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳ ಸ್ವಜನಪಕ್ಷಪಾತ, ಅಧಿಕಾರ ಲಾಲಸೆಗಳಿಂದಾಗಿ ಇಂಥದೊಂದು ಸಣ್ಣ ಕಿಡಿ ಬೆಂಕಿಯುಂಡೆ ಆಗುವ ಮೂಲಕ ಅಮಾಯಕ ಜನರ ಸಿಟ್ಟು-ಸೆಡವು ಸ್ಫೋಟಗೊಂಡಿದೆ. ನಿರುಪದ್ರವಿಗಳ ರಕ್ತ ಚೆಲ್ಲಾಡಿದೆ. ಕೌಟುಂಬಿಕ ದ್ವೇಷಾಸೂಯೆಗಳು ದುರ್ವರ್ತನೆಗೆ ವೇದಿಕೆಯಾಗಿರುವುದು ಸುಳ್ಳಲ್ಲ.
“ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಸೌಜನ್ಯದ ಆಜ್ಞೆ ನೀಡುತ್ತಾನೆ. ಮತ್ತು ಅಶ್ಲೀಲಕಾರ್ಯ, ದುಷ್ಕೃತ್ಯ, ಅಕ್ರಮ, ಅತ್ಯಾಚಾರಗಳನ್ನು ನಿಷೇಧಿಸುತ್ತಾನೆ. ನೀವು ಜಾಗೃತರಾಗಲಿಕ್ಕಾಗಿ ಅವನು ನಿಮಗೆ ಉಪದೇಶ ನೀಡುತ್ತಾನೆ. ಎಂಬ ಕುರಾನ್ ಆಲ್ ಹಿಜ್ರ್ 15ರ ಸಂದೇಶವನ್ನು ಪ್ರಸ್ಥಾಪಸಿದರು.
ಬೆಂಗಳೂರಿನಲ್ಲಿನ ಗಲಭೆ ಪ್ರಕರಣ ತೀವ್ರ ಖಂಡನೀಯ. ಸಮಾಜದ ಸ್ವಾಸ್ಥ್ಯ ಕದಡುವುದರಿಂದ ಯಾರಿಗೂ ಉಪಯೋಗವಿಲ್ಲ, ಎಲ್ಲರಿಗೂ ನಷ್ಟ. ಪ್ರಚೋದನೆ ಮಾಡುವುದು ತಪ್ಪು, ಪ್ರಚೋದಿತರಾಗಿ ಸಾರ್ವಜನಿಕರು, ಪೊಲೀಸರು, ಪತ್ರಕರ್ತರು ಹೀಗೆ ಎಲ್ಲರ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡುವುದೂ ತಪ್ಪು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.