Advertisement

ಬೆಳಗ್ಗೆ ಕಿಡಿಕಾರಿ ಸಂಜೆ ವಿಷಾದಿಸಿದ ಪರಂ

12:20 PM Sep 27, 2018 | Team Udayavani |

ಬೆಂಗಳೂರು: ಶೂನ್ಯ ಸಂಚಾರ (ಜೀರೋ ಟ್ರ್ಯಾಫಿಕ) ವ್ಯವಸ್ಥೆ ವಿರುದ್ಧ ವರದಿ ಮಾಡಿದ ಕಾರಣಕ್ಕೆ ಬುಧವಾರ ಬೆಳಗ್ಗೆ ಮಾಧ್ಯಮಗಳ ಮೆಲೆ ಕಿಡಿ ಕಾರಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಂಜೆ ವೇಳೆಗೆ ಟ್ವೀಟ್‌ ಮೂಲಕ ವಿಷಾದ ವ್ಯಕ್ತಪಡಿಸಿದ ಘಟನೆ ನಡೆದಿದೆ.

Advertisement

ವಸಂತ ನಗರದ ಮಿಲ್ಲರ್ ರಸ್ತೆಯ ಜಂಕ್ಷನ್‌ನಲ್ಲಿ ನಿರ್ಮಿಸಿರುವ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬುಧವಾರ ಬೆಳಗ್ಗೆ ಡಾ.ಜಿ.ಪರಮೇಶ್ವರ ಪಾಲ್ಗೊಂಡಿದ್ದರು. ಈ ವೇಳೆ “ಗೃಹ ಸಚಿವರಿಗೆ ಶೂನ್ಯ ಸಂಚಾರ ವ್ಯವಸ್ಥೆ ಕಲ್ಪಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪವಿದೆಯಲ್ಲಾ,’ ಎಂದು ಮಾಧ್ಯಮ ಪ್ರತಿನಿದಿಗಳು ಸಚಿವರನ್ನು ಪ್ರಶ್ನಿಸಿದರು. ಆಗ ಪರಮೇಶ್ವರ ಸಿಡುಕುತ್ತಲೇ ಉತ್ತರಿಸಿದರು.

ನಿಮಗೇಕೆ ಹೊಟ್ಟೆ ಉರಿ?: “ಹೌದು ನನಗೆ ಇರುವ ಅವಕಾಶ ಬಳಸಿಕೊಳ್ಳುತ್ತಿದ್ದೇನೆ. ಮಾಧ್ಯಮಗಳಿಗೇಕೆ ಹೊಟ್ಟೆ ಉರಿ’ ಎಂದು ಪ್ರಶ್ನಿಸಿದ ಡಿಸಿಎಂ, “ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರು ಸೇರಿ ಹಲವು ಗಣ್ಯರಿಗೆ ಜೀರೋ ಟ್ರ್ಯಾಫಿಕ ವ್ಯವಸ್ಥೆ ಇದೆ. ಹಿಂದಿನ ಗೃಹ ಸಚಿವರು ಇದನ್ನು ಬೇಡ ಎಂದಿದ್ದರು. ಆದರೆ, ನಾನು ಅದನ್ನು ಬಳಸಿಕೊಳ್ಳುತ್ತಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ಈ ಹೇಳಿಕೆ ನೀಡಿದ ನಂತರ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಒಂದು ಟ್ವೀಟ್‌ ಹರಿಬಿಟ್ಟ ಪರಮೇಶ್ವರ್‌, “ಜೀರೋ ಟ್ರ್ಯಾಫಿಕ ನಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿರುವುದಕ್ಕೆ ವಿಷಾದಿಸುತ್ತೇನೆ. ಆದರೆ, ಪ್ರತಿ ನಿತ್ಯ ಸರ್ಕಾರದ ಹತ್ತಾರು ಕಾರ್ಯಕ್ರಮಗಳು, ಸಭೆಗಳು ಇರುವುದರಿಂದ ಸಮಯ ಪಾಲನೆ ಅನಿವಾರ್ಯ. ಸಾಧ್ಯವಾದಷ್ಟು, ಟ್ರ್ಯಾಫಿಕ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಪೋಲಿಸರಿಗೆ ಸೂಚಿಸಿದ್ದೇನೆ,’ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಇದಕ್ಕೂ ಮುನ್ನ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಪ್ರತಿಮೆ ಅನಾವರಣಗೊಳಿಸಿದ ಅವರು, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಅವರ ಗುಣಗಾನ ಮಾಡಿದರು. ಈ ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸಿರುವ ಕಾರ್ಯಪ್ಪ ಅವರು, ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಮಿಲ್ಲರ್ ರಸ್ತೆ ಜಂಕ್ಷನ್‌ಗೆ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಅವರ ಹೆಸರಿಡುವ ಬಗ್ಗೆ ಕೊಡವ ಸಮಾಜ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದು,ª ಈ ಬಗ್ಗೆ ಸರ್ಕಾರ ಸಕಾರತ್ಮಕ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್‌, ಮೇಯರ್‌ ಸಂಪತ್‌ ರಾಜ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next