ಅಫಜಲಪುರ: 2022ರ ಸಾಲಿನಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಈ ಬಾರಿಯೂ ಮುಂಗಾರು ಹಂಗಾಮಿನಲ್ಲಿ ಶೇ. 19 ಪ್ರತಿಶತದಷ್ಟು ಬೆಳೆ ಹಾನಿಯಾಗಿದೆ.
ತಾಲೂಕಿನ ಗೊಬ್ಬೂರ(ಬಿ), ಅತನೂರ, ಅಫಜಲಪುರ, ಕರ್ಜಗಿ ವಲಯಗಳಲ್ಲಿ ಮಳೆ ಹೆಚ್ಚಾಗಿದ್ದರಿಂದ ಬೆಳೆಗಳೆಲ್ಲ ಹಾಳಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಈಗ ಆಘಾತ ಉಂಟಾಗಿದೆ.
ರೈತರ ಕಣ್ಣೀರು ಒರೆಸುವವರು ಯಾರು?: ಪ್ರತಿ ವರ್ಷ ವ್ಯಾಪಕ ಮಳೆ, ಬರಗಾಲ ದಿಂದಾಗಿ ಬೆಳೆಗಳು ಹಾಳಾಗುತ್ತಿವೆ. ಆದರೆ ರೈತರಿಗೆ ಪುಡಿಗಾಸಿನಷ್ಟು ಪರಿಹಾರ ಸಿಗುತ್ತಿಲ್ಲ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಶೇ.50 ಹತ್ತಿ, ಶೇ. 24.2 ತೊಗರಿ ಹಾಳು: ತಾಲೂಕಿನಾದ್ಯಂತ 1.30.479 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದೆ. 1.10.590 ಹೆಕ್ಟೇರ್ ಬಿತ್ತನೆಯಾಗಿದೆ. ಇದರಲ್ಲಿ 20.227 ಹೆಕ್ಟೇರ್ ಮುಂಗಾರು ಹಂಗಾಮಿನ ಬೆಳೆಗಳು ಹಾಳಾಗಿವೆ. ಅದರಲ್ಲೂ ಶೇ.50 ಹತ್ತಿ, ಶೇ. 24.2 ಪ್ರತಿಶತದಷ್ಟು ತೊಗರಿ ಬೆಳೆ ಹಾಳಾಗಿವೆ. 110 ಹೆಕ್ಟೇರ್ ಹೆಸರು, 112 ಹೆಕ್ಟೇರ್ ಉದ್ದು, 3504 ಹೆಕ್ಟೇರ್ ಹತ್ತಿ, 16,066 ಹೆಕ್ಟೇರ್ ತೊಗರಿ, 265 ಹೆಕ್ಟೇರ್ ಮೆಕ್ಕೆಜೋಳ, 24 ಹೆಕ್ಟೇರ್ ಸೋಯಾಬಿನ್ ಬೆಳೆಗಳೆಲ್ಲ ಸೇರಿ ಒಟ್ಟು ಶೇ. 19 ಪ್ರತಿಶತದಷ್ಟು, ಸೂರ್ಯಕಾಂತಿ196ಹೆಕ್ಟೇರ್ ಬೆಳೆ ಹಾಳಾಗಿದೆ.
ವಾಡಿಕೆಗಿಂತ ಹೆಚ್ಚಿನ ಮಳೆ: ತಾಲೂಕಿನಾ ದ್ಯಂತ ವಾಡಿಕೆ ಮಳೆ ಜನವರಿಯಿಂದ ಸೆಪ್ಟೆಂಬರ್ 21ರ ವರೆಗೆ 507.7 ಮಿ.ಮೀ ಆಗಬೇಕಿಗಿತ್ತು. ಆದರೆ 649.8 ಮಿ.ಮೀ ಮಳೆ ದಾಖಲಾಗುವ ಮೂಲಕ ಶೇ. 28% ಪ್ರತಿಶತದಷ್ಟು ಹೆಚ್ಚಾಗಿದೆ. ಜೂನ್ 1ರಿಂದ 30ರ ವರೆಗೆ 97 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ 65 ಮಿ.ಮೀ ಮಾತ್ರ ಮಳೆಯಾಗಿ ಶೇ. 33 ರಷ್ಟು ಕೊರತೆಯಾಗಿತ್ತು. ಹೀಗಾಗಿ ಬಿತ್ತನೆಗೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ ನಂತರದ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ದಾಖಲಾಗಿ ಬಿತ್ತಿದ ಬೆಳೆಗಳೆಲ್ಲ ನೀರಿಗೆ ಆಹುತಿಯಾಗುವಂತೆ ಆಗಿದೆ. ಒಟ್ಟಾರೆ ಹವಾಮಾನ ವರದಿ ನೋಡಿದಾಗ ಜೂನ್ ತಿಂಗಳಲ್ಲಿ ಶೇ.33ಪ್ರತಿಶತ ಮಳೆ ಕೊರತೆಯಾದರೂ ಇಲ್ಲಿಯವರೆಗೆ ಒಟ್ಟು ಶೇ.108 ಪ್ರತಿಶತದಷ್ಟು ಮಳೆ ಹೆಚ್ಚಾಗಿದೆ.
ಈಗಾಗಲೇ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿ ಬೆಳೆ ಹಾನಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಸರ್ಕಾರದಿಂದ ಬರುವ ಪರಿಹಾರ ನೇರವಾಗಿ ರೈತರ ಖಾತೆಗೆ ಪಾವತಿ ಆಗಲಿದೆ.
–ಎಸ್.ಎಚ್ ಗಡಗಿಮನಿ, ಸಹಾಯಕ ಕೃಷಿ ನಿರ್ದೇಶಕ, ಅಫಜಲಪುರ
-ಮಲ್ಲಿಕಾರ್ಜುನ ಹಿರೇಮಠ