ಮಂಗಳೂರು: ಮಂಗಳೂರು ನಗರದಲ್ಲಿ ಕಳೆದ ಒಂದೂವರೆ ದಶಕದಿಂದ ಮಾದಕ ವಸ್ತುಗಳ ದಂಧೆ ನಡೆಯುತ್ತಿದ್ದು, 7 ವರ್ಷಗಳ ಹಿಂದೆ ಪದವಿಪೂರ್ವ ತರಗತಿಯ ವಿದ್ಯಾರ್ಥಿನಿಯೊಬ್ಬಳು ಡ್ರಗ್ಸ್‌ಗೆ ಬಲಿಯಾಗಿರುವುದು ಈಗ ಇತಿಹಾಸ. ಈ ಪಿಡುಗಿನ ಬಗ್ಗೆ ಸಾಕಷ್ಟು ಜಾಗೃತಿ ಅಭಿಯಾನಗಳು ನಡೆದಿದ್ದರೂ ಡ್ರಗ್ಸ್ ವ್ಯವಹಾರಕ್ಕೆ ಕಡಿವಾಣ ಬಿದ್ದಿಲ್ಲ. ಈಗಲೂ ಅದು ಎಗ್ಗಿಲ್ಲದೆ ಮುಂದುವರಿದಿದೆ.
ಡ್ರಗ್ಸ್ ಸೇವನೆಯಿಂದ ವ್ಯಕ್ತಿ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಒದಗಿಸುವ ಕಾರ್ಯ ಪೊಲೀಸ್ ತಂಡದಿಂದ ಪ್ರತಿ ವರ್ಷ ನಡೆಯುತ್ತಿದೆ. ವಿವಿಧ ಸಂಘ-ಸಂಸ್ಥೆಗಳು ಜಾಗೃತಿ ಸಭೆ, ಬೀದಿ ನಾಟಕಗಳನ್ನು ನಡೆಸಿವೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿ ವಿದ್ಯಾರ್ಥಿಗಳನ್ನು ಎಚ್ಚರಿಸುವ ಕೆಲಸ ಮಾಡಿದೆ.
2011ರಲ್ಲಿ ಡ್ರಗ್ಸ್ ಸೇವನೆಯ ಹವ್ಯಾಸ ಮೈಗೂಡಿಸಿಕೊಂಡಿದ್ದ ವಿದ್ಯಾರ್ಥಿನಿಯೋರ್ವಳನ್ನು ಮುಂಬಯಿಗೆ ಕರೆದೊಯ್ಯುವ ಯತ್ನ ಬೆಳಕಿಗೆ ಬಂದಾಗ ಬಹಳಷ್ಟು ಜಾಗೃತಿ ಕಾರ್ಯಕ್ರಮಗಳು ನಡೆದಿದ್ದವು. ಡ್ರಗ್ಸ್ ವ್ಯವಹಾರ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆಯಂತಹ ಕಠಿನ ಕ್ರಮ ಜರಗಿಸುವುದಾಗಿ ಆಗ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದರು. ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳಿಂದ ಡಿಬಾರ್ ಅಥವಾ ಅಮಾನತುಗೊಂಡ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಿದ್ದರು.
ಇಷ್ಟೆಲ್ಲ ಕ್ರಮಗಳು ಆಗಿದ್ದರೂ ಡ್ರಗ್ಸ್ ದಂಧೆಗೆ ಕಡಿವಾಣ ಬಿದ್ದಿರಲಿಲ್ಲ. 2013ರ ಫೆ. 3ರಂದು ಪದವಿನಂಗಡಿಯ ನಿವಾಸಿ, ಪದವಿಪೂರ್ವ ವಿದ್ಯಾರ್ಥಿನಿ ಡ್ರಗ್ಸ್ ಗುಂಗಿನಿಂದ ಹೊರ ಬರಲಾಗದೆ ಬೆಡ್‌ರೂಂನಲ್ಲಿ ನೇಣಿಗೆ ಶರಣಾದ ಘಟನೆ ಸಂಭವಿಸಿ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಈ ಬಗ್ಗೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದನ್ನು ಹೊರತುಪಡಿಸಿದರೆ ಹೆಚ್ಚೇನೂ ಆಗಿಲ್ಲ.
ಈ ಘಟನೆಯಿಂದ ಮತ್ತೂಮ್ಮೆ ಜಿಲ್ಲೆಯ ಜನರಲ್ಲಿ ಡ್ರಗ್ಸ್ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಜನ ಜಾಗೃತಿ ಸಭೆಗಳು ನಡೆದಿದ್ದವು. ಪೊಲೀಸರು ಕೆಲವು ಶಿಕ್ಷಣ ಸಂಸ್ಥೆಗಳ ಆಸುಪಾಸಿನ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ್ದರು. ಆದರೆ ಆಗ ಅವರಿಗೆ ಸಿಕ್ಕಿದ್ದು, ಬೀಡಿ, ಸಿಗರೇಟು ಮಾತ್ರ; ಗಾಂಜಾ ಮತ್ತಿತರ ಮಾದಕ ದ್ರವ್ಯಗಳು ಎಲ್ಲಿಯೂ ಪತ್ತೆ ಆಗಿರಲಿಲ್ಲ. ಸುಮಾರು ಒಂದು ತಿಂಗಳು ಕಾಲ ಜಿಲ್ಲಾಡಳಿತ ಸ್ವಲ್ಪ ಹೆಚ್ಚು ಜಾಗೃತ ಸ್ಥಿತಿಯಲ್ಲಿತ್ತು. ಇದೀಗ ಬೆಂಗಳೂರಿನ ಡ್ರಗ್ಸ್ ಪ್ರಕರಣದಿಂದಾಗಿ ಮಂಗಳೂರಿನ ಡ್ರಗ್ಸ್ ವ್ಯವಹಾರವೂ ಮುನ್ನೆಲೆಗೆ ಬಂದಿದೆ.
ಕೋವಿಡ್ ಸಂಕಟ ಆರಂಭವಾದ ಬಳಿಕ ಡ್ರಗ್ಸ್ ಜಾಗೃತಿ ಕಾರ್ಯಕ್ರಮಗಳಿಗೆ ತಡೆ ಬಿದ್ದಿದೆ. ಅಲ್ಲದೆ ಈಗ ಶಾಲಾ ಕಾಲೇಜುಗಳೂ ತೆರೆದಿಲ್ಲ. ಜನ ಸೇರಿಸಿ ಕಾರ್ಯಕ್ರಮ ನಡೆಸಲು ಅವಕಾಶವೂ ಇಲ್ಲ. ಶಾಲಾ ಕಾಲೇಜು ಆರಂಭವಾದ ಬಳಿಕ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಡ್ರಗ್ಸ್ ಸಂಬಂಧಿತ ದಾಳಿ ಕಾರ್ಯಾಚರಣೆ ನಿರಂತರ ನಡೆಯಲಿದೆ.
– ವಿಕಾಸ್ ಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು