Advertisement
ಬೆಳಗ್ಗಿನ ಜಾವ ಎರಡು ಗಂಟೆಗೆ ಎದ್ದು ಕನಿಷ್ಠ ತಾಪಮಾನದಲ್ಲಿ ತಣ್ಣೀರಲ್ಲೇ ತಲೆಸ್ನಾನವನ್ನು ಮಾಡೋವಾಗ ಕೇದಾರನಾಥನ ಧ್ಯಾನವೊಂದೇ ನೆರವಾದದ್ದು. ನಾಲ್ಕೂವರೆ ಗಂಟೆಗೆ ಸೀತಾಪುರದಿಂದ 8 ಕಿ.ಮೀ. ದೂರದ ಗೌರಿಕುಂಡಕ್ಕೆ ಜೀಪ್‌ನಲ್ಲಿ ತಲುಪಿದಾಗ ಡೋಲಿ, ಫೋನಿಗೋಸ್ಕರ ನೂಕುನುಗ್ಗಲು ಆರಂಭವಾಗಿತ್ತು. ಹೆಲಿಕಾಪ್ಟರ್ ಮೂಲಕ ದೇವಸ್ಥಾನಕ್ಕೆ ಹೋಗಲು ಸೀತಾಪುರದಿಂದ ಫಟಾಗೆ ತೆರಳಬೇಕಿದ್ದು, ಅದೇ ದಿನ ವಾಪಸಾಗಲು ಅನುಕೂಲವಾಗಲೆಂದು 2100 ರೂಪಾಯಿ ಪಾವತಿಸಿ ವಿಶೇಷ ದರ್ಶನ ಪಡೆಯೋ ಏರ್ಪಾಡು ಮಾಡಲಾಗಿತ್ತು.
ಕೇದಾರನಾಥ ದೇವಾಲಯಕ್ಕೆ ತಲುಪಲು ಕೊನೆಯ ಒಂದೂವರೆ ಕಿ.ಮೀ. ನಡೆದುಕೊಂಡೇ ಸಾಗಬೇಕು. ಆಮ್ಲಜನಕದ ಕೊರತೆಯಿಂದ ಉಸಿರಾಟದ ಸಮಸ್ಯೆ, ತಲೆನೋವು, ವಾಕರಿಕೆ ಕಾಡಬಹುದು. ಕರ್ಪೂರ ಆಘ್ರಾಣಿಸೋದು ಈ ಸಮಸ್ಯೆಗಳಿಗೆ ಹಿತಕರ. ಯಾತ್ರಿಕರ ಅನುಕೂಲಕ್ಕೆ ಬಯೋ ಟಾಯ್ಲೆಟ್ಸ್ , ಯಾತ್ರಿ ನಿವಾಸಗಳು, ಟೆಂಟ್ಸ್, ಹೆಲಿ ಟಿಕೆಟ್ ಬುಕ್ಕಿಂಗ್ ಕೌಂಟರ್, ಮೆಡಿಕಲ್ ರಿಲೀಫ್ ಪೋಸ್ಟ್ ಬೇಸ್ ಕ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ದುಬಾರಿ ಬೆಲೆಗೆ ನೀರು, ಚಹಾ, ಬಿಸ್ಕಟ್ಟು, ಸ್ನ್ಯಾಕ್ಸ್ ಕೂಡ ಲಭ್ಯವಿದೆ. ದೇವರ ಪೂಜೆಗೆ ನಾನಾ ದರದ ಥಾಲಿಗಳು, ಪೂಜಾ ಸಾಮಗ್ರಿಗಳು, ಪುಸ್ತಕ ಚಿತ್ರಗಳು ಇತ್ಯಾದಿ ತಾತ್ಕಾಲಿಕ ನೆಲೆಯಲ್ಲಿ ತೆರೆದ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿದ್ದಾರೆ.
Related Articles
Advertisement
ದೇವಸ್ಥಾನದ ಹೊರ ಆವರಣದಲ್ಲಿದ್ದ ಕುಂಡಗಳು, ತೀರ್ಥಗಳು, ಶಂಕರಾಚಾರ್ಯರ ಸಮಾಧಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು ಅದರ ಅಸ್ತಿತ್ವದ ಕುರುಹುಗಳು ಸಹ ಕಾಣೆಯಾಗಿವೆ. ದೇವಸ್ಥಾನವನ್ನು ಪ್ರವಾಹದಿಂದ ರಕ್ಷಿಸಿದ್ದ ದೊಡ್ಡ ಗಾತ್ರದ ಬಂಡೆ “ಭೀಮ್ ಶಿಲಾ’ ದರ್ಶನ ಮಾಡಿ ಅಲ್ಲೇ ನೆಲೆಸಿದ್ದ ಸಾಧುಗಳಿಗೆ ವಂದಿಸಿ ಅನ್ನಪ್ರಸಾದ ಸ್ವೀಕರಿಸಲು ಪಕ್ಕದಲ್ಲಿದ್ದ ಲಂಗರಿಗೆ ತೆರಳಿದೆವು.
ಮಧ್ಯಾಹ್ನ ಮೂರು ಗಂಟೆಗೆ ಪುನಃ ಮಳೆ ಸುರಿಯಲಾರಂಭಿಸಿದ್ದರಿಂದ ಮಿಂದ ಪರ್ವತ ಶಿಖರಗಳು ಧರೆಯನ್ನು ಸ್ವರ್ಗವನ್ನಾಗಿ ಪರಿವರ್ತಿಸಿದ್ದವು. ದಟ್ಟ ಮಂಜಿನಿಂದ ಹೆಲಿಕಾಪ್ಟರ್ ಯಾನವು ರದ್ದಾಗಿ ಯಾತ್ರಿಗಳು ಕೇದಾರದಲ್ಲೇ ಉಳಿಯಬೇಕಾಗೋ ಪರಿಸ್ಥಿತಿಯು ನಿರ್ಮಾಣವಾಗಬಹುದು. ಮರಗಟ್ಟೋ ಚಳಿಗೆ ಮಳೆಯಲ್ಲಿ ನೆನೆಯುತ್ತಾ ಕುದುರೆ ಏರಿ ಬರೋವಾಗ ತಿರುವುಗಳನ್ನೊಳಗೊಂಡ ಇಡೀ ಕೇದಾರ ಕಣಿವೆಯು ಮಂಜಲ್ಲಿ ಮರೆಯಾಗಿ ಆಕಾಶ ಪಾತಾಳದ ಭೇದವನ್ನೇ ತೊಡೆದುಹಾಕಿತ್ತು. ಬದಿಯಲ್ಲಿದ್ದ ಪ್ರಪಾತವು ಅದೃಶ್ಯವಾಗಿ ಮೈಯೆಲ್ಲ ನಡುಕ ಹುಟ್ಟಿಸುತ್ತಿತ್ತು. ಮಳೆಯಲ್ಲಿ ನೆನೆದ ಮಣ್ಣಿನ ರಸ್ತೆಯಲ್ಲಿ ಅತ್ತ ಕುದುರೆಗೆ ಕಾಲು ಜಾರೋವಾಗ ಇತ್ತ ಹೃದಯದ ತಾಳ ತಪ್ಪಿದ ಅನುಭವ. ಅಂತೂ “ಓಂ ನಮಃ ಶಿವಾಯ’ ನಾಮಜಪದೊಂದಿಗೆ 16 ಕಿ.ಮೀ. ದೂರದ ಗಿರಿಕಂದಕಗಳ ಮಧ್ಯದ ದಾರಿ ಸುರಕ್ಷಿತವಾಗಿ ಸಾಗಿ ಇಳಿದದ್ದು ಕೇದಾರನಾಥನ ಶ್ರೀರಕ್ಷೆಯಿಂದಲೇ.
– ದೀಪಾ ಎಸ್. ನಾಯಕ್