ಏಲಕ್ಕಿ ಕಂಪಿನ ನಗರ ಎಂದೇ ಎಲ್ಲೆಡೆ ತನ್ನ ಖ್ಯಾತಿಗಳಿಸಿರುವ ಜಿಲ್ಲಾ ಕೇಂದ್ರ ಎನಿಸಿದ ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ ಹಾವೇರಿ ಲೋಕಸಭೆ ಕ್ಷೇತ್ರದ ಚುನಾವಣೆ ರಂಗೇರಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಜೋರಾಗಿದೆ.
ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಒಂದೊಂದು ಬೃಹತ್ ಸಮಾವೇಶ ಮಾಡಿವೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ನಡೆಸಿದ ಸಮಾವೇಶದಲ್ಲಿಯೂ ಪಕ್ಷದಲ್ಲಿಯೂ ಮುಖಂಡರು ಭಾಗಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ , ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ಈಶ್ವರ ಖಂಡ್ರೆ, ಎಚ್.ಕೆ. ಪಾಟೀಲ, ಸಿ.ಎಂ. ಇಬ್ರಾಹಿಂ ಸೇರಿದಂತೆ ಇನ್ನಿತರ ರಾಜ್ಯ ಹಾಗೂ ರಾಷ್ಟ್ರ ನಾಯಕರು ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕ್ಷೇತ್ರ ವ್ಯಾಪ್ತಿಯ ಎಲ್ಲ ಶಾಸಕರು ಬಂದು ಪ್ರಚಾರ ಮಾಡಿದ್ದಾರೆ. ಈಗ ಎರಡೂ ಪಕ್ಷಗಳು ಮನೆಮನೆ ಭೇಟಿ, ಗ್ರಾಮಗಳಲ್ಲಿ ಸಭೆ ನಡೆಸುವ ಮೂಲಕ ಮತಯಾಚನೆಯಲ್ಲಿ ತೊಡಗಿದ್ದಾರೆ.
ಪ್ರಚಾರಾಸ್ತ್ರ: ಕ್ಷೇತ್ರದಲ್ಲಿ ನೀರಾವರಿ ಬೇಡಿಕೆ, ನಗರ, ಪಟ್ಟಣಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದಂಥ ಬೇಡಿಕೆ ಇದ್ದರೂ ಅವುಗಳ ಬಗ್ಗೆ ಯಾವ ಪಕ್ಷಗಳೂ ಹೆಚ್ಚಾಗಿ ಮಾತನಾಡುತ್ತಿಲ್ಲ. ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಾರಿ ಸ್ಥಳೀಯ ವಿಚಾರಗಳಿಗಿಂತ ರಾಷ್ಟ್ರೀಯ ವಿಚಾರಗಳನ್ನೇ ತಮ್ಮ ಪ್ರಚಾರದ ಪ್ರಮುಖ ಅಸ್ತ್ರಗಳನ್ನಾಗಿಸಿಕೊಂಡಿವೆ. ಮೋದಿ ಹಾಗೂ ರಾಹುಲ್ ಕುರಿತು ಟೀಕೆ, ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ತಮ್ಮ ಪಕ್ಷದ ಸರ್ಕಾರಗಳು ಮಾಡಿದ ಸಾಧನೆ, ಪಕ್ಷಗಳ ಪ್ರಣಾಳಿಕೆ, ರಾಜಕೀಯ ಪಕ್ಷಗಳ ಮೇಲಿರುವ ರಾಷ್ಟ್ರೀಯ ಆಪಾದನೆಗಳೇ ಈ ಬಾರಿ ಪ್ರಚಾರದಲ್ಲಿ ಅಗ್ರಸ್ಥಾನ ಪಡೆಯುತ್ತಿವೆ.
ಪ್ರಚಾರದಲ್ಲಿ ಬಿಜೆಪಿ ಈ ಬಾರಿ ರಾಷ್ಟ್ರ ರಕ್ಷಣೆ, ಭದ್ರತೆಗಾಗಿ ಇನ್ನೊಮ್ಮೆ ಮೋದಿ ಪ್ರಧಾನಮಂತ್ರಿಯಾಗಬೇಕು ಎಂದು ಸರ್ಜಿಕಲ್ ಸ್ಟ್ರೈಕ್ ವಿಚಾರ ಪ್ರಸ್ತಾಪ ಮಾಡುತ್ತಿದ್ದರೆ ಕಾಂಗ್ರೆಸ್, ತನ್ನ ಅಧಿಕಾರಾವಧಿಯಲ್ಲಿ ಎಷ್ಟೋ ಸರ್ಜಿಕಲ್
ಸ್ಟ್ರೆ „ಕ್ ನಡೆದರೂ ಅದನ್ನು ಕಾಂಗ್ರೆಸ್ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಬಿಜೆಪಿ ದೇಶದ ರಕ್ಷಣೆ ವಿಚಾರವನ್ನೂ ಚುನಾವಣೆಗೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂಬ ಆರೋಪ ಮಾಡುತ್ತಿದೆ.
ರೈತರ ಚಿಂತನೆ: ಜಿಲ್ಲೆಯಲ್ಲಿ ಮೆಕ್ಕೆಜೋಳ, ಹತ್ತಿ ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದು ಮಳೆಯಾಶ್ರಿತ ಕೃಷಿಯೇ ಹೆಚ್ಚು. ಯಾವುದೇ ದೊಡ್ಡ ಕೈಗಾರಿಕೆಗಳಿಲ್ಲದೇ ಇರುವುದರಿಂದ ಕೃಷಿ ಮೇಲೆಯೇ ಎಲ್ಲರೂ ಅವಲಂಬಿಸಿದ್ದಾರೆ. ಕೃಷಿಕರು ಯಾವ ಪಕ್ಷ ಈ ವರೆಗೆ ರೈತರಿಗೆ ಅನುಕೂಲ ಕಲ್ಪಿಸಿದೆ. ಎರಡೂ ಪಕ್ಷಗಳು ರೈತರ ವಿಚಾರಗಳ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ
ಪ್ರಸ್ತಾಪಿಸಿವೆ. ಹೀಗಾಗಿ ರೈತರು ಯಾವ ಪಕ್ಷವನ್ನು ಬೆಂಬಲಿಸಿದರೆ ರೈತರಿಗೆ ಅನುಕೂಲ ಆಗಬಹುದು ಎಂಬ ಚಿಂತನೆಯಲ್ಲಿ ತೊಡಗಿದ್ದಾರೆ.
ಇದು ಲೋಕಸಭೆ ಚುನಾವಣೆಯಾಗಿದ್ದರೂ ಜನಸಾಮಾನ್ಯರು ಮಾತ್ರ ವಿವಿಧ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿವೆ ಎಂಬುದರ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ಬಂದಿದೆ. ರಸ್ತೆ, ಮನೆಯಂಥ ಸೌಲಭ್ಯಗಳು ಹೆಚ್ಚಾಗಿವೆ ಎಂದು ಬಿಜೆಪಿಯವರು ವಾದಿಸಿದರೆ, ಕಾಂಗ್ರೆಸ್‌ನವರು ಸಹ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ 50 ಕೋಟಿ ವಿಶೇಷ ಅನುದಾನ ಬಂದಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿಯಾಗಿದೆ ಎಂಬ ವಾದ ಮಂಡಿಸುತ್ತಿದ್ದಾರೆ. ಎರಡೂ ಪಕ್ಷಗಳ ವಾದಗಳನ್ನು ಆಲಿಸುತ್ತಿರುವ ಕ್ಷೇತ್ರದ ಮತದಾರ ಯಾರಿಗೆ ಮಣೆ ಹಾಕುತ್ತಾನೆ ಎಂಬುದು ನಿಗೂಢ.
ಜಾತಿ ಲೆಕ್ಕಾಚಾರ: ಜಾತಿ ಲೆಕ್ಕಾಚಾರ ಹಾಕಿದರೆ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕ ಪಾತ್ರವಹಿಸುತ್ತಾರೆ. ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಪ್ರಬಲ ರಾಷ್ಟ್ರೀಯ ಪಕ್ಷಗಳಿಂದ ಲಿಂಗಾಯತ ಅಭ್ಯರ್ಥಿಗಳೇ ಕಣದಲ್ಲಿ ಉಳಿದಿದ್ದು ಲಿಂಗಾಯತರ ನಡುವೆ ಸ್ಪರ್ಧೆ ಏರ್ಪಟ್ಟಂತಾಗಿದೆ.
ಕಳೆದ 2013ರ ವಿಧಾನಸಭೆ ಚುನಾವಣೆ ವೇಳೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ರುದ್ರಪ್ಪ ಲಮಾಣಿ ಆಯ್ಕೆಯಾಗಿದ್ದರು. 2018ರ ವಿಧಾನಸಭೆ ಚುನಾವಣೆ ವೇಳೆಗೆ ಮತದಾರ ಪಕ್ಷ ಬದಲಿಸಿದ್ದು ಕ್ಷೇತ್ರದಲ್ಲಿ ಕಮಲ ಅರಳಿ, ನೆಹರು ಓಲೇಕಾರ ಶಾಸಕರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಯವರಿಗೆ ಶಕ್ತಿ ತುಂಬಲು ಶಾಸಕ ನೆಹರು ಓಲೆಕಾರ ಹಾಗೂ ಪಕ್ಷದ ಜಿಲ್ಲಾ ಮುಖಂಡರು ಕ್ಷೇತ್ರದಲ್ಲಿ ಮಿಂಚಿನ ಮತಬೇಟೆಯಲ್ಲಿ ತೊಡಗಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಅವರನ್ನು ಗೆಲ್ಲಿಸಲು ಎಚ್. ಕೆ. ಪಾಟೀಲ, ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ ಆದಿಯಾಗಿ ಕ್ಷೇತ್ರದ ಎಲ್ಲ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವೇರಿದ್ದು ಫಲಿತಾಂಶ ಕುತೂಹಲ ಕೆರಳಿಸಿದೆ.