Advertisement

ಶ್ರೀಕೃಷ್ಣನ ನಾಡಲ್ಲಿ ಸ್ತ್ರೀ ಪಾರುಪತ್ಯ

12:30 AM Feb 22, 2019 | Team Udayavani |

ಉಡುಪಿ: ನೂತನ ಎಸ್‌ಪಿಯಾಗಿ ನಿಶಾ ಜೇಮ್ಸ್‌ ನೇಮಕಗೊಂಡಿದ್ದಾರೆ. ಸದ್ಯ ಜಿಲ್ಲಾಧಿಕಾರಿ ಹುದ್ದೆಯಿಂದ ತಾ.ಪಂ. ಅಧ್ಯಕ್ಷರ ವರೆಗೆ ಜಿಲ್ಲೆಯಲ್ಲಿ ಮಹಿಳೆಯರದ್ದೇ ಪಾರುಪತ್ಯ. ಜತೆಗೆ ಉಸ್ತುವಾರಿ ಸಚಿವೆ ಜಯಮಾಲಾ ಅವರ ನೇತೃತ್ವ. 

Advertisement

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿ.ಪಂ. ಸಿಇಒ ಸಿಂಧೂ ರೂಪೇಶ್‌, ಎಸ್‌ಪಿ ನಿಶಾ ಜೇಮ್ಸ್‌, ಎಡಿಸಿ ವಿದ್ಯಾಕುಮಾರಿ, ಉಸ್ತುವಾರಿ ಸಚಿವೆ ಡಾ| ಜಯಮಾಲಾ, ಸಂಸದೆ ಶೋಭಾ ಕರಂದ್ಲಾಜೆ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ ಹೀಗೆ ಉನ್ನತ ಸ್ಥಾನಗಳಲ್ಲಿ ಮಹಿಳೆಯರಿದ್ದಾರೆ. ಜತೆಗೆ ಜಿಪಂನಲ್ಲಿ 11 ಮಂದಿ ಸದಸ್ಯಯರಿದ್ದಾರೆ. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್‌., ಜಿಲ್ಲಾ ಆರೋಗ್ಯಾಧಿಕಾರಿ ಡಾ|ರೋಹಿಣಿ , ಜಿ.ಪಂ. ಡಿಆರ್‌ಡಿಎ ಯೋಜನಾ ನಿರ್ದೇಶಕಿ ನಯನಾ ಹೀಗೆ ರಾಜಕೀಯ ಮತ್ತು ಸರಕಾರಿ ಇಲಾಖೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮಹಿಳೆಯರು ಮಿಂಚುತ್ತಿದ್ದಾರೆ.

ಆಡಳಿತ ಸುಧಾರಣೆ ನಿರೀಕ್ಷೆ
ರಾಜಕೀಯದಲ್ಲಿ ಮಹಿಳಾ ಪ್ರಾಬಲ್ಯಕ್ಕೆ ಉಡುಪಿ ಜಿಲ್ಲೆ ನಿದರ್ಶನವಾಗಿದೆ. ಆಡಳಿತ ಸುಧಾರಣೆಯಲ್ಲಿ ಮತ್ತಷ್ಟು ನಿರೀಕ್ಷೆಗಳು ಗರಿಗೆದರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. 

ಸಾಕ್ಷರತೆ ಪ್ರಮಾಣವೂ ಹೆಚ್ಚಳ
ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣವೂ ಹೆಚ್ಚಿದೆ. 2011ರ ಸರ್ವೆ ಪ್ರಕಾರ ಸುಮಾರು ಒಟ್ಟು ಶೇ. 86.24ರಷ್ಟು ಸಾಕ್ಷರತೆ ಪ್ರಮಾಣವಿದ್ದು, ಮಹಿಳಾ ಸಾಕ್ಷರತೆ ಶೇ.81.58ರಷ್ಟಿದೆ. 2001ರಲ್ಲಿ ಸಾಕ್ಷರತೆ 75.19ರಷ್ಟು ಇತ್ತು. 10 ವರ್ಷದಲ್ಲಿ 4.66ರಷ್ಟು ಸಾಕ್ಷರತೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2021ರ ಜನಗಣತಿಯಲ್ಲಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಹೊಸ ಎಸ್‌ಪಿ ನಿಶಾ ಜೇಮ್ಸ್‌
ಉಡುಪಿ:
ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಮಂದಿ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದ್ದು, ಉಡುಪಿ ಎಸ್‌ಪಿ ಆಗಿ ನಿಶಾ ಜೇಮ್ಸ್‌ ಅವರನ್ನು ನಿಯುಕ್ತಿ ಗೊಳಿಸಲಾಗಿದೆ. ಹಾಲಿ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರನ್ನು ಬೆಂಗಳೂರಿನ ನಿಸ್ತಂತು ವಿಭಾಗದ ಎಸ್‌ಪಿಯನ್ನಾಗಿ ನಿಯುಕ್ತಿಗೊಳಿಸಲಾಗಿದೆ. ಇವರೀರ್ವರು ಇನ್ನಷ್ಟೇ ಅಧಿಕಾರ ಸ್ವೀಕರಿಸಬೇಕಾಗಿದೆ.

Advertisement

ಮೂಲತಃ ಕೇರಳದವರಾಗಿರುವ ನಿಶಾ ಜೇಮ್ಸ್‌, 2013ರ ಐಪಿಎಸ್‌ ಬ್ಯಾಚ್‌ನ ಅಧಿಕಾರಿ. ಚಿತ್ರದುರ್ಗ, ಸಾಗರದಲ್ಲಿ ಎಎಸ್‌ಪಿಯಾಗಿ, ಬೆಂಗಳೂರು ಗುಪ್ತದಳ, ರಾಯಚೂರು ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಕೆಎಸ್‌ಆರ್‌ಪಿಯ 4ನೇ ಬೆಟಾಲಿಯನ್‌ನ ಕಮಾಂಡೆಂಟ್‌ ಆಗಿದ್ದಾರೆ.
 
ಮಹತ್ವದ ಪ್ರಕರಣ ನಿಭಾಯಿಸಿದ ನಿಂಬರಗಿ
2018ರ ಜ.1ರಂದು ಉಡುಪಿ ಜಿಲ್ಲಾ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಲಕ್ಷ್ಮಣ ಬ. ನಿಂಬರಗಿ ಅವರು ಶೀರೂರು ಶ್ರೀಗಳ ಅಸಹಜ ಸಾವು, ಹಿರಿಯಡಕದಲ್ಲಿ ಹುಸೈನಬ್ಬ ಕೊಲೆ ಪ್ರಕರಣ, ಕೋಟದ ಅವಳಿ ಕೊಲೆ ಪ್ರಕರಣಗಳನ್ನು ನಿಭಾಯಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next