Advertisement

ಚುಕ್ಕಿ ಚಂದ್ರಮನ ನಾಡಿನಲ್ಲಿ…

11:54 PM Aug 22, 2023 | Team Udayavani |

ಬೆಂಗಳೂರು:  ಬುಧವಾರ ಸಂಜೆ 6.04 ಗಂಟೆ-ಇದು ಭಾರತವು ಚಂದ್ರನನ್ನು ಚುಂಬಿಸುವ ಹೊತ್ತು.

Advertisement

ಹೌದು, ಇಡೀ ಜಗತ್ತು ಎದುರು ನೋಡುತ್ತಿರುವ ಐತಿಹಾಸಿಕ ಕ್ಷಣಗಳಿಗೆ ಈಗ ಕೆಲವೇ ಗಂಟೆಗಳು ಬಾಕಿ. ಬುಧವಾರ (ಆ. 23) ಸಂಜೆ 6.04ರ ಸುಮಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಮೊದಲ ಹೆಜ್ಜೆಗುರುತು ಮೂಡಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಳಿ ಈಗ ಒಂದೆಡೆ ಅನುಭವದಿಂದ ಕಲಿತ ಪಾಠ ಇದೆ. ಮತ್ತೂಂದೆಡೆ “ಚಂದ್ರಯಾನ-1′ ಯಶಸ್ಸಿನ ಆತ್ಮವಿಶ್ವಾಸವೂ ಇದೆ. ಇವೆರಡರ ಸಮರ್ಪಕ ವಿನಿಯೋಗದೊಂದಿಗೆ ಚಂದ್ರನ ಮೇಲೆ “ವಿಕ್ರಮ್‌’ ಲ್ಯಾಂಡರ್‌ ಅನ್ನು ಇಳಿಸುವ ಕಸರತ್ತು ನಡೆಸಿದೆ.

ಎರಡು ದಿನಗಳ ಹಿಂದಷ್ಟೇ ಅದೇ ದಕ್ಷಿಣ ಧ್ರುವದಲ್ಲಿ ಇಂತಹದ್ದೇ ಪ್ರಯತ್ನ ನಡೆಸುವ ರಷ್ಯಾದ ಯತ್ನ ವಿಫ‌ಲವಾಗಿತ್ತು. ರಷ್ಯಾದ ಲುನಾ-25 ಆ. 20ರಂದು ಪತನಗೊಂಡಿದ್ದು ಮಾತ್ರವಲ್ಲ; 2019ರಿಂದ 2023ರ ಅಂತರದಲ್ಲಿ ಅಂದರೆ ಕಳೆದ ಮೂರು ವರ್ಷಗಳಲ್ಲಿ ಚಂದ್ರನನ್ನು ಚುಂಬಿಸುವ ಸಾಹಸಕ್ಕೆ ಕೈಹಾಕಿದ ನಾಲ್ಕು ರಾಷ್ಟ್ರಗಳು ವಿಫ‌ಲವಾಗಿದ್ದನ್ನು ಕಾಣಬಹುದು. ಅವುಗಳ ಪೈಕಿ ಭಾರತದ ಚಂದ್ರಯಾನ-2, ಚೀನದ ಚೇಂಜ್‌ 5, ಇಸ್ರೇಲ್‌ನ ಬೆರೆಶೀಟ್‌, ಜಪಾನ್‌ನ ಹಾಕುಟೊ-ಆರ್‌ ಸೇರಿವೆ. ಈ ಮಧ್ಯೆ ಅಮೆರಿಕ, ಇಸ್ರೇಲ್‌, ಕೊರಿಯ, ಜಪಾನ್‌ ಸೇರಿದಂತೆ ಹಲವು ಮುಂದುವರಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಚಂದ್ರನ ಹಿಂದೆ ಬಿದ್ದಿವೆ. ಈ ಸಂದರ್ಭದಲ್ಲಿ “ವಿಕ್ರಮ್‌’ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಹೆಜ್ಜೆ ಇಡಲು ಮತ್ತೂಂದು ಪ್ರಯತ್ನ ನಡೆಸಿರುವುದು ಸಹಜವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

2019ರಲ್ಲಿ ಉಡಾವಣೆ ಮಾಡಲಾಗಿದ್ದ ಚಂದ್ರಯಾನ-2 ನೌಕೆಯ ವಿಕ್ರಂ ಲ್ಯಾಂಡರ್‌ ಇದೇ ದಕ್ಷಿಣದ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್‌ ವೇಳೆ ಚಂದ್ರನ ನೆಲಕ್ಕೆ ಅಪ್ಪಳಿಸಿ ಪತನಗೊಂಡಿತ್ತು. ಆದರೆ ನೌಕೆಯ ಆರ್ಬಿಟರ್‌ ಮಾತ್ರ ಇನ್ನೂ ಸುತ್ತುತ್ತಿದೆ. ಅದು ಚಂದ್ರಯಾನ-3 ನೌಕೆ ಮೂಲಕ ಹೋದ ವಿಕ್ರಮ್‌ ಲ್ಯಾಂಡರ್‌ ಮಾಡ್ಯುಲ್‌ ಅನ್ನು ಔಪಚಾರಿಕವಾಗಿ ಸ್ವಾಗತಿಸಿದೆ ಎಂದು ಇಸ್ರೋ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದೆ.

Advertisement

ಉದ್ದವಾದ ಕಾಲುಗಳು… ವಿಸ್ತಾರಗೊಂಡ ಪ್ರದೇಶವೂ…!

ಅನುಭವದಿಂದ ಪಾಠ ಕಲಿತಿರುವ ಇಸ್ರೋ ವಿಜ್ಞಾನಿಗಳು, ಚಂದ್ರಯಾನ-3ರಲ್ಲಿ ಹಲವು ಸುಧಾರಣೆಗಳು ಅಥವಾ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಬುಧವಾರ ಚಂದ್ರನ ಅಂಗಳ ಪ್ರವೇಶಿಸಲಿರುವ ಈ ಚಂದ್ರನ ಪಯಣದ ವೈಶಿಷ್ಟéಗಳು ಹೀಗಿವೆ.

ನೌಕೆಯ ಒಟ್ಟಾರೆ ತೂಕ 2,650 ಕೆ.ಜಿ. ಇದ್ದು, ಲ್ಯಾಂಡಿಂಗ್‌ ವಿಭಾಗ 1,545 ಕೆ.ಜಿ. ಮತ್ತು ನೋದನ ವಿಭಾಗ 1,105 ಕೆ.ಜಿ. ಇದೆ. ಚಂದ್ರಯಾನ-2ರಲ್ಲಿ ಆರ್ಬಿಟರ್‌ 2,368.7 ಕೆ.ಜಿ. ಮತ್ತು ಲ್ಯಾಂಡರ್‌ 1,447.2 ಕೆ.ಜಿ. ಸೇರಿ 3,846 ಕೆ.ಜಿ. ಇತ್ತು.

ಲ್ಯಾಂಡಿಂಗ್‌ ಪ್ರದೇಶವನ್ನು ವಿಸ್ತರಿಸಲಾಗಿದೆ. 4 ಕಿ.ಮೀ.ಗಿ 2.4 ಕಿ.ಮೀ. ಜಾಗದಲ್ಲಿ ವಿಕ್ರಮ್‌ ಲ್ಯಾಂಡಿಂಗ್‌ ಆಗಲಿದೆ. ಚಂದ್ರಯಾನ- 2ರಲ್ಲಿ ಲ್ಯಾಂಡಿಂಗ್‌ ಸೈಟ್‌ ಕೇವಲ 0.5 ಕಿ.ಮೀ. ಗಿ 0.5 ಕಿ.ಮೀ. ಇತ್ತು.

ಲ್ಯಾಂಡರ್‌ನ ಕಾಲುಗಳ ಮರುವಿನ್ಯಾಸ ಮಾಡಲಾಗಿದೆ. ಹೀಗಾಗಿ ಅದರ ಕಾಲುಗಳು ತುಸು ಉದ್ದ ಆಗಿವೆ. ಇದರಿಂದ ಎತ್ತರದಿಂದ ನಿಧಾನವಾಗಿ ಬಂದು ಚಂದ್ರನ ಅಂಗಳವನ್ನು ಸ್ಪರ್ಶಿಸಲು ಅನುಕೂಲ ಆಗಲಿದೆ. ಓಲಾಡುವ ಸಾಧ್ಯತೆಗಳು ಇದರಲ್ಲಿ ಕಡಿಮೆ ಇರಲಿವೆ.

ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಸೆನ್ಸರ್‌ಗಳನ್ನು ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದೆ. ಇದು ಸಂಪೂರ್ಣ ವೇಗ ನಿರ್ವಹಣೆ ಸಂವೇದಕ (ಸೆನ್ಸರ್‌)ಗಳನ್ನು ಸಹ ಒಳಗೊಂಡಿದೆ.

ಲ್ಯಾಂಡರ್‌ ಅನ್ನು ಕ್ರೇನ್‌ನಿಂದ, ಹೆಲಿಕಾಪ್ಟರ್‌ನಿಂದ ಅತೀ ಶೀತ ವಾತಾವರಣ ಹಾಗೂ ಅತೀಯಾದ ಉಷ್ಣ ವಾತಾವರಣದಲ್ಲಿ ವಿವಿಧ ವೇಗಗಳ ಮಿತಿಯಲ್ಲಿ ಲ್ಯಾಂಡ್‌ ಮಾಡುವ ಮೂಲಕ ಹಲವು  ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ.

ಇನ್ನು ಲ್ಯಾಂಡರ್‌ನಿಂದ ಕೆಳಗಿಳಿಯುವ ಆರು ಚಕ್ರಗಳ ರೋವರ್‌ ಪ್ರತೀ ಸೆಕೆಂಡ್‌ಗೆ 1 ಸೆಂ.ಮೀ. ವೇಗದಲ್ಲಿ ಚಲಿಸಲಿದೆ. ಇದರಲ್ಲಿ ಚಂದ್ರನ ಅಂಗಳ ಪರಿಶೀಲಿಸಿ, ಸೆರೆಹಿಡಿಯುವ ನ್ಯಾವಿಗೇಶನ್‌ ಕೆಮರಾ ಇದೆ. ಸೋಲಾರ್‌  ಪ್ಯಾನೆಲ್‌ಗ‌ಳಿದ್ದು, ಇದು ಸೂರ್ಯನ ಇರುವಿಕೆ ಗುರುತಿಸಲಿವೆ. ಕಣಿವೆಗಳ ಇಳಿಜಾರು ಅಳೆಯುವ ಮಾಪಕವೂ ಇದರಲ್ಲಿದೆ.

ರೋವರ್‌ ಸಂಗ್ರಹ ಸಾಮರ್ಥ್ಯ (ಸ್ಟೋರೇಜ್‌) ಅತ್ಯಂತ ಸಾಮಾನ್ಯ ಸ್ಮಾರ್ಟ್‌ ಫೋನ್‌ನಲ್ಲಿರುವಷ್ಟು ಅಂದರೆ 2ಜಿಬಿ ಮಾತ್ರ. ಪ್ಯಾನೆಲ್‌ಗ‌ಳ ಗಾತ್ರ 620 ಮಿ.ಮೀಗಿ480 ಮಿ.ಮೀ. ಇದ್ದು, 58 ವ್ಯಾಟ್‌ ಪವರ್‌ ಹೊಂದಿದೆ.

ಪ್ರಗ್ಯಾನ್‌ ರೋವರ್‌ಗೆ ಇಳಿಯಲು 2ನೇ ರ್‍ಯಾಂಪ್‌ ನಿಯೋಜಿಸಲಾಗಿದೆ. ಇದು ರೋವರ್‌ ಒಂದೇ ಪ್ರಮಾಣದಲ್ಲಿ  ಚಂದ್ರನ ಅಂಗಳದಲ್ಲಿ ಚಲಿಸಲು ಅನುಕೂಲವಾಗಲಿದೆ.

ಅಲ್ಲಿ ನೀರಿಗೆ ಏಕಿಷ್ಟು ಮಹತ್ವ?

ಭೂಮಿಯಲ್ಲಿ ಸೃಷ್ಟಿಯಾದ ಅನುಕೂಲಕರ ವಾತಾವರಣದಿಂದಾಗಿ ನೀರು ಉಂಟಾಯಿತು ಎನ್ನುವುದು ಒಂದು ವಾದ. ಭೂಮಿ ರೂಪುಗೊಂಡ ಬಳಿಕ ಒಂದಾನೊಂದು ಕಾಲದಲ್ಲಿ ನೀರು ಹೊಂದಿದ್ದ ಇನ್ನೊಂದು ಆಕಾಶಕಾಯ ಭೂಮಿಗೆ ಅಪ್ಪಳಿಸಿದ ಬಳಿಕ ಭೂಮಿಯಲ್ಲಿ ನೀರು ಬಂತು ಎನ್ನುವುದು ಇನ್ನೊಂದು ವಾದ. ಚಂದ್ರನ ದಕ್ಷಿಣ ಧ್ರುವದಲ್ಲಿ ಇರುವ ನೀರಿನಂಶವನ್ನು ಅಧ್ಯಯನ ಮಾಡುವುದರಿಂದ ಚಂದ್ರನಲ್ಲಿ ಜ್ವಾಲಾಮುಖೀಗಳು ಇದ್ದವೇ, ನೀರಿನಂಶ ಬಂದದ್ದು ಎಲ್ಲಿಂದ- ಹೇಗೆ, ಭೂಮಿಗೆ ಅಪ್ಪಳಿಸಿದ ಕ್ಷುದ್ರ ಗ್ರಹ, ಆಕಾಶ ಕಾಯಗಳು ಹೊತ್ತು ತಂದ ಅಂಶಗಳು ಯಾವುವು ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯಲು ಸಾಧ್ಯ. ಚಂದ್ರನ ಘನೀಕೃತ ನೀರನ್ನು ರಾಸಾಯನಿಕವಾಗಿ ವಿಭಜಿಸುವುದು ಸಾಧ್ಯವಾದರೆ ಮುಂದೆ ಆ ಜಲಜನಕ ಮತ್ತು ಆಮ್ಲಜನಕಗಳನ್ನು ಚಂದ್ರನಲ್ಲಿ ಗಣಿಗಾರಿಕೆ, ಮಂಗಳಯಾನಕ್ಕೆ ಇಂಧನವಾಗಿ, ಚಂದ್ರ ಯಾನಿಗಳ ಉಸಿರಾಟಕ್ಕೆ ಬಳಸುವ ದೂರದೃಷ್ಟಿಯೂ ಇದೆ.

ಹೀಗೆ ಚಂದ್ರನಲ್ಲಿಗೆ ಯಾತ್ರೆಗೆ ದೇಶಗಳು, ಖಾಸಗಿ ಕಂಪೆನಿಗಳು ಸಾಲು ಸಾಲಾಗಿ ಹೊರಟಿವೆ- ಹೊರಡುತ್ತಿವೆ. ಕಾರಣ- ಬಾಹ್ಯಾಕಾಶವೇ ಭವಿಷ್ಯ! ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದರೆ ಜಾಗತಿಕವಾಗಿ ಭಾರತ ಸಾಧಿಸುವ ಸೀಮೋಲ್ಲಂಘನ ಎಷ್ಟು ಗುರುತರವಾದದ್ದು ಎಂಬುದು ಕಲ್ಪನಾತೀತ.

ಪ್ರಗ್ಯಾನ್‌ನ ಕೆಲಸವೇನು?

ಚಂದಿರನ ಅಂಗಳಕ್ಕೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ವಿಕ್ರಮ್‌ ಲ್ಯಾಂಡರ್‌ನ ಒಂದು ಬದಿಯ ಫ‌ಲಕವು ಬಾಗಿಲಿನಂತೆ ತೆರೆದುಕೊಳ್ಳುತ್ತದೆ. ಒಳಗಿರುವ ಪ್ರಗ್ಯಾನ್‌ ರೋವರ್‌ ಇಳಿದು ಬರಲು ಸಹಾಯವಾಗುವಂತೆ, ಈ ಫ‌ಲಕವೇ ಮೆಟ್ಟಿಲ ಏಣಿ(ರ್‍ಯಾಂಪ್‌)ಯಂತೆ ನೆಲಕ್ಕೆ ಇಳಿಜಾರಾಗಿ ತೆರೆದುಕೊಳ್ಳುತ್ತದೆ. ಸುಮಾರು 4 ಗಂಟೆಗಳ ಅನಂತರ 6 ಚಕ್ರಗಳಿರುವ ಪ್ರಗ್ಯಾನ್‌ ರೋವರ್‌ ನಿಧಾನಕ್ಕೆ ವಿಕ್ರಮನೊಳಗಿನಿಂದ ಹೊರಬರುತ್ತದೆ. ತ್ರಿವರ್ಣ ಧ್ವಜ ಮತ್ತು ಇಸ್ರೋ ಲೋಗೋವನ್ನು ಹೊಂದಿರುವ ಪ್ರಗ್ಯಾನ್‌ ರೋವರ್‌, ಚಂದ್ರನ ನೆಲದಲ್ಲಿ ಇಳಿದು ಸೆಕೆಂಡಿಗೆ 1 ಸೆ.ಮೀ. ವೇಗದಲ್ಲಿ ಚಲಿಸಲು ಶುರು ಮಾಡುತ್ತದೆ. ಇದರಲ್ಲಿರುವ ದಿಗªರ್ಶಕ ಕೆಮರಾಗಳು ಚಂದಿರನ ಸುತ್ತಮುತ್ತಲಿನ ಎಲ್ಲ ದೃಶ್ಯಗಳನ್ನೂ ಸೆರೆಹಿಡಿದು, ಸ್ಕ್ಯಾನ್‌ ಮಾಡಲು ಆರಂಭಿಸುತ್ತವೆ. ರೋವರ್‌ ಚಂದ್ರನ ಮೇಲ್ಮೆ„ನ ಎಲ್ಲ ಮಾಹಿತಿಗಳು, ದತ್ತಾಂಶಗಳನ್ನು ಸಂಗ್ರಹಿಸಿ ಅವುಗಳನ್ನು ಲ್ಯಾಂಡರ್‌ಗೆ ರವಾನಿಸುತ್ತದೆ.

2 ವಾರ ಕಾಲಾವಕಾಶ

ಸೌರಚಾಲಿತ ಲ್ಯಾಂಡರ್‌ ಮತ್ತು ರೋವರ್‌ಗೆ ಚಂದಿರನ ಮೇಲ್ಮೆ„ಯನ್ನು ಅಧ್ಯಯನ ನಡೆಸಲು ಇರುವ ಕಾಲಾವಕಾಶ 2 ವಾರಗಳು ಮಾತ್ರ. ರೋವರ್‌ ತನಗೆ ಸಿಕ್ಕಿದ ಮಾಹಿತಿಯನ್ನು ಲ್ಯಾಂಡರ್‌ಗೆ ಕಳುಹಿಸುತ್ತದೆ. ಲ್ಯಾಂಡರ್‌ ಅದನ್ನು ಭೂಮಿಗೆ ರವಾನಿಸುತ್ತದೆ. ಒಂದು ವೇಳೆ ಇವರೆಡರ ನಡುವೆ ಸಂವಹನದಲ್ಲಿ ಏನಾದರೂ ಸಮಸ್ಯೆಯಾದರೂ, ತುರ್ತು ಸಂದರ್ಭದಲ್ಲಿ ಸಂವಹನ ನಡೆಸಲು ಚಂದ್ರನ ಕಕ್ಷೆಯಲ್ಲೇ ಸುತ್ತುತ್ತಿರುವ ಚಂದ್ರಯಾನ-2ರ ಆರ್ಬಿಟರ್‌ ನೆರವಿಗೆ ಬರಲಿದೆ.

ವಿಕ್ರಮ್‌ ಲ್ಯಾಂಡರ್‌ ಏನು ಮಾಡುತ್ತದೆ?

ವಿಕ್ರಮ್‌ ನಿಂತಲ್ಲೇ ನಿಂತಿರುತ್ತದೆ. ಆದರೆ ಅದರಲ್ಲಿರುವ ಮೂರು ಪೇಲೋಡ್‌ಗಳ ಸಹಾಯದಿಂದ ವಿಕ್ರಮ್‌, ತಾನು ನಿಂತಿರುವ ನೆಲದ ಪ್ಲಾಸ್ಮಾ(ಅಯಾನುಗಳು ಮತ್ತು ಎಲೆಕ್ಟ್ರಾನುಗಳು) ಸಾಂದ್ರತೆಯನ್ನು ಅಳೆಯುತ್ತದೆ, ಚಂದ್ರನ ಮೇಲ್ಮೆ„ಯಲ್ಲಿರುವ ಉಷ್ಣತೆಯ ಗುಣವಿಶೇಷಗಳು, ಲ್ಯಾಂಡಿಂಗ್‌ ಆದ ಜಾಗದ ಸುತ್ತಲಿನ ಭೂಕಂಪನದ ತೀವ್ರತೆಯನ್ನು ಅಳೆಯುತ್ತದೆ, ಚಂದ್ರನ ಹೊರಪದರದ ರಚನೆಯನ್ನು ಅರಿಯುತ್ತದೆ.

ಚಂದ್ರಯಾನ-2 ಮತ್ತು 3ರ ನಡುವಿನ ವ್ಯತ್ಯಾಸ

ಚಂದ್ರಯಾನ-2ರಲ್ಲಿ ಆರ್ಬಿಟರ್‌ ಮಾಡ್ನೂಲ್‌ ಇತ್ತು. ಚಂದ್ರಯಾನ-3ರಲ್ಲಿ ಆರ್ಬಿಟರ್‌ ಮಾಡ್ನೂಲ್‌ ಇರುವುದಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವ ಏಕೈಕ ಉದ್ದೇಶದೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ರೋವರ್‌ನ ಸಹಾಯದಿಂದ ದಕ್ಷಿಣ ಧ್ರುವದಲ್ಲಿನ ರಚನೆಯನ್ನು ಅರಿತುಕೊಂಡು, ಅಧ್ಯಯನ ನಡೆಸುವುದೇ ಚಂದ್ರಯಾನ-3ರ ಪ್ರಮುಖ ಉದ್ದೇಶವಾಗಿದೆ.

ಪೇಲೋಡ್‌- 3

ಯಾರೊಂದಿಗೆ ಸಂವಹನ ?

ಇಸ್ರೋದ ಐಎಸ್‌ಡಿಎನ್‌, ರೋವರ್‌, ಚಂದ್ರಯಾನ-2ರ ಆರ್ಬಿಟರ್‌

ಲ್ಯಾಂಡರ್‌ ಪೇಲೋಡ್‌ಗಳು

1 ರಾಂಭಾ-ಎಲ್‌ಪಿ: ಲ್ಯಾಂಡರ್‌ನ ಸುತ್ತಮುತ್ತಲಿನ ನೆಲದಲ್ಲಿನ ಪ್ಲಾಸ್ಮಾದ ಸಾಂದ್ರತೆ ಮತ್ತು ಸಮಯ ಕಳೆದಂತೆ ಅದರಲ್ಲಾಗುವ ಬದಲಾವಣೆ ಬಗ್ಗೆ ಅಧ್ಯಯನ ನಡೆಸುತ್ತದೆ.

2 ಚೇಸ್ಟ್‌(ಚಂದ್ರಾಸ್‌ ಸರ್ಫೇಸ್‌ ಥರ್ಮೋ-ಫಿಸಿಕಲ್‌ ಎಕ್ಸ್‌ಪೆರಿಮೆಂಟ್‌): ದಕ್ಷಿಣ ಧ್ರುವದಲ್ಲಿನ ಉಷ್ಣ ಗುಣವಿಶೇಷಗಳನ್ನು ಅಳೆಯಲಿದೆ.

3 ಐಎಲ್‌ಎಸ್‌ಎ(ಇನ್‌ಸ್ಟ್ರೆಮೆಂಟ್‌ ಫಾರ್‌ ಲೂನಾರ್‌ ಸಿಸ್ಮಿಕ್‌ ಆ್ಯಕ್ಟಿವಿಟಿ): ಲ್ಯಾಂಡಿಂಗ್‌ ಆದ ಸ್ಥಳದಲ್ಲಿನ ಭೂಕಂಪನದ ಚಟುವಟಿಕೆ ಅರಿಯುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next