Advertisement

19 ರಂದು ಕರಿಕಾನಮ್ಮನ ಬೆಟ್ಟದಲ್ಲಿ ಸಂಗೀತೋತ್ಸವ

06:08 PM Mar 15, 2022 | Team Udayavani |

ಹೊನ್ನಾವರ: ಸಹ್ಯಾದ್ರಿಯ ಓರೆಯಲ್ಲಿ ಬಂಡೆಗಲ್ಲುಗಳ ಮಧ್ಯೆ ಸುತ್ತುವರಿದ ಕಾದಿಟ್ಟ ಅರಣ್ಯದಿಂದ ಆವೃತವಾದ ಕರಿಕಾನಮ್ಮನ ದೇವಾಲಯದ ಬೆಟ್ಟದ ಮೇಲೆ ಬೆಳದಿಂಗಳ ಸಂಗೀತೋತ್ಸವ ಮಾ. 19ರ ಶನಿವಾರ ಮುಸ್ಸಂಜೆಯಿಂದ ಮುಂಜಾನೆಯವರೆಗೆ ನಡೆಯಲಿದೆ.

Advertisement

ಕಳೆದ 24 ವರ್ಷಗಳಿಂದ ಈ ಅಪರೂಪದ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಹೆಸರಾಂತ ತಬಲಾವಾದಕ ಗೋಪಾಲಕೃಷ್ಣ ಹೆಗಡೆ ಮತ್ತು ಸಹೋದರ ಶ್ರೀಧರ ಹೆಗಡೆ ಈ ವರ್ಷವೂ ಕಲಾಮಂಡಲ, ಎಸ್‌.ಕೆ.ಪಿ. ಮ್ಯೂಸಿಕ್‌ ಟ್ರಸ್ಟ್‌ ಮತ್ತು ಕರಿಕಾನಮ್ಮ ದೇವಸ್ಥಾನ ಟ್ರಸ್ಟ್‌ ಸಹಯೋಗದಲ್ಲಿ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.

ಸಂಗೀತೋತ್ಸವದಲ್ಲಿ ಖ್ಯಾತ ಸಿತಾರವಾದಕ, ಉಸ್ತಾದ್‌ ಛೋಟೇ ರಹಿಮತ್‌ ಖಾನ್‌ ಗೋವಾ ಇವರಿಗೆ “ನಾದಮಾಧವ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿಂದುಸ್ಥಾನಿ ಯುವಗಾಯಕಿ ಕುಮಾರಿ ತೇಜಸ್ವಿ ವೆರ್ಣೇಕರಗೆ ವಿದ್ವಾನ್‌ ಅವಿಶಾನ ಹೆಬ್ಟಾರ ಸಂಸ್ಮರಣ ಯುವ ಪುರಸ್ಕಾರ, ಸಂಗೀತಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಡಾ|ಅಶೋಕ ಹುಗ್ಗಣ್ಣವರ್‌ ಮತ್ತು ತಬಲಾ ವಾದಕ ರಾಜು ಹೆಬ್ಟಾರ ಇವರಿಗೆ ಸಾಧಕ ಸನ್ಮಾನ ನಡೆಯಲಿದೆ. ಪರಿಸರ ವಿಜ್ಞಾನದಲ್ಲಿ 5 ಬಂಗಾರದ ಪದಕ ಪಡೆದ ಅದೇ ಊರಿನ ಗುರುಪ್ರಸಾದ ಭಟ್‌ ಗೆ ಸನ್ಮಾನ ನಡೆಯಲಿದೆ. ಡಾ|ಎಂ. ಜಿ. ಹೆಗಡೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವೇ. ಮೂ. ಸುಬ್ರಹ್ಮಣ್ಯ ಭಟ್‌, ವಿಷ್ಣು ಭಟ್‌ ವಂದೂರು ಆಶೀರ್ವಚನ ನೀಡಲಿದ್ದಾರೆ.

ನಂತರ ಉಸ್ತಾದ್‌ ಛೋಟೇ ರಹಿಮತ್‌ ಖಾನ್‌, ಡಾ|ಅಶೋಕ ಹುಗ್ಗಣ್ಣವರ್‌, ರಾಜು ಹೆಬ್ಟಾರ ಸಂಗಿತೋತ್ಸವದಲ್ಲಿ ಪಾಲ್ಗೊಳ್ಳುವರು. ನಿರಂಜನ ಹೆಗಡೆ (ಬಾನ್ಸೂರಿ), ಶರತ್‌ ಹೆಗಡೆ, ಡಾ| ಓಂಕಾರ ಹೆಗಡೆ ತಬಲಾ ಜುಗಲ್ಬಂದಿ, ಜ್ಯೋತಿ ಹೆಗಡೆ ರುದ್ರವೀಣಾ ವಾದನ, ನಿಹಾರಿಕಾ ಭಟ್‌, ಮಹೇಶ ಮಹಾಲೆ, ಶ್ರೀಧರ ಹೆಗಡೆ, ದೇವಿ ಮೈಸೂರು, ಪಂ. ಜಯತೀರ್ಥ ಮೇವುಂಡಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸತೀಶ ಭಟ್‌, ಹರಿಶ್ಚಂದ್ರ ನಾಯ್ಕ, ಭರತ್‌ ಹೆಗಡೆ, ಗೌರೀಶ ಯಾಜಿ ಹಾರ್ಮೋನಿಯಂ ಸಾಥ್‌ ನೀಡುವರು. ಗುರುರಾಜ ಆಡುಕಳ, ಮಧು ಕುಡಾಲ್ಕರ್‌, ವಿಘ್ನೇಶ್ ಕಾಮತ್‌, ಡಾ|ಉದಯ ಕುಲಕರ್ಣಿ ತಬಲಾ ಸಾಥ್‌ ನೀಡುವರು. ಪ್ರಕೃತಿಯ ಸಾಕ್ಷಿಯಾಗಿ ಕೇಳುಗರ ಮತ್ತು ಗಾಯಕರ ಮುಖಾಮುಖೀಯನ್ನು ರೋಚಕವಾಗಿಸುವ ಈ ಕಾರ್ಯಕ್ರಮದಲ್ಲಿ ಊಟ, ತಿಂಡಿಯ ವ್ಯವಸ್ಥೆ ಇದೆ. ಈ ಸಂತೋಷದಲ್ಲಿ ಪಾಲ್ಗೊಂಡು ಸಂಭ್ರಮ ಹೆಚ್ಚಿಸಬೇಕೆಂದು ಸಂಘಟಕರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next