ಹೊಸ ತಂತ್ರಜ್ಞಾನಗಳ ಪರಿಚಯವಾದಾಗ ಟೀಕೆ, ಆತಂಕ, ವಿರೋಧಗಳೆಲ್ಲ ವ್ಯಕ್ತವಾಗುವುದು ಸಾಮಾನ್ಯ. ಕೈಮಗ್ಗದ ಜಾಗಕ್ಕೆ ಜಕಾರ್ಡ್ ಮಗ್ಗ ಬಂದಾಗ ಯುರೋಪ್ ನಲ್ಲಿ ಗಲಭೆಗಳೇ ಆಗಿದ್ದವಂತೆ!
ಟಿವಿ, ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಫೋನ್ ಬಂದಾಗಲೂ ಪರ -ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದವು. ಡಿಜಿಟಲ್ ಜಗತ್ತಿನ ಅನೇಕ ಸೌಲಭ್ಯಗಳು ಇಂಗ್ಲಿಷ್ ಕೇಂದ್ರಿತವಾದ್ದರಿಂದ ಅವು ನಮ್ಮ ಭಾಷೆಯ ಬಳಕೆ, ಬೆಳವಣಿಗೆಗೆ ಮಾರಕ ಎಂಬ ಅನಿಸಿಕೆ ಕೂಡ ಇದೆ.
ಇಂರ್ಟನೆಟ್‌ನ ವ್ಯಾಪ್ತಿ ಹಾಗೂ ಸೋಶಿಯಲ್ ಮೀಡಿಯಾದ ಪ್ರಭಾವ ಹೆಚ್ಚಿದಂತೆ ನಮ್ಮ ಏಕಾಗ್ರತೆ ಕಡಿಮೆಯಾಗಿದೆ, ಯಾವುದೇ ವಿಷಯದ ಬಗ್ಗೆ ಕೆಲವು ಸೆಕೆಂಡುಗಳಿಗಿಂತ ಹೆಚ್ಚಿನ ಕಾಲ ಆಸಕ್ತಿಯಿಟ್ಟು ಕೊಳ್ಳುವುದು ಕಷ್ಟವಾಗಿದೆ, ಸೃಜನಶೀಲತೆಯ ಜಾಗಕ್ಕೆ ಕಾಪಿ-ಪೇಸ್ಟ್ ಬಂದು ಕುಳಿತಿದೆ, ಓದುವ ಹವ್ಯಾಸ ವಂತೂ ಗಣನೀಯವಾಗಿ ಕಡಿಮೆಯಾಗಿಬಿಟ್ಟಿದೆ.
ಹಾಗೆಂದು ಡಿಜಿಟಲ್ ಜಗತ್ತಿನ ಸೌಲಭ್ಯಗಳು ಕೆಟ್ಟದ್ದನ್ನಷ್ಟೇ ಮಾಡಿವೆ ಎನ್ನಬಹುದೇ? ಇಲ್ಲ. ಜಗ ತ್ತಿನ ಯಾವುದೇ ಮೂಲೆಯಲ್ಲಿರುವವರು ತಮಗೆ ಬೇಕಾದ ಮಾಹಿತಿಯನ್ನು ಬೇಕಾದ ಭಾಷೆಯಲ್ಲಿ ಬೇಕಾದಾಗ ಪಡೆದುಕೊಳ್ಳು ವುದು ಸಾಧ್ಯವಾಗಿದೆ. ವಿವಿಧ ಭಾಷೆಗಳಲ್ಲಿರುವ ಜ್ಞಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಡಿಜಿಟಲ್ ಜಗತ್ತು ಬೆಳೆ ಯುತ್ತಿದೆ, ಭಾಷೆಯ ಬೆಳವಣಿಗೆಗೂ ಹೊಸ ದಾರಿ ತೋರಿಸುತ್ತಿದೆ. ಕನ್ನಡದ ಉದಾಹರಣೆಯನ್ನೇ ನೋಡಿದರೆ, ಕಂಪ್ಯೂಟರಿನಲ್ಲಿ-ಮೊಬೈಲ್ ಫೋನಿನಲ್ಲಿ ಕನ್ನಡ ಅಕ್ಷರಗಳನ್ನು ನೋಡುವುದು, ಮೂಡಿಸುವುದೇ ಒಂದು ಕಾಲದಲ್ಲಿ ವಿಶೇಷವೆನಿಸುತ್ತಿತ್ತು. ಇಂಟರ್‌ನೆಟ್‌ನಲ್ಲಿದ್ದ ಕೆಲವೇ ಕನ್ನಡ ತಾಣಗಳನ್ನು ನೋಡಿ ಖುಷಿಪಡುವ ಅನಿವಾರ್ಯತೆಯಿತ್ತು. ಆದರೆ ಈಗ? ಕಂಪ್ಯೂಟರ್, ಮೊಬೈಲ್ ಫೋನ್‌ನಲ್ಲಿ ಕನ್ನ ಡದ ಬಳಕೆ ಸಹಜ ಆಯ್ಕೆಯಾಗಿಬಿಟ್ಟಿದೆ. ಒಳಿತು ಕೆಡುಕುಗಳೆರಡೂ ಸೇರಿದ ಪಾಕ ಉಣಬಡಿಸುವ ಸಾವಿರಾರು ಜಾಲತಾಣಗಳು ಅಸ್ತಿತ್ವದಲ್ಲಿವೆ. ಸೋಶಿ ಯಲ್ ಮೀಡಿಯಾದ ಜಗಳಗಳೂ ಕನ್ನಡದಲ್ಲೇ ನಡೆಯುತ್ತವೆ! ಕನ್ನಡದ ಇ-ಪುಸ್ತಕಗಳು, ಆಡಿಯೋ ಪುಸ್ತಕಗಳು ಭಾರೀ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ.
ಮಹತ್ವದ ಸಾಹಿತ್ಯಕೃತಿಗಳು ಡಿಜಿಟಲ್ ರೂಪದಲ್ಲಿ ಕೈಗೆ ಸಿಗುತ್ತಿವೆ. ಕನ್ನಡದಲ್ಲಿರುವ ಮಾಹಿತಿಯನ್ನು ಕನ್ನಡದಲ್ಲೇ ಹುಡುಕಿಕೊಳ್ಳುವುದು ಸುಲಭಸಾಧ್ಯ ವಾಗಿದೆ. ಭಾಷಾ ತಂತ್ರಜ್ಞಾನಗಳ (ಲ್ಯಾಂಗ್ವೇಜ್ ಟೆಕ್ನಾಲಜೀಸ್) ಪೈಕಿ ಹಲವಾರು ಇದೀಗ ಕನ್ನಡದಲ್ಲೂ ದೊರಕುತ್ತಿವೆ. ಕನ್ನಡದ ಮುದ್ರಿತ ಪಠ್ಯವನ್ನು ಗುರುತಿಸಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಿಕೊಳ್ಳುವುದು, ಕನ್ನಡದ ಪಠ್ಯವನ್ನು ಧ್ವನಿಗೆ ಹಾಗೂ ಧ್ವನಿಯನ್ನು ಪಠ್ಯಕ್ಕೆ ಬದಲಾಯಿಸಿಕೊಳ್ಳುವುದು, ಬೇರೆ ಭಾಷೆಗಳ ಪಠ್ಯವನ್ನು ಕನ್ನಡಕ್ಕೆ ಹಾಗೂ ಕನ್ನಡದ ಪಠ್ಯವನ್ನು ಬೇರೆ ಭಾಷೆಗಳಿಗೆ ಅನುವಾದಿಸಿ ಕೊಳ್ಳುವುದೆಲ್ಲ ಇದೀಗ ಸಾಧ್ಯವಾಗಿದೆ.ಕಳೆದೊಂದು ವರ್ಷದಲ್ಲಿ ನಾವೆಲ್ಲ ಚಾಟ್ ಜಿಪಿಟಿಯ ಹೆಸರು ಕೇಳುತ್ತಿದ್ದೇವೆ. ವಿವಿಧ ಬಗೆಯ ಮಾಹಿತಿಯನ್ನು ತಮ್ಮಷ್ಟಕ್ಕೆ ತಾವೇ ರೂಪಿಸಬಲ್ಲ “ಜನರೇಟಿವ್ ಎಐ’ ಎಂಬ ಗುಂಪಿಗೆ ಸೇರಿದ ತಂತ್ರಾಂಶ ಸಾಧನ ಅದು. ಈ ಬಗೆಯ ಸಾಧನಗಳೂ ಇದೀಗ ಕನ್ನಡ ಕಲಿಯುತ್ತಿವೆ.
ಭಾಷಾ ತಂತ್ರಜ್ಞಾನಗಳನ್ನು ಬಳಸುವಲ್ಲಿ, ಹೊಸ ಬೆಳವಣಿಗೆಗಳನ್ನು ಪ್ರೋತ್ಸಾಹಿಸುವಲ್ಲಿ ನಮ್ಮ ಜವಾಬ್ದಾರಿಯೂ ಬೇಕಾದಷ್ಟಿದೆ. ಬನ್ನಿ, ಡಿಜಿಟಲ್ ಜಗತ್ತಿನಲ್ಲಿ ಕನ್ನಡಕ್ಕಿರುವ ಸೌಲಭ್ಯಗಳನ್ನು ಬಳಸೋಣ, ಇನ್ನಷ್ಟು ಬೆಳವಣಿಗೆಗಳನ್ನು ಪ್ರೋತ್ಸಾಹಿಸೋಣ!
-ಟಿ. ಜಿ. ಶ್ರೀನಿಧಿ
ವಿಜ್ಞಾನ ಮತ್ತು ತಂತ್ರಜ್ಞಾನ ಲೇಖಕ