ಹರಪನಹಳ್ಳಿ: ಪುರಸಭೆ ಕಾರ್ಯಕರ್ತರ ಚುನಾವಣೆ ಆಗಿರುವುದರಿಂದ ಮುಖಂಡರು ಹೆಚ್ಚಿನ ಜವಾಬ್ಟಾರಿ ವಹಿಸಿಕೊಳ್ಳಬೇಕು. ಇಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡಬೇಕು. ಕಾಂಗ್ರೆಸ್‌ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಪ್ರತಿಯೊಬ್ಬರೂ ವೈಯಕ್ತಿಕ ಪ್ರತಿಷ್ಠೆ ಬಿಡಬೇಕು ಎಂದು ಕೌಶಲ್ಯಾಭಿವೃದ್ಧಿ ಮತ್ತು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಪಟ್ಟಣದ ಎಚ್ಪಿಎಸ್ ಕಾಲೇಜ್ ಅವರಣದಲ್ಲಿ ಪುರಸಭೆ ಚುನಾವಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಪಿಸಿಸಿ ಸ್ಥಳೀಯ ಪುರಸಭೆ ಚುನಾವಣೆ ಉಸ್ತುವಾರಿ ನನಗೆ ಒಬ್ಬನೇ ಕೊಟ್ಟಿಲ್ಲ, ಎಲ್ಲರೂ ಸೇರಿಕೊಂಡು ಚುನಾವಣೆ ಎದುರಿಸಬೇಕಾಗಿದೆ. ನಿಮ್ಮೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ ಪಡೆದು ಸಾಮಾಜಿಕ ನ್ಯಾಯದಡಿ ಸಾಗಬೇಕಾಗಿದೆ. ಜವಾಬ್ಟಾರಿ ಮನಸೋಇಚ್ಛೆ ನಿಭಾಯಿಸುವುದಕ್ಕೆ ಅಲ್ಲ. ಪಕ್ಷಕ್ಕೆ ನಿಷ್ಠೆಯಿಂದ ಇರುವವರ ಹಿತ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಇದು ಲೀಡರ್ ಚುನಾವಣೆ ಅಲ್ಲ, ಕಾರ್ಯಕರ್ತರ ಚುನಾವಣೆಯಾಗಿದೆ. ಕಾರ್ಯಕರ್ತರಿಗೆ ನಾಯಕತ್ವ ರೂಢಿಸಿಕೊಳ್ಳುವುದಕ್ಕೆ ಇದೊಂದು ಅವಕಾಶ. ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವುದಕ್ಕೆ ನಾವು ನಿಮ್ಮ ಚುನಾವಣೆ ಮಾಡುತ್ತೇವೆ ಎಂದರು.
ನಾನು ಶಾಸಕನಾಗುವವರೆಗೂ ಪುರಸಭೆಯಲ್ಲಿ ಎಂದಿಗೂ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದಿರಲಿಲ್ಲ. ನಾನು ಇಲ್ಲಿಂದ ಬಿಟ್ಟು ಹೋದ ಮೇಲೂ ಬಹುಮತ ಬಂದಿಲ್ಲ. ಯುವಕರಿಗೆ ಹೆಚ್ಚಿನ ಅದ್ಯತೆ ಕೊಡುವ ಕೆಲಸ ಮುಖಂಡರು ಮಾಡಬೇಕು. ಪುರಸಭೆ 27ಸ್ಥಾನಗಳಿಗೆ ಎಲ್ಲರಿಗೂ ಟಿಕೆಟ್ ಕೊಡಲು ಆಗಲ್ಲ, ಎಲ್ಲರೂ ಪಕ್ಷದ ಹಿತದೃಷ್ಟಿಯಿಂದ ಸಹಕಾರ ಕೊಡಬೇಕು. ಹಳ್ಳಿಯ ಮುಖಂಡರು ಒಂದೊಂದು ವಾರ್ಡ್ ಜವಾಬ್ಟಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಅಭ್ಯರ್ಥಿಗಳ ಅಂತಿಮ ಆಯ್ಕೆಯಾದ ನಂತರ ವೀಕ್ಷಕರ ನೇಮಕ ಮಾಡಲಾಗುವುದು. ಸಾಮಾಜಿಕ ನ್ಯಾಯದಡಿ ಎಲ್ಲಾ ಜಾತಿಯವರನ್ನು ಪರಿಗಣಿಸಿ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಯೋಗಿ ಮಾತನಾಡಿ, ಸಂಸದರು, ಶಾಸಕರ ಚುನಾವಣೆಗೆ ಶ್ರಮಿಸಿದ ಕಾರ್ಯಕರ್ತರ ಚುನಾವಣೆಯಾಗಿರುವ ಪುರಸಭೆಗೆ ಸ್ಪರ್ಧಿಸಲು ಪ್ರಾಮಾಣಿಕತೆ, ಸಾಮಾಜಿಕ ನ್ಯಾಯ, ಗೆಲ್ಲುವ ಶಕ್ತಿ ಗುರುತಿಸಿ ಟಿಕೆಟ್ ಹಂಚಿಕೆ ಮಾಡಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕಿದೆ. ವೈಯಕ್ತಿಕ ದ್ವೇಷ ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್.ಮಂಜಪ್ಪ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ ಕಾಲು ಎಳೆವ ಕೆಲಸ ಮಾಡಬೇಡಿ. ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾಂಗ್ರೆಸ್‌ನವರೇ ಕಾರಣವಾಬಾರದು. ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ತಾಲೂಕಿಗೆ 371ಜೆ ಕಲಂ ಸೌಲಭ್ಯ, 60 ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಶಾಶ್ವತ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳೇ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆ ಆಗಲಿವೆ ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಮುಖಂಡರಾದ ಎಂ.ರಾಜಶೇಖರ್, ಟಿ.ಎಚ್.ಎಂ.ವಿರೂಪಾಕ್ಷಯ್ಯ, ಸಿ.ಜಾವೀದ್, ಹಲಗೇರಿ ಮಂಜಪ್ಪ ಮಾತನಾಡಿದರು. ಕೆಪಿಸಿಸಿ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಎಸ್.ಮಂಜುನಾಥ್, ಬಿ.ಕೆ.ಪ್ರಕಾಶ್, ಪಿ.ಎಲ್.ಪೋಮ್ಯನಾಯ್ಕ, ಶಶಿಧರ ಪೂಜಾರ, ಎಂ.ವಿ.ಅಂಜಿನಪ್ಪ, ಎಚ್.ಬಿ.ಪರುಶುರಾಮಪ್ಪ, ಎಂ.ಪಿ.ವೀಣಾ ಮಹಾಂತೇಶ, ಅಬ್ದುಲ್ರಹಿಮಾನ್, ಮುತ್ತಿಗಿ ಜಂಬಣ್ಣ, ನೀಲಗುಂದ ವಾಗೀಶ್, ಅಂಬ್ಲಿ ಮಂಜುನಾಥ, ಎಂ.ಟಿ.ಬಸವನಗೌಡ, ಮತ್ತಿಹಳ್ಳಿ ಅಜ್ಜಪ್ಪ, ಯರಬಳ್ಳಿ ಉಮಾಪತಿ, ರಾಮಚಂದ್ರರಾವ್, ತೆಲಿಗಿ ಚನ್ನಪ್ಪ, ಕೆಂಚನಗೌಡ, ಮಲ್ಲಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.