Advertisement

ತೆಂಗಿನ ತೋಟದಲ್ಲೀಗ ಬಿಳಿನೊಣಗಳ ಹಾವಳಿ, ಕೃಷಿಕರಲ್ಲಿ  ಆತಂಕ

04:25 PM Dec 22, 2017 | |

ಸುಳ್ಯ : ಕರಾವಳಿ ಭಾಗದಲ್ಲಿ ತೆಂಗಿನ ಮರಗಳಿಗೆ ಹಾನಿ ಮಾಡುತ್ತಿದ್ದ ಬಿಳಿ ನೊಣಗಳೀಗ ಸುಳ್ಯ ನಗರ ಪರಿಸರದಲ್ಲೂ ಕಾಣಿಸಿಕೊಂಡಿದ್ದು, ತಾಲೂಕಿನ ಗ್ರಾಮೀಣ ಪರಿಸರಕ್ಕೂ ವ್ಯಾಪಿಸಬಹುದೆಂಬ ಭೀತಿ ಕೃಷಿಕರನ್ನು ಕಾಡಿದೆ. ತಾಲೂಕಿನಲ್ಲಿ ಅಡಿಕೆ ಹಳದಿ ರೋಗ, ನುಸಿ ರೋಗ, ಕೆಂಪುಮೂತಿ ಹುಳ, ಸಿರಿಕೊಳೆ ರೋಗ ಮುಂತಾದವುಗಳ ಬಾಧೆಯಿಂದ ಕಂಗೆಟ್ಟಿರುವ ರೈತರು ಬಿಳಿ ನೊಣ ಹಾವಳಿಯ ಕಥೆ ಕೇಳಿಯೇ ಬೆಚ್ಚಿ ಬಿದ್ದಿದ್ದಾರೆ. ಸುಳ್ಯ ನಗರದ ಕೆಲವು ಕಡೆ ಬಿಳಿ ನೊಣಗಳ ಹಾವಳಿ ಇರುವುದನ್ನು ತೋಟಗಾರಿಕೆ ಇಲಾಖೆಯೂ ದೃಢಪಡಿಸಿದೆ.

Advertisement

ತಾಲೂಕಿನಲ್ಲಿ ಒಟ್ಟು 3,900 ಹೆಕ್ಟೇರ್‌ ತೆಂಗಿನ ತೋಟಗಳಿವೆ. ಅತಿ ಹೆಚ್ಚಿನ ತೆಂಗು ಕೃಷಿಕರು ಗ್ರಾಮೀಣ ಭಾಗದಲ್ಲಿದ್ದಾರೆ. ಈಗ ನಗರದಲ್ಲಿ ಮಾತ್ರ ಬಿಳಿ ನೊಣಗಳ ಹಾವಳಿ ಹಬ್ಬಿದೆ. ಗ್ರಾಮಾಂತರಕ್ಕೆ ವಿಸ್ತರಿಸಿದರೆ ತಮ್ಮ ಗತಿಯೇನು ಎಂದು ಕೃಷಿಕರು ಚಿಂತಿತರಾಗಿದ್ದಾರೆ.

ಏನಿದು ಸಮಸ್ಯೆ?
ಬಿಳಿಯ ನೊಣಗಳು ಹಚ್ಚ ಹಸಿರಿನಿಂದ ಕಂಗೊಳಿಸುವ ತೆಂಗಿನ ಗರಿಗಳ ಕೆಳಭಾಗದಲ್ಲಿ ಕುಳಿತು ರಸ ಹೀರತೊಡಗುತ್ತವೆ. ಮತ್ತು ಸಿಹಿಯಾದ ದ್ರವವೊಂದನ್ನು ವಿಸರ್ಜಿಸುತ್ತವೆ. ಈ ದ್ರವದ ಮೇಲೆ ಬೂದು ಬಣ್ಣದ ಶಿಲೀಂಧ್ರಗಳು ಬೆಳೆಯತೊಡಗುತ್ತವೆ. ಅವು ಎಲೆಗಳನ್ನು ಆಕ್ರಮಿಸಿದಾಗ ತೆಂಗಿನ ಗರಿಗಳ ಬಣ್ಣ ಮಾಸುತ್ತದೆ. ಮರಗಳ ಆಹಾರೋತ್ಪಾದನೆ ಸ್ಥಗಿತಗೊಂಡು, ತೆಂಗಿನ ಗರಗಳ ಬೆಳವಣಿಗೆ ಹಾಗೂ ಇಳುವರಿ ಕುಂಠಿತಗೊಳ್ಳುತ್ತದೆ. ಕ್ರಮೇಣ ಇಡೀ ಮರ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ, ತೆಂಗಿನ ಮರಗಳು ಸಾಯುವುದಿಲ್ಲ. ಇಳುವರಿ ಮಾತ್ರ ತೀರಾ ಕಡಿಮೆಯಾಗುತ್ತದೆ.

ಮುಂಜಾಗ್ರತಾ ಕ್ರಮವೇನು?
ಈ ರೀತಿಯ ಕೀಟ ಬಾಧೆ ಬಾಳೆ, ಅಡಿಕೆ, ಚಿಕ್ಕು ಮೊದಲಾದ ಗಿಡಗಳಲ್ಲೂ ಕಾಣಿಸಿಕೊಳ್ಳುತ್ತವೆ. ಇವುಗಳ ಮೂಲಕ ಸಂತಾನೋತ್ಪತಿ ಹೆಚ್ಚುತ್ತದೆ. ತೆಂಗಿನ ತೋಟದಲ್ಲಿ ಬಿಳಿ ನೊಣಗಳ ಹಾವಳಿ ಕಂಡುಬಂದರೆ 1 ಲೀಟರ್‌ ನೀರಿಗೆ 3ರಿಂದ 4 ಮಿ.ಲೀ. ಬೇವಿನ ಎಣ್ಣೆಯನ್ನು ಬೆರೆಸಿ ಸಿಂಪಡಿಸಬೇಕು. ತೆಂಗಿನ ತೋಟಗಳಲ್ಲಿ ಹಳದಿ ಅಂಟು ಪರದೆಯನ್ನು 6ರಿಂದ 7 ಅಡಿ ಎತ್ತರದಲ್ಲಿ ಕಟ್ಟಿದರೆ ಕೀಟಗಳು ಆಕರ್ಷಿತವಾಗಿ ಅಂಟಿಕೊಂಡು ಸಾಯುತ್ತವೆ. ಈ ರೀತಿ ಮಾಡಿದರೆ ಬಿಳಿ ನೊಣಗಳನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು. ರೋಗ ಆರಂಭ ಹಂತದಲ್ಲಿ ಒಂದು ಲಘು ಮಳೆಯಾದರೂ ಅದು ತನ್ನಿಂದ ತಾನಾಗಿ ಕಡಿಮೆಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ.

ಬೆಳವಣಿಗೆ ಕುಂಠಿತ
ಸುಳ್ಯ ನಗರ ವ್ಯಾಪ್ತಿಯ ಕೆಲವೆಡೆ ತೆಂಗಿನ ಮರಗಳಲ್ಲಿ ಬಿಳಿ ನೊಣದ ಹಾವಳಿ ಕಂಡುಬಂದಿದ್ದು, ರೋಗ ಬಾಧೆ ದೃಡಪಟ್ಟಿದೆ. ಇಲಾಖೆ ಪರಿಶೀಲಿಸುತ್ತಿದೆ. ಇದರಿಂದ ತೆಂಗಿನ ಮರಗಳು ಸಾಯುವುದಿಲ್ಲ. ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ. ಇದು ಕೆಂದಾಳೆ ಮಾತ್ರವಲ್ಲ ಎಲ್ಲ ರೀತಿಯ ತೆಂಗಿನ ಮರಗಳಲ್ಲೂ ಕಾಣಿಸಿಕೊಳ್ಳುತ್ತದೆ.
–  ಅರಬನ ಪೂಜೇರಿ
   ಪ್ರಭಾರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು

Advertisement

ಎಚ್ಚರ ಅಗತ್ಯ
ನಮ್ಮ ತೆಂಗಿನ ತೋಟದಲ್ಲಿ ಕಾಣಿಸಿಕೊಂಡಿಲ್ಲ. ಕೆಂದಾಳೆ ಜಾತಿಯ ಗಿಡಗಳಿಗೆ ಈ ರೋಗ ಬಾಧೆ ಹೆಚ್ಚು . ಕೀಟವನ್ನು ತಿನ್ನುವ ಪರಾವಲಂಬಿ ಜೀವಿಗಳನ್ನು ಬಿಟ್ಟು ರೋಗ ಹತೋಟಿಗೆ ತರುವ ವ್ಯವಸ್ಥೆಯೂ ಇದೆಯೆಂಬ ಮಾಹಿತಿಯಿದ್ದು, ನಿಖರವಾಗಿ ತಿಳಿದಿಲ್ಲ. ಹಿಂದೆ ಈ ರೀತಿಯ ಸಮಸ್ಯೆ ಇರಲಿಲ್ಲ. ಈಗ ಇದೆ ಎಂದಾದರೆ ಎಚ್ಚರವಿರಬೇಕಾದ್ದು ಅಗತ್ಯ. ನುಸಿಪೀಡೆಯಂತೆ ತಾತ್ಕಾಲಿಕವಾಗಿ ಕಂಡುಬಂದು ಅದರಷ್ಟಕ್ಕೆ ಶಮನವಾದರೆ ಸಾಕು.
ರೋಶನ್‌ ಕುರುಂಜಿ, ಸುಳ್ಯ
   ತೆಂಗು ಕೃಷಿಕರು.

ಇಲಾಖೆ ನಿಗಾವಹಿಸಲಿ
ಅಡಿಕೆ, ತೆಂಗಿಗೆ ವಿವಿಧ ರೋಗಗಳಿಂದ ರೈತರು ಹೈರಣಾಗಿದ್ದಾರೆ. ದೊಡ್ಡ ತೆಂಗಿನ ಮರಗಳಿಗೆ ಈ ರೋಗ ಕಂಡುಬಂದರೆ ಬೇವಿನ ಎಣ್ಣೆ ಬೆರೆಸಿ ಸಿಂಪಡಿಸಿ ಹತೋಟಿ ತಂದುಕೊಳ್ಳುವುದು ಅಸಾಧ್ಯ. ಬಿಳಿ ನೊಣ ಹಾವಳಿ ಬಗ್ಗೆ ಸರಕಾರ ಮತ್ತು ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಲಿ.
– ತೀರ್ಥರಾಮ ಕೆದಂಬಾಡಿ, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next