Advertisement

ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಮಾದಕ ವಸ್ತು ದಂಧೆ

12:57 PM Dec 13, 2017 | |

ಬೆಂಗಳೂರು: ಉಡ್ತಾ ಪಂಜಾಬ್‌ ಆಯ್ತು. ಈಗ “ಉಡ್ತಾ ಬೆಂಗಳೂರು’! ಹೌದು, ಮಾದಕ ವಸ್ತುಗಳ ರಾಜಧಾನಿ ಎಂಬ ಅಪಕೀರ್ತಿಗೆ ಪಂಜಾಬ್‌ ಗುರಿಯಾಗಿತ್ತು. ನಂತರದ ಸ್ಥಾನ ಬೆಂಗಳೂರು ಪಡೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಐಟಿ ಸಿಟಿ, ಗಾರ್ಡ್‌ನ್‌ ಸಿಟಿ, ಸಿಲಿಕಾನ್‌ ಸಿಟಿ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಇದೀಗ ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಅಡ್ಡೆಯಾಗುತ್ತಿದೆ.

Advertisement

ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಮಾದಕ ವಸ್ತುಗಳ ಮಾರಾಟ ಪ್ರಮಾಣದಲ್ಲಿ ಮೂರು ಪಟ್ಟು ಅಧಿಕವಾಗಿದೆ. ಸದ್ಯ ಪೊಲೀಸರು ಪ್ರಸಕ್ತ ವರ್ಷದಲ್ಲಿ 318 ಪ್ರಕರಣಗಳು ಪತ್ತೆಯಾಗಿದ್ದು, 579 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅದೇ ಬಂಧಿತರಿಂದ 500 ಕೆ.ಜಿಗೂ ಅಧಿಕ ಗಾಂಜಾ, ಕೋಕೇನ್‌, ಅಫೀಮು, ಹೆರಾಯಿನ್‌, ಚರಸ್‌ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ 128 ಪ್ರಕರಣಗಳನ್ನ ಪತ್ತೆ ಹಚ್ಚಿದ್ದು, 305 ಮಂದಿಯ ಬಂಧನವಾಗಿತ್ತು. ಹಾಗೆಯೇ 275 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಉತ್ತರ ಭಾರತದಿಂದಲೇ ಬೆಂಗಳೂರಿಗೆ ಮಾದಕ ವಸ್ತುಗಳು ಸರಬರಾಜು ಆಗುತ್ತಿವೆ. ಒಡಿಶಾ, ಪಂಜಾಬ್‌, ಮಣಿಪುರ ಮೂಲಕ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಮೂಲಕ ನಗರದ ಹೊರಭಾಗದ ಪ್ರದೇಶಗಳಾದ ಹೊಸೂರು, ಕೆ.ಆರ್‌.ಪುರಂ, ಹೊಸಕೋಟೆಯಲ್ಲಿ ಈ ದಂಧೆ ಹೆಚ್ಚು ಸಕ್ರಿಯವಾಗಿದೆ.

ರೈಲಿನ ಮೂಲಕ ನಗರಕ್ಕೆ ಬರುವ ಮಾದಕ ವಸ್ತುಗಳನ್ನು ಇಲ್ಲಿಯೇ ಸಣ್ಣ-ಸಣ್ಣ ಪ್ಯಾಕೆಟ್‌ಗಳ ಮೂಲಕ ಮಾರಾಟಗಾರರಿಗೆ ಮಧ್ಯವರ್ತಿಗಳು ಮಾರಾಟ ಮಾಡುತ್ತಿದ್ದಾರೆ. ಇನ್ನು ಅಫೀಮು, ಕೋಕೇನ್‌ ಹೆರಾಯಿನ್‌ಗಳು ವಿದೇಶಗಳಿಂದ ವಿಮಾನದಲ್ಲಿ ಆಮದು ಆಗುತ್ತಿದೆ. ಇವುಗಳನ್ನು ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಪಾರ್ಟಿ ನಡೆಸುವ ಶ್ರೀಮಂತರಿಗೆ, ವಿದ್ಯಾರ್ಥಿಗಳು ಹಾಗೂ ಮಾದಕ ವ್ಯಸನಿಗಳಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ.

Advertisement

ವಿಶೇಷ ಕಾರ್ಯಾಚರಣೆ: ಮಾದಕ ವಸ್ತುಗಳ ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾಗೆಯೇ ಪೊಲೀಸ್‌ ಠಾಣಾ ಮಟ್ಟದಲ್ಲಿಯೂ ಕಾರ್ಯಾಚರಣೆ ನಡೆಸಲಾಗಿದೆ. ಇದರೊಂದಿಗೆ ಮಾದಕ ವಸ್ತು ನಿಯಂತ್ರಣ ಘಟಕ(ಎನ್‌ಸಿಬಿ)ದ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಹೊಂದಿದ್ದಾರೆ.

ಸಿಸಿಬಿಯಲ್ಲಿ 1098 ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಬಹಳಷ್ಟು ಬಾರಿ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ. ಅಷ್ಟೇ ಅಲ್ಲದೇ, ಐಟಿ, ಬಿಟಿ ಮತ್ತು ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಮಾದಕ ವ್ಯಸನಿಗಳಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಆಯಾ ವಲಯ ಡಿಸಿಪಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಈ ಸಮಿತಿ ಕಾಲೇಜು ಆಡಳಿತ ಮಂಡಳಿ ಮತ್ತು ಸಾಫ್ಟ್ವೇರ್‌ ಕಂಪೆನಿಯ ಮುಖ್ಯಸ್ಥರ ಜತೆ ಸಭೆ ನಡೆಸಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಜತೆಗೆ ಡಿಸಿಪಿ ನೇತೃತ್ವದ ಅಪರಾಧ ಪತ್ತೆದಳ ತಂಡ ಕೂಡ ನಿಗಾವಹಿಸಿದೆ. ಆದರೂ ಮೂರು ಪಟ್ಟು ದಂಧೆ ಹೆಚ್ಚಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ: ಮಾದಕ ವ್ಯಸನಿಗಳಾಗಿರುವ ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚಕರ ಮೂಲಕ ಕೌನ್ಸಿಲಿಂಗ್‌ ಮಾಡಲಾಗುವುದು. ಈ ಮೂಲಕ ದಾರಿ ತಪ್ಪುವ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸೀಮಂತ್‌ ಕುಮಾರ್‌ ಸಿಂಗ್‌ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next