ವಾಷಿಂಗ್ಟನ್: ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉಳಿದುಕೊಳ್ಳುವುದಕ್ಕೆ ಸಂಬಂಧಿಸಿ ಜುಲೈ 6ರಂದು ಹೊರಡಿಸಿದ್ದ ವಿವಾದಾತ್ಮಕ ಆದೇಶವನ್ನು ಟ್ರಂಪ್ ಸರಕಾರ ವಾಪಸ್ ಪಡೆದಿದೆ.
ಇದರಿಂದ ಭಾರತದ 2 ಲಕ್ಷ ವಿದ್ಯಾರ್ಥಿಗಳ ಸಹಿತ 10 ಲಕ್ಷಕ್ಕೂ ಅಧಿಕ ಮಂದಿಗೆ ಅನುಕೂಲವಾಗಲಿದೆ.
ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಶಿಕ್ಷಣವನ್ನು ಮುಂದುವರಿಸುವುದಾದರೆ ಅಂತಹ ಸಂಸ್ಥೆಗಳಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ ಎಂದು ಅಮೆರಿಕದ ವಲಸೆ ಪ್ರಾಧಿಕಾರ ಜು.6ರಂದು ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಹಾರ್ವರ್ಡ್ ವಿ.ವಿ., ಎಂಐಟಿ ಸಹಿತ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೊಕ್ಕಿದ್ದವು. ಗೂಗಲ್, ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತಿತರ ಪ್ರತಿಷ್ಠಿತ ಐಟಿ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಫೆಡರಲ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಈ ವಿವಾದ ಇತ್ಯರ್ಥಗೊಂಡಿದೆ. ಜು.6ರಂದು ಹೊರಡಿಸಿರುವ ಆದೇಶ ವಾಪಸ್ ಪಡೆಯುವುದಾಗಿ ಸರಕಾರ ತಿಳಿಸಿದೆ ಎಂದು ನ್ಯಾಯಾಧೀಶರು ಪ್ರಕಟಿಸಿದ್ದಾರೆ.
ಶೀಘ್ರವೇ ಸಹಿ: ಟ್ರಂಪ್
ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅರ್ಹತೆ ಆಧಾರಿತ ವಲಸೆ ಕಾನೂನಿಗೆ ಶೀಘ್ರವೇ ಸಹಿ ಹಾಕುವುದಾಗಿ ತಿಳಿಸಿದ್ದಾರೆ. ಅಮೆರಿಕದ ವಲಸೆ ನೀತಿ ಕುಟುಂಬ ಸಂಬಂಧಗಳಿಗಿಂತ ಹೆಚ್ಚಾಗಿ ಅರ್ಹತೆಯ ಆಧಾರದ ಮೇಲೆ ಇರಬೇಕು ಎಂಬುದು ನನ್ನ ಭಾವನೆ.
ಕೆಲವು ವಲಸೆ ನಿಯಮಗಳು ದೇಶಕ್ಕೆ ಕಾನೂನುಬಾಹಿರವಾಗಿ ಕರೆತಂದ ಮಕ್ಕಳಿಗೆ ಕಾನೂನಾತ್ಮಕ ರಕ್ಷಣೆಯನ್ನು ನೀಡುತ್ತವೆ. ಈ ರೀತಿ ಬಂದವರಲ್ಲಿ ಭಾರತೀಯರು ಅಥವಾ ದಕ್ಷಿಣ ಏಶ್ಯಾ ಮೂಲದವರು ಸಾಕಷ್ಟು ಮಂದಿ ಇದ್ದಾರೆ. ಇಂತಹ ಕುಟುಂಬ ಸಂಬಂಧಿ ವಲಸೆಗೆ ಅವಕಾಶ ನೀಡುವ ವೀಸಾ ನಿಯಮಗಳಿಗೆ ಬದಲಾವಣೆ ತರಲಾಗುವುದು ಎಂದರು.