ಹೊಸದಿಲ್ಲಿ: ಸೂರ್ಯ ನನ್ನೇ ಹಣ್ಣೆಂದು ಭಾವಿಸಿ ತಿನ್ನಲು ವಾಯು ಪುತ್ರ ಹನುಮಂತ ಮುಂದಾ ಗಿದ್ದ ರೀತಿಯಲ್ಲಿ ನಾಸಾದ ಬಾಹ್ಯಾಕಾಶ ನೌಕೆಯೊಂದು ಸೂರ್ಯನ ಪರಿಧಿಗೆ ಮುತ್ತಿಕ್ಕಿ ಭಸ್ಮವಾಗದೆ ವಾಪಸಾಗಿದೆ. ಈ ಮೂಲಕ ನಾಸಾ ಕೂಡ “ಹನುಮ ಸಾಹಸ’ವನ್ನೇ ಮಾಡಿದಂತಾಗಿದೆ.
ಹೌದು, ಅಮೆರಿಕದ ನಾಸಾದ “ಪಾರ್ಕರ್ ಸೋಲಾರ್ ಪ್ರೋಬ್’ ಬಾಹ್ಯಾ ಕಾಶ ನೌಕೆಯು ಸೂರ್ಯನ ಅತೀ ಸಮೀಪದಲ್ಲಿ ಹಾದು ಹೋಗಿದ್ದು, ಭಸ್ಮವಾಗದೆ ಪಾರಾಗಿದೆ.
ಸೂರ್ಯನ ಮೇಲ್ಮೆ„ಯಿಂದ ಕೇವಲ 61 ಲಕ್ಷ ಕಿ.ಮೀ. ದೂರದಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ಹಾದು ಹೋಗಿದೆ. ಸಾಮಾನ್ಯವಾಗಿ ಸೂರ್ಯನ ಇಷ್ಟು ಸಮೀಪಕ್ಕೆ ತೆರಳಿ ಸುರಕ್ಷಿತವಾಗಿ ಉಳಿಯಲು ಯಾವುದೇ ವಸ್ತುವಿಗೂ ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಪಾರ್ಕರ್ ಸುರಕ್ಷಿತವಾಗಿದ್ದು, ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಾಸಾ ಸಂಸ್ಥೆ ಶುಕ್ರವಾರ ತಿಳಿಸಿ ತಮ್ಮ ಸಾಧನೆಯ ಸಂತಸ ಹಂಚಿಕೊಂಡಿದೆ. ಇದು ಸೂರ್ಯನ ಅತೀ ಸಮೀಪಕ್ಕೆ ತೆರಳಿಯೂ ಸುರಕ್ಷಿತವಾಗಿ ಉಳಿದ ಮೊದಲ ಮಾನವ ನಿರ್ಮಿತ ವಸ್ತುವಾಗಿದೆ.
ಡಿ. 24ರಂದು ಸೂರ್ಯನ ಮೇಲ್ಮೈ ಬಳಿ ಹಾದು ಹೋದ ಪಾರ್ಕರ್ ಸೂರ್ಯನ ಹೊರ ವಾತಾ ವರಣ ವಾದ ಕೊರೊನಾದತ್ತ ತೆರಳುತ್ತಿದೆ. ಮೇರಿಲ್ಯಾಂಡ್‌ನ ಜಾನ್ಸ್ ಹಾಪ್ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಲ್ಯಾಬೋರೇಟರಿಯಲ್ಲಿರುವ ಕಾರ್ಯಾ ಚರಣೆಯ ತಂಡಕ್ಕೆ ಗುರುವಾರ ಮಧ್ಯ ರಾತ್ರಿಗೆ ಮುನ್ನ ಪಾರ್ಕರ್ ನೌಕೆಯು “ಬೀಕನ್ ಟೋನ್’ ಮೂಲಕ ತಾನು ಸುರಕ್ಷಿತವಾಗಿರುವ ಬಗ್ಗೆ ಸಂದೇಶ ರವಾನಿಸಿದೆ. ಜ. 1ರ ವೇಳೆಗೆ ನೌಕೆಯು ತನ್ನ ಸ್ಥಿತಿಯ ಬಗ್ಗೆ ಸಂಪೂರ್ಣ ಹಾಗೂ ವಿವರವಾದ ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ನಾಸಾ ಮಾಹಿತಿಯ ಪ್ರಕಾರ, ಸೂರ್ಯನ ಅತೀ ಸಮೀಪದ ಸ್ಥಳದಲ್ಲಿ ಸುಮಾರು 982 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನವನ್ನು ಸಹಿಸಿಕೊಂಡಿದೆ.
ಸೂರ್ಯನ ಬಗ್ಗೆ ಇನ್ನಷ್ಟು ಅಧ್ಯಯನಕ್ಕೆ ಈ ನೌಕೆ ಸಹಾಯ ಮಾಡ ಲಿದೆ. ಸೂರ್ಯನ ಸಮೀಪ ದಲ್ಲಿ ವಸ್ತುಗಳು ಲಕ್ಷಾಂತರ ಡಿಗ್ರಿ ಸೆ.ನಷ್ಟು ಬಿಸಿಯಾಗಲು ಹೇಗೆ ಸಾಧ್ಯ, ಸೌರ ಮಾರುತಗಳ ಮೂಲವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇದು ಸಹಾಯ ಮಾಡಲಿದೆ ಎಂದು ನಾಸಾ ಹೇಳಿದೆ.
ಏನಿದು ನಾಸಾ ಸಾಹಸ?
2018ರಲ್ಲಿ ಉಡಾವಣೆಗೊಂಡ ಪಾರ್ಕರ್ ಸೋಲಾರ್ ಪ್ರೋಬ್‌ನ ಬಾಹ್ಯಾ ಕಾಶ ನೌಕೆಯು ಸೂರ್ಯನ ಸಮೀಪಕ್ಕೆ ತೆರಳಲು ಅಂದಿನಿಂದಲೂ ಸುತ್ತು ಹಾಕುತ್ತ ಪ್ರಯತ್ನಿಸುತ್ತಲೇ ಇದೆ. ಈಗ ಭೂಮಿಯ ಯಾವುದೇ ವಸ್ತುವೂ ತಲುಪ ದಷ್ಟು ಸಮೀಪಕ್ಕೆ ಈ ನೌಕೆ ಹೋಗಿದೆ. ಸೂರ್ಯನ ಮೇಲ್ಮೈನಿಂದ 61 ಲಕ್ಷ ಕಿ.ಮೀ. ದೂರಕ್ಕೆ ಪಾರ್ಕರ್ ಡಿ. 24 ರಂದು ತಲುಪಿದ್ದು, ಅಲ್ಲಿಂದ ಸುರಕ್ಷಿತವಾಗಿ ಪಾರಾಗಿ ಕೊರೋನಾದತ್ತ ಮುನ್ನುಗ್ಗುತ್ತಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಇಂಥ ಸಾಹಸಕ್ಕೆ ನಾಸಾ ಕೈಹಾಕಿ ಯಶ ಕಂಡಿದೆ.