Advertisement
ಶ್ರೀ ಮಧ್ವಾಚಾರ್ಯರು ತಮ್ಮ ತಪಸ್ಸಿನ ಶಕ್ತಿಯಿಂದ ಮಳೆ ಸುರಿಸಿದ ಊರು ಎನ್ನುವ ನಂಬಿಕೆಯನ್ನು ಹೊಂದಿರುವ ರಾಮಕುಂಜ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ನಡುವೆ ಪಶ್ಚಿಮ ಘಟ್ಟದ ತಪ್ಪಲಲ್ಲಿದೆ. ಸುಬ್ರಹ್ಮಣ್ಯ, ಧರ್ಮಸ್ಥಳ ಪುಣ್ಯ ಕ್ಷೇತ್ರಗಳ ನಡುವೆ ವಿದ್ಯಾಕುಂಜವೆಂದೇ ಹೆಸರು ಪಡೆದಿರುವ ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಶಿಕ್ಷಣ ಪಡೆಯುವ ಅವಕಾಶವಿದೆ. ಶ್ರೀ ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಗಳಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಪೈಕಿ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ. ಶಾಲೆಗೆ ಈಗ ನೂರರ ಹರೆಯ. ಸಂಸ್ಕೃತ ಪಾಠ ಶಾಲೆಯಾಗಿ ಆರಂಭಗೊಂಡ ಇದು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದ ಸಂಸ್ಥೆ. ಸುಮಾರು 60 ವರ್ಷಗಳ ಕಾಲ ಶ್ರೀ ರಾಮಕುಂಜೇಶ್ವರ ದೇವಾಲಯದ ಗೋಪುರವೇ ಶಾಲಾ ಕಟ್ಟಡ. ಕಾಲದ ಪ್ರಭಾವಕ್ಕೆ ಒಳಗಾದ ಈ ಶಾಲೆ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳದೆ 1975ರ ವೇಳೆಗೆ ಮಕ್ಕಳ ಸಂಖ್ಯೆಯ ಕೊರತೆಯಿಂದ ಮುಚ್ಚಗಡೆಯ ಭೀತಿಯನ್ನು ಎದುರಿಸಿದಾಗ ಶ್ರೀಗಳು, ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳ ಚಿಂತನೆಯಂತೆ ಹೊಸ ನಿವೇಶನಕ್ಕೆ ಸ್ಥಳಾಂತರಗೊಂಡಿತು. ಶ್ರೀಗಳ ತಪಸ್ಸಿನ ಫಲವೋ ಎಂಬಂತೆ ಕೆಲವೇ ವರ್ಷಗಳಲ್ಲಿ ಈ ಶಾಲೆ ಜನಮಾನಸದಲ್ಲಿ ಅಪಾರ ಪ್ರಭಾವ ಬೀರಿ ಗ್ರಾಮ ಹಾಗೂ ನೆರೆಯ ಗ್ರಾಮಗಳ ಜನರು ಹಾಗೂ ಮಕ್ಕಳ ಆಶಾ ಕೇಂದ್ರವಾಗಿ ಮಾದರಿಯಾಗಿ ಬೆಳೆಯಿತು. ಶಾಲೆಗಳಿಗೇ ಆದರ್ಶ ಶಾಲೆಯಾಯಿತು. ಇಲ್ಲಿನ ಮುಖ್ಯ ಶಿಕ್ಷಕ ಟಿ. ನಾರಾಯಣ ಭಟ್ ಅವರು ಶಿಕ್ಷಣ ಇಲಾಖೆಯ ವಿವಿಧ ಪ್ರಶಸ್ತಿಗಳನ್ನು ಗಳಿಸಿದರು. ಹೆತ್ತವರೂ ಈ ಶಾಲೆಯನ್ನು ಕಂಡು ಹೆಮ್ಮೆ ಪಟ್ಟರು.
Related Articles
ಕನ್ನಡ ಮಾಧ್ಯಮವೆಂದರೆ ಅಷ್ಟಕ್ಕಷ್ಟೇ ಎಂದು ಭಾವಿಸುವ ಜನ ಇಲ್ಲಿನ ಶಿಸ್ತು, ಉತ್ತಮ ಶಿಕ್ಷಣ, ಶಿಕ್ಷಕರ ಬದ್ಧತೆ, ಶ್ರೀಗಳ ಮಾರ್ಗದರ್ಶನ, ಆಡಳಿತ ಮಂಡಳಿಯ ಬೆಂಬಲ ಕಂಡು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ. ಈಗಲೂ ಶಾಲೆಯಲ್ಲಿ ಮಕ್ಕಳ ಸಂಖ್ಯೆ 400ರ ಆಸುಪಾಸಿನಲ್ಲಿದೆ. ಫೆ. 16 ಮತ್ತು 17ರಂದು ಜರಗುವ ಶತ ಸಂಭ್ರಮದ ಸಮಾರಂಭದಲ್ಲಿ ಜಿಲ್ಲೆಯ ಗಣ್ಯರು, ಪೇಜಾವರ ಮಠದ ಉಭಯ ಶ್ರೀಗಳು, ಸುಬ್ರಹ್ಮಣ್ಯ ಮಠಾಧೀಶರು ಭಾಗವಹಿಸಲಿದ್ದಾರೆ.
Advertisement
ಜಿಲ್ಲೆಯ ಶತಮಾನ ಕಂಡ ಹೆಮ್ಮೆಯ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಇಲ್ಲಿ ಕಲಿತ ಸಾವಿರಾರು ಹಿರಿಯ ವಿದ್ಯಾರ್ಥಿಗಳು ಈ ಶಾಲೆಯ ಅಗತ್ಯಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿದ್ದಾರೆ. ಮಾತೃ ಸಂಸ್ಥೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಹಾಗೂ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಕಲ್ಲೇರಿ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಮಿತಿ ಸಂಚಾಲಕರಾದ ಕೆ.ಎಸ್. ರಾಧಾಕೃಷ್ಣ ಕುವೆಚ್ಚಾರು, ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಹಾಗೂ ಸಮಿತಿಯ ಸಂಚಾಲಕ ಕೆ. ಸೇಸಪ್ಪ ರೈ, ಮುಖ್ಯ ಶಿಕ್ಷಕ ಹಾಗೂ ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಭಟ್ ಟಿ., ಆಡಳಿತ ಮಂಡಳಿ ಸದಸ್ಯ ಹಾಗೂ ಸಮಿತಿ ಸಂಚಾಲಕ ಎಸ್. ಪ್ರಕಾಶ ಆಚಾರ್ಯ ಮುಂಬಯಿ, ವಿವಿಧ ಸಮಿತಿಗಳ ಸಂಚಾಲಕರಾದ ಐ. ಶಿವಪ್ರಸಾದ ಇಜ್ಜಾವು, ಸುಬ್ರಹ್ಮಣ್ಯ ಆರ್.ಎಂ. ರಾಮಕುಂಜ, ಪ್ರಶಾಂತ ಆರ್.ಕೆ. ಕಾಜರುಕ್ಕು, ಯು. ಕರುಣಾಕರ ಉರ್ಕ ಅವರ ನೇತೃತ್ವದಲ್ಲಿ ಶತ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.