ಉಡುಪಿ: ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ವಿಶಿಷ್ಟ ಗುಣದ ಆಮೆಯೊಂದಿದೆ. ಇದನ್ನು ಕರೆಯುವುದು “ಬಾಬಾ’ ಎಂದು. ಇದು ಮನುಷ್ಯರಿಗೆ ಸ್ಪಂದಿಸುವ ಗುಣ ಹೊಂದಿದೆ.
ನಿತ್ಯ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಸ್ನಾನಕ್ಕೆ ತೆರಳುವಾಗ ಮತ್ತು ಮಹಾಪೂಜೆ ಮುಗಿಸಿ ಬರುವಾಗ ಆಮೆ, ಮೀನು, ಪಾರಿವಾಳಗಳು, ಆನೆ, ಗೋವುಗಳಿಗೆ ಏನಾದರೂ ಆಹಾರ ಕೊಡುತ್ತಾರೆ.
ಶ್ರೀಕೃಷ್ಣಮಠದ ನೈವೇದ್ಯ ವಿಭಾಗದ ಸಿಬಂದಿ ಶ್ರೀನಿವಾಸ ಭಟ್ ಅವರು ದೇವರಿಗೆ ನೈವೇದ್ಯ ಮಾಡಿದ ದೋಸೆಯನ್ನು ಈ ಆಮೆಗೆ ನಿತ್ಯ ತಿನ್ನಿಸುವುದು ವಿಶೇಷ. ಇವರು ಬಾಬಾ ಎಂದು ಕರೆದಾಗ ನೀರಿನಿಂದ ಮೇಲೆ ಬಂದು ಕೊಟ್ಟ ಆಹಾರವನ್ನು ತಿಂದು ಮತ್ತೆ ನೀರೊಳಗೆ ಸೇರಿಕೊಳ್ಳುತ್ತದೆ. ಕೆಲವು ಬಾರಿ ಅದು ತಟದ ಮೇಲೆ ಬಂದು ಕುಳಿತುಕೊಳ್ಳುವುದೂ ಇದೆ. ಈ ಬಾಬಾ ಕೇವಲ ಸ್ವಾಮೀಜಿ, ಶ್ರೀನಿವಾಸ ಭಟ್ಟರಿಗೆ ಮಾತ್ರವಲ್ಲ ಭಕ್ತರಿಗೂ ಅಚ್ಚುಮೆಚ್ಚು.
ಕಾಸರಗೋಡಿನ ಯಾರೋ ಒಬ್ಬರು ಈ ಆಮೆಯನ್ನು ತಂದು ಬಿಟ್ಟುಹೋದರು ಎಂದು ಶ್ರೀಕೃಷ್ಣಮಠದ ಮೂಲಗಳು ತಿಳಿಸುತ್ತವೆ. ಬೇರೆ ಆಮೆ ಇದ್ದರೂ ಈ ಬಾಬಾ ಇಲ್ಲಿನವರಿಗೆ ಸ್ಪಂದಿಸುವುದು ಅಚ್ಚರಿ. 12 ವರ್ಷಗಳಿಗೊಮ್ಮೆ ಮಧ್ವ ಸರೋವರದಲ್ಲಿ ಗಂಗೆ ಉದ್ಭವವಾಗುತ್ತದೆ ಎಂದು “ಮಧ್ವವಿಜಯ’ ಗ್ರಂಥದಲ್ಲಿ ಉಲ್ಲೇಖವಿದ್ದು ಇಂತಹ ವಿಶಿಷ್ಟ ಸರೋವರದಲ್ಲಿ ವಿಶಿಷ್ಟ ಆಮೆ ಕಂಡುಬಂದಿದೆ.
ಮೀನುಗಳಿಗೆ ಹಾಕಿದಂತೆ ನೀರಿಗೆ ಆಹಾರವನ್ನು ಎಸೆದರೆ ಈ ಆಮೆ ತಿನ್ನುವುದಿಲ್ಲ. ನಾನು ಒಂದು ಬಾರಿ ಕೈಯಲ್ಲಿ ತಿನ್ನಿಸಿದೆ. ಅನಂತರ ಅಭ್ಯಾಸವಾಗಿ ನಿರಂತರವಾಗಿ ಕೈಯಲ್ಲಿ ತಿನ್ನಿಸುತ್ತಿದ್ದೇನೆ. ಮೂರ್‍ನಾಲ್ಕು ವರ್ಷಗಳಿಂದ ಇದು ನಡೆಯುತ್ತಿದೆ.
-ಶ್ರೀನಿವಾಸ ಭಟ್, ಶ್ರೀ ಕೃಷ್ಣಮಠದ ಸಿಬಂದಿ