ಮುಂಬೈ: ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರದ ಶಿವಸೇನೆ v/s ಶಿವಸೇನೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಸ್ಪೀಕರ್ ರಾಹುಲ್ ನಾರ್ವೇಕರ್ ಬುಧವಾರ (ಜನವರಿ 10) ಸಂಜೆ ತೀರ್ಪನ್ನು ಪ್ರಕಟಿಸಿದ್ದಾರೆ.
ನಿಜವಾದ ಶಿವಸೇನೆ ಯಾರದ್ದು-ಸ್ಪೀಕರ್ ಹೇಳಿದ್ದೇನು?
ನಾಯಕತ್ವದ ಬಗ್ಗೆ ಎರಡೂ ಬಣಗಳು ವಿಭಿನ್ನ ದೃಷ್ಟಿಕೋನ ಹೊಂದಿದೆ. 2018ರ ತಿದ್ದುಪಡಿ ಕಾಯ್ದೆಯನ್ನು ಎರಡೂ ಬಣಗಳು ಒಪ್ಪಿಕೊಂಡಿವೆ. ವಿವಾದ ಸೃಷ್ಟಿಗೂ ಮೊದಲಿದ್ದ ನಾಯಕತ್ವ ರಚನೆಯನ್ನೂ ಪರಿಗಣಿಸಬೇಕಾಗುತ್ತದೆ. ಶಿವಸೇನೆ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಘಟನೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ.
ಅರ್ಜಿದಾರ ಉದ್ಧವ್ ಠಾಕ್ರೆ ಅವರ ಪತ್ರ ಪ್ರಸ್ತುತವಾಗಿಲ್ಲ. ಯಾಕೆಂದರೆ ಉದ್ಧವ್ ಠಾಕ್ರೆ ಅವರ 2018ರ ಸಂವಿಧಾನ ಸ್ವೀಕಾರರ್ಹವಲ್ಲ. ತಿದ್ದುಪಡಿ ಒಪ್ಪಲು ಸಾಧ್ಯವಿಲ್ಲ. 2018ರ ಸಂವಿಧಾನ ಗಣನೆಗೆ ತೆಗೆದುಕೊಳ್ಳಬೇಕೆಂಬುದನ್ನು ಒಪ್ಪಲ್ಲ. ಆಯೋಗದ ದಾಖಲೆ ಪ್ರಕಾರ ಶಿಂಧೆ ಬಣ ನಿಜವಾದ ಶಿವಸೇನೆಯಾಗಿದೆ. ನಿಜವಾದ ಶಿವಸೇನೆ ಯಾರು ಎಂದು ನಿರ್ಧರಿಸುವ ಹಕ್ಕು ನನಗಿದೆ ಎಂಬುದು ಸ್ಪೀಕರ್ ನಾರ್ವೇಕರ್ ಪ್ರತಿಪಾದಿಸುವ ಮೂಲಕ ಶಿಂಧೆ ಬಣ ನಿಜವಾದ ಶಿವಸೇನೆ ಎಂಬ ತೀರ್ಪು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಶಿಂಧೆ ಹಾಗೂ ಉದ್ಧವ್ ಬಣದ ಶಾಸಕರು ಉಪಸ್ಥಿತರಿದ್ದರು.
ಏನಿದು ಅನರ್ಹತೆ ಜಟಾಪಟಿ:
ಏಕನಾಥ್ ಶಿಂಧೆ ಬಣದ ಶಾಸಕರು ಪಕ್ಷ ತೊರೆದ ನಂತರ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾವಿಕಾಸ ಅಘಾಡಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಿತ್ತು. ನಂತರ ಏಕನಾಥ್ ಶಿಂಧೆ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದ್ದು, ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಮತ್ತು ಶಿಂಧೆ ಬಣ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದವು. ಈ ಕುರಿತು ಸ್ಪೀಕರ್ ನಾರ್ವೇಕರ್ ತೀರ್ಪು ಪ್ರಕಟಿಸಿದ್ದಾರೆ. ಶಿವಸೇನೆ ಶಾಸಕರ ಪಕ್ಷಾಂತರ ಪ್ರಕರಣದ ಕುರಿತು ಜನವರಿ 10ರೊಳಗೆ ತೀರ್ಪು ಪ್ರಕಟಿಸುವಂತೆ ಸುಪ್ರೀಂಕೋರ್ಟ್ ಗಡುವು ವಿಧಿಸಿತ್ತು. ಇದೀಗ ಸ್ಪೀಕರ್ ತೀರ್ಪು ನೀಡಿದ್ದು, ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದೆ.