“ಸರ್ ನನ್ ತಂಗಿ ಕಾಣೆಯಾಗಿದ್ದಾಳೆ…’ ಹೀಗೆ ಹೇಳುತ್ತ ವ್ಯಕ್ತಿಯೊಬ್ಬ ನಡುರಾತ್ರಿಯಲ್ಲಿ ಪೊಲೀಸ್ ಠಾಣೆಗೆ ಬಂದು ಕಳೆದು ಹೋದ ತಂಗಿ ಫೋಟೋ ಕೊಟ್ಟು, ಆ ಪೊಲೀಸ್ ಅಧಿಕಾರಿ ಮುಂದೆ ತನ್ನ ಅಳಲು ತೋಡಿಕೊಳ್ಳುತ್ತಾನೆ. ಅಲ್ಲಿಂದ ಪೊಲೀಸ್ ತನಿಖೆ ಇನ್ನಷ್ಟು ಚುರುಕಾಗುತ್ತೆ. ಅಷ್ಟೊತ್ತಿಗಾಗಲೇ, ಮಂಗಳ, ಭಾರತಿ, ನಂದಿನಿ ಮತ್ತು ಸುಮಾ ಎಂಬ ನಾಲ್ವರು ಹುಡುಗಿಯರೂ ಕಾಣೆಯಾಗಿರುತ್ತಾರೆ. ಕಾಣೆಯಾದವರೆಲ್ಲರದ್ದು 26ರ ಆಸುಪಾಸಿನ ವಯಸ್ಸು.
ಅಷ್ಟಕ್ಕೂ ಅವರೆಲ್ಲ ಕಾಣೆಯಾಗಿದ್ದು ಯಾಕೆ? ಅವರನ್ನು ಯಾರಾದರೂ ಕಿಡ್ನಾಪ್ ಮಾಡಿದ್ದಾರಾ? ಅಥವಾ ಅವರೆಲ್ಲರೂ ಕೊಲೆಯಾಗಿಬಿಟ್ಟರಾ? ಇಂಥದ್ದೊಂದು ಸಣ್ಣ ಕುತೂಹಲದೊಂದಿಗೇ ಚಿತ್ರ ಶುರುವಾಗುತ್ತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಅಂತ ಮೊದಲ ದೃಶ್ಯದಲ್ಲೇ ಹೇಳುವಷ್ಟರ ಮಟ್ಟಿಗೆ ನಿರ್ದೇಶಕರ ಕೆಲಸ ಕಾಣುತ್ತದೆ. ಇಲ್ಲಿ “ಅದ್ಭುತ’ ಎನಿಸುವಂತಹ ಸಸ್ಪೆನ್ಸ್ ಏನೂ ಇಲ್ಲ. “ಅದು ಭೂತ’ ಎಂಬ ಫೀಲೂ ಇಲ್ಲ.
ಇಲ್ಲಿ ರಾತ್ರಿಯನ್ನು ಎಲ್ಲರೂ ಪ್ರೀತಿಸಿದ್ದಾರೆ. ಹಾಗಾಗಿ ಕಗ್ಗತ್ತಲ ಚಿತ್ರಣವಿದೆ. ರಾತ್ರಿಯಲ್ಲೇ ಹೆದರಿಸುವ ಕಳ್ಳಾಟವಿದೆ. ಇಲ್ಲಿ ಕಥೆ, ಚಿತ್ರಕಥೆಗಿಂತ ಕತ್ತಲು ಬೆಳಕಿನ ಆಟವೇ ಚಿತ್ರದ ಜೀವಾಳ ಎನ್ನಬಹುದು. ಅಂಥದ್ದೊಂದು ಮಬ್ಬುಗತ್ತಲ ವಾತಾವರಣ ಸೃಷ್ಟಿಸಿದ ಛಾಯಾಗ್ರಾಹಕರ ಕ್ಯಾಮೆರಾ ಕೆಲಸವಷ್ಟೇ ಇಲ್ಲಿ ಮಾತಾಡುತ್ತದೆ. ರಾತ್ರಿಯ ಚಿತ್ರಣ ಒಂದು ಕಡೆಯಾದರೆ, ರಾತ್ರಿಯೊಳಗಿನ ಮೌನ ಇನ್ನೊಂದು ಕಡೆ, ಆ ನಡುರಾತ್ರಿಯ ದೃಶ್ಯಗಳಲ್ಲಿ ಇರದ ಮಾತುಗಳು ಮತ್ತೂಂದೆಡೆ.
ಆಗಾಗ ಮಾತ್ರ ಮಾತುಗಳು ಕೇಳುವ ಚಿತ್ರದಲ್ಲಿ ಎಲ್ಲವೂ ನಿಧಾನ. ಮೊದಲರ್ಧವಂತೂ ಬರೀ ಕತ್ತಲ ಚಿತ್ರಣ, ಮಾತಿಲ್ಲದ ದೃಶ್ಯಗಳೇ ಆವರಿಸಿಕೊಂಡಿವೆ. ಮಾತಿಲ್ಲದೆ ತೆರೆಯೂ ಮೌನ, ಚಿತ್ರದ ವೇಗವೂ ನಿಧಾನ. ಏನಾಗುತ್ತಿದೆ ಅಂತ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಮೊದಲರ್ಧ ಮುಗಿದಿರುತ್ತೆ. ದ್ವಿತಿಯಾರ್ಧದಲ್ಲಿ ಮೊದಲರ್ಧದ ಗೊಂದಲಕ್ಕೆ ಉತ್ತರ ಸಿಗುತ್ತದೆ. ಬಹುತೇಕ ಒಂದೇ ಮನೆಯಲ್ಲೇ ಕಥೆ ಸಾಗುತ್ತದೆಯಾದರೂ, ಅಲ್ಲಲ್ಲಿ “ಮೂಕಿ’ ಚಿತ್ರ ನೋಡಿದ ಅನುಭವ ಕಟ್ಟಿಕೊಡುತ್ತದೆ.
ಬರೀ ಕತ್ತಲು, ಮಾತನಾಡದ ಎರಡು ಪಾತ್ರಗಳು, ಭಯಬೀಳಿಸದ ಸನ್ನಿವೇಶಗಳು, ಅದಕ್ಕೊಂದು ಸ್ವಾದವಿರದ ಹಿನ್ನೆಲೆ ಸಂಗೀತದ ಸ್ಪರ್ಶ ನೋಡುಗನ ತಾಳ್ಮೆ ಪರೀಕ್ಷಿಸುವುದು ಸುಳ್ಳಲ್ಲ. ತೆರೆಯ ಮೇಲೆ ಇನ್ನೇನೋ ಆಗಿಬಿಡುತ್ತೆ ಎಂಬ ಉತ್ಸಾಹ ತುಂಬಿಕೊಳ್ಳುವ ಹೊತ್ತಿಗೆ ಮಧ್ಯಂತರ ಬಂದು ಆ ಸಣ್ಣ ಕುತೂಹಲಕ್ಕೊಂದು ನಿರಾಸೆಯೆಂಬ ನೀರನ್ನು ಎರಚಿದಂತಾಗುತ್ತೆ. ಇಲ್ಲಿ ಕಥೆ ಸರಳವಾಗಿದೆ. ಚಿತ್ರಕಥೆಯದ್ದೇ ಸಮಸ್ಯೆ. ಸಸ್ಪೆನ್ಸ್ ಅಂಶಗಳೊಂದಿಗೆ ಸಾಗುವ ಚಿತ್ರದಲ್ಲಿ ಬಿಗಿ ನಿರೂಪಣೆಯ ಅಗತ್ಯ ಇರಬೇಕಿತ್ತು.
ಕೆಲವು ಕಡೆ ಸಣ್ಣಪುಟ್ಟ ತಪ್ಪುಗಳು ಕಾಣಿಸಿಕೊಂಡರೂ, ಒಂದಂಶ ಮಾತ್ರ ಕೊನೆಯವರೆಗೂ ನೋಡುವ ಕುತೂಹಲ ಹುಟ್ಟುಹಾಕಿದೆ. ಐದು ಜನ ಹುಡುಗಿಯರು ಕಾಣೆಯಾಗಲು ಕಾರಣವೇನು, ಅವರನ್ನು ಕಿಡ್ನಾಪ್ ಮಾಡಿದ್ಯಾರು? ಎಂಬ ಪ್ರಶ್ನೆಗೆ ಕೊನೆಯ ಇಪ್ಪತ್ತು ನಿಮಿಷದಲ್ಲಿ ಉತ್ತರ ಸಿಗಲಿದೆ. “ದುನಿಯಾ’ ರಶ್ಮಿಗೆ ಇಲ್ಲಿ ಮಾತಿಲ್ಲದ ಪಾತ್ರ ಸಿಕ್ಕಿದೆ. ಕೇವಲ ಸನ್ನೆಗಳ ಮೂಲಕವೇ ನಟನೆ ಮಾಡಿದ್ದಾರೆ. ಗ್ಲಾಮರ್‌ನಿಂದ ದೂರವಿರುವಂತಹ ಪಾತ್ರ ಇಲ್ಲಿದ್ದು, ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ.
ನಿರಂತ್ ಕೂಡ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಉಳಿದಂತೆ ತನಿಖೆ ಮಾಡುವ ಪೊಲೀಸ್ ಅಧಿಕಾರಿಯಾಗಿ ರಾಜೇಶ್ ರಾಮಕೃಷ್ಣ ಸ್ವಲ್ಪಮಟ್ಟಿಗೆ ಗಮನಸೆಳೆಯುತ್ತಾರೆ. ಉಳಿದಂತೆ ಬರುವ ಪಾತ್ರಗಳ್ಯಾವೂ ಅಷ್ಟಾಗಿ ಗಮನಸೆಳೆಯಲ್ಲ. ಮೊದಲೇ ಹೇಳಿದಂತೆ ರಾತ್ರಿ ಹೊತ್ತಿನ ಚಿತ್ರೀಕರಣ ಕಟ್ಟಿಕೊಡುವುದು ಸುಲಭದ ಮಾತಲ್ಲ. ಇಲ್ಲಿ ಕತ್ತಲ ದೃಶ್ಯಗಳನ್ನು ಸೂರ್ಯೋದಯ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅರಿಂದಂ ಗೋಸ್ವಾಮಿ ಹಿನ್ನೆಲೆ ಸಂಗೀತ ಹಿಂದುಳಿದಿದೆ.
ಚಿತ್ರ: ಕಾರ್ನಿ
ನಿರ್ಮಾಣ: ಗೋವಿಂದರಾಜು
ನಿರ್ದೇಶನ: ವಿನೋದ್
ತಾರಾಗಣ: ರಶ್ಮಿ, ನಿರಂತ್, ರಾಜೇಶ್ ರಾಮಕೃಷ್ಣ, ಕರಣ್ ಗಜ ಮುಂತಾದವರು
* ವಿಜಯ್ ಭರಮಸಾಗರ