Advertisement

Independence Day: ಧ್ವಜಾರೋಹಣ ಯಾರು ನೆರವೇರಿಸಬೇಕು?- ಕೇಜ್ರಿವಾಲ್‌ V/s ಲೆ.‌ ಗವರ್ನರ್

05:47 PM Aug 13, 2024 | Team Udayavani |

ನವದೆಹಲಿ: ಗುರುವಾರ (ಆ.15) ನಡೆಯಲಿರುವ ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಸುವ ವಿಚಾರದಲ್ಲಿ ಮತ್ತೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಮತ್ತು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಡುವೆ ಅಧಿಕಾರದ ಸಮರ ಮುಂದುವರಿದಿದ್ದು, ಧ್ವಜಾರೋಹಣ ವಿಚಾರದಲ್ಲಿ ಕೇಜ್ರಿವಾಲ್‌ ಸೂಚಿಸಿದ ಹೆಸರನ್ನು ತಿರಸ್ಕರಿಸಿ, ದೆಹಲಿ ಗೃಹ ಸಚಿವ ಕೈಲಾಶ್‌ ಗಹ್ಲೋಟ್‌ ಹೆಸರನ್ನು ಸೂಚಿಸಿರುವ ಬೆಳವಣಿಗೆ ನಡೆದಿದೆ.

Advertisement

ಏನಿದು ಜಟಾಪಟಿ:

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದು, ತನ್ನ ಅನುಪಸ್ಥಿತಿಯಲ್ಲಿ ಶಿಕ್ಷಣ ಸಚಿವೆ ಅತಿಶಿ ದೆಹಲಿ ಸರ್ಕಾರದ ಪರವಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಘೋಷಿಸಿದ್ದರು. ಆದರೆ ಲೆ.ಗ. ಸಕ್ಸೇನಾ ಅವರು ಕೇಜ್ರಿವಾಲ್‌ ಅವರ ನಿರ್ದೇಶನ ತಿರಸ್ಕರಿಸಿದ್ದರು.

ಈ ವಿಚಾರದಲ್ಲಿ ಲೆ.ಗವರ್ನರ್‌ ಸಕ್ಸೇನಾ ಅವರ ಕಚೇರಿ ಮಂಗಳವಾರ ಸಂಜೆ ದೀರ್ಘ ಪ್ರಕಟನೆ ಹೊರಡಿಸಿದ್ದು, ಗೃಹ ಸಚಿವ ಗಹ್ಲೋಟ್‌ ಅವರನ್ನು ಧ್ವಜಾರೋಹಣ ನೆರವೇರಿಸಲು ನೇಮಕ ಮಾಡಲಾಗಿದ್ದು, ಧ್ವಜಾರೋಹಣದ ನಂತರ ದೆಹಲಿ ಪೊಲೀಸರು ಜಾಥಾ ನಡೆಸಲಿದ್ದು, ಈ ಕುರಿತು ಗೃಹ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಲು ಲೆಫ್ಟಿನೆಂಟ್‌ ಗವರ್ನರ್‌ ಸಕ್ಸೇನಾ ಅವರು ಗೃಹ ಸಚಿವ ಕೈಲಾಶ್‌ ಗಹ್ಲೋಟ್‌ ಅವರನ್ನು ನೇಮಕ ಮಾಡಿರುವುದಾಗಿ ವರದಿ ವಿವರಿಸಿದೆ.

Advertisement

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿರ್ಧಾರ ಅಸಿಂಧುವಾಗಿದೆ ಎಂದು ಲೆ.‌ ಗವರ್ನರ್ ಸಕ್ಸೇನಾ ತಿಳಿಸಿದ್ದಾರೆ. ಏತನ್ಮಧ್ಯೆ ದೆಹಲಿ ಜೈಲು ಕಾಯ್ದೆಯ ಪ್ರಕಾರ ಇದು ಕೇಜ್ರಿವಾಲ್‌ ಅವರಿಗೆ ನೀಡಲಾದ ಅಧಿಕಾರದ ದುರುಪಯೋಗವಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next