Advertisement
“ಪದಕ ಗೆದ್ದರೂ ರಾಜ್ಯದ ಕ್ರೀಡಾಪಟುಗಳಿಗೆ ಸಿಕ್ಕಿಲ್ಲ ಕಾಸು!’ ಎನ್ನುವ ಶೀರ್ಷಿಕೆಯಡಿ ಉದಯವಾಣಿ ಪ್ರಕಟಿಸಿದ್ದ ವಿಶೇಷ ವರದಿಗೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಕ್ಷಿಪ್ರಗತಿಯಲ್ಲಿ ಸ್ಪಂದಿಸಿದ್ದು, ಹಣ ಬಿಡುಗಡೆ ಕುರಿತಂತೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್. ಪ್ರಸಾದ್ ಜತೆಗೆ ತುರ್ತು ಸಭೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪದಕ ವಿಜೇತ ಕ್ರೀಡಾಪಟುಗಳ ಪಟ್ಟಿಯನ್ನು ಎರಡು ದಿನಗಳಲ್ಲಿ ಹಣಕಾಸು ಇಲಾಖೆಗೆ ಕ್ರೀಡಾ ಇಲಾಖೆ ಕಳುಹಿಸಿ ಕೊಡಲಿದೆ. ಪಟ್ಟಿಯಲ್ಲಿರುವ ಅರ್ಹ ಕ್ರೀಡಾಪಟುಗಳ ಸಾಧನೆಯನ್ನು ಹಣಕಾಸು ಇಲಾಖೆ ಪರಿಶೀಲನೆ ನಡೆಸಲಿದೆ. ಬಳಿಕ ಫೆಬ್ರವರಿಯಲ್ಲಿ ಅನುದಾನ ನೀಡುವ ಕುರಿತು ಹಣಕಾಸು ಇಲಾಖೆ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದಯವಾಣಿಗೆ ಮಾಹಿತಿ ನೀಡಿದ್ದು, ಮುಂದಿನ ಎರಡು ತಿಂಗಳ ಒಳಗೆ ಹಣ ಬಿಡುಗಡೆಯಾಗುವುದು ಖಚಿತ ಎಂದಿದ್ದಾರೆ.
Related Articles
2014ನೇ ಸಾಲಿನಿಂದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಕ್ರೀಡಾ ಇಲಾಖೆ ಯಿಂದ ಸಿಕ್ಕಿರಲಿಲ್ಲ. ಅಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಇಲಾಖೆ ಬಳಿ ಅನುದಾನ ಇರಲಿಲ್ಲ. ಈ ಬಗ್ಗೆ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಕಳೆದ ವರ್ಷವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ್ದರು. ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು. ಆದರೆ ಅದು ಪ್ರಗತಿಯಲ್ಲಿ ಇರಲಿಲ್ಲ. ಇದರಿಂದ ಸಾಕಷ್ಟು ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಡಕಾಗಿತ್ತು.
Advertisement
ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜತೆ ತುರ್ತು ಸಭೆ ನಡೆಸಿ ಕ್ರೀಡಾಪಟುಗಳಿಗೆ ನೀಡಲು ಬಾಕಿ ಇರುವ 14.50 ಕೋಟಿ ರೂ. ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಅವರೂ ಮನವಿಗೆ ಸ್ಪಂದಿಸಿದ್ದು, ಕ್ರೀಡಾ ಇಲಾಖೆಯಿಂದ ಪದಕ ವಿಜೇತ ಅಥ್ಲೀಟ್‌ಗಳ ಪಟ್ಟಿಯನ್ನು ಎರಡು ದಿನಗಳ ಒಳಗಾಗಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. ಮುಂದಿನ ಎರಡು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಯಲಿದೆ.ಪ್ರಮೋದ್ ಮಧ್ವರಾಜ್, ಯುವಜನ ಮತ್ತು ಕ್ರೀಡಾ ಸಚಿವ