ಸ್ಟಾಕ್‌ಹೋಮ್: ಪ್ರತಿಷ್ಠಿತ ನೊಬೆಲ್ ಪುರಸ್ಕಾರ ಪ್ರಕಟಿಸುವ ಸ್ವೀಡನ್‌ನ ಸಮಿತಿಯ ಸದಸ್ಯರ ವಿರುದ್ಧ 18ಕ್ಕೂ ಹೆಚ್ಚು ಮಹಿಳೆಯರು ಲೈಂಗಿಕ ಕಿರುಕುಳ, ಅತ್ಯಾಚಾರದ ಆರೋಪ ಮಾಡಿದ ಪ್ರಕರಣದ ಬೆನ್ನಲ್ಲೇ ಇದೀಗ ಸಾಹಿತ್ಯ ನೊಬೆಲ್‌ಗೆ ಪರ್ಯಾಯವಾಗಿ ಪುರಸ್ಕಾರ ನೀಡುವುದಕ್ಕಾಗಿ ಸಮಿತಿಯೊಂದು ಸ್ವೀಡನ್‌ನಲ್ಲಿ ರಚನೆಯಾಗಿದೆ. ಸ್ವೀಡನ್‌ನ 100ಕ್ಕೂ ಹೆಚ್ಚು ಪ್ರತಿಭಾನ್ವಿತರು ಈ ಸಮಿತಿಗೆ ಬೆಂಬಲ ನೀಡಿದ್ದಾರೆ.
ಅಲ್ಲದೆ ಇಡೀ ಪುರಸ್ಕಾರ ನೀಡುವ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುತ್ತದೆ ಎಂದಿದ್ದಾರೆ. ನೊಬೆಲ್ ಪುರಸ್ಕಾರ ನೀಡುವ ಸಮಿತಿಯಲ್ಲಿ ಹಲವರು ರಾಜೀನಾಮೆ ನೀಡಿದ್ದು, 70 ವರ್ಷದ ನಂತರದಲ್ಲಿ ಇದೇ ಮೊದಲ ಬಾರಿಗೆ ಸಾಹಿತ್ಯಕ್ಕಾಗಿನ ನೊಬೆಲ್ ಪುರಸ್ಕಾರ ಪ್ರಕಟಣೆ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ.
ಪ್ರಶಸ್ತಿ ಮೊತ್ತವನ್ನು 75 ಲಕ್ಷ ರೂ.ಗೆ ನಿಗದಿಪಡಿಸಲಾಗಿದ್ದು, ಇದನ್ನು ಕ್ರೌಡ್‌ಫಂಡ್ ಮೂಲಕ ಸಂಗ್ರಹಿಸಲಾಗಿದೆ. ಜುಲೈ 8 ರೊಳಗೆ ಜನರು ಇಬ್ಬರು ಲೇಖಕರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ನಂತರ ಇದನ್ನು ಆನ್‌ಲೈನ್‌ನಲ್ಲಿ ಮತಕ್ಕೆ ಹಾಕಲಾಗುತ್ತದೆ. ವಿಶ್ವಾದ್ಯಂತ ಜನರು ಮತ ಹಾಕಬಹುದಾಗಿದ್ದು, ಇದರ ಆಧಾರದ ಮೇಲೆ ಅಕ್ಟೋಬರ್ 14ರಂದು ಪುರಸ್ಕೃತರನ್ನು ಘೋಷಿಸಲಾಗುತ್ತದೆ. ಡಿಸೆಂಬರ್‌ನಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಎಲ್ಲವೂ ಸರಿಯಿದ್ದರೆ, ಇದೇ ಅವಧಿಯಲ್ಲಿ ನೊಬೆಲ್ ಪುರಸ್ಕಾರ ಪ್ರದಾನವೂ ನಡೆಯುತ್ತಿತ್ತು. ಹೊಸ ಪುರಸ್ಕಾರಕ್ಕೆ ಸ್ವೀಡಿಶ್ ರೈಟ್ ಲೈವ್‌ಲಿಹುಡ್ ಅವಾರ್ಡ್ ಎಂದು ಹೆಸರಿಸಲಾಗಿದೆ.
100ಕ್ಕೂ ಹೆಚ್ಚು ಮಂದಿ
ಗಣ್ಯರಿಂದ ಬೆಂಬಲ
ಪ್ರಶಸ್ತಿ ಮೊತ್ತ 75 ಲಕ್ಷ ರೂ.ಗೆ ನಿಗದಿ
ಕ್ರೌಡ್‌ಫಂಡ್ ಮೂಲಕ ಪ್ರಶಸ್ತಿ ಮೊತ್ತ ಸಂಗ್ರಹ