Advertisement

ಪುರಭವನದ ಆವರಣ ಈಗ ಗುಜರಿ ವಸ್ತುಗಳ ಡಂಪಿಂಗ್‌ ಯಾರ್ಡ್‌ !

11:10 AM Oct 04, 2018 | Team Udayavani |

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ಒತ್ತುವರಿ ವ್ಯಾಪಾರಿಗಳ ತೆರವು ಮತ್ತು ಜಾಹೀರಾತು ಫ‌ಲಕಗಳ ತೆರವು ಕಾರ್ಯಾಚರಣೆ ಸಂದರ್ಭ ವಶಪಡಿಸಿಕೊಂಡಿರುವ ವಸ್ತುಗಳನ್ನು ನಗರದ ಪುರಭವನದ ಆವರಣದಲ್ಲಿ ರಾಶಿ ಹಾಕಲಾಗುತ್ತಿದ್ದು, ನಾನಾ ಸಮಾರಂಭಗಳಿಗೆ ಸಾಕ್ಷಿಯಾಗುವ ಪುರಭವನದ ಆವರಣವು ಇದೀಗ ಮಿನಿ ಡಂಪಿಂಗ್‌ ಯಾರ್ಡ್‌ ಆಗಿ ಬದಲಾಗುತ್ತಿದೆ.

Advertisement

ಯಾವುದೇ ನಗರಗಳಲ್ಲಿ ಪುರಭವನ ಎನ್ನುವುದು ಅತ್ಯಂತ ಪ್ರತಿಷ್ಠಿತ ಹಾಗೂ ಎಲ್ಲರ ಗಮನಸೆಳೆಯುವ ಕಟ್ಟಡ. ಆದರೆ, ನಗರದ ಪುರಭವನದ ಆವರಣದತ್ತ ನೋಟ ಹರಿಸಿದರೆ ಅಲ್ಲಿ ಬರೀ ಪ್ಲಾಸ್ಟಿಕ್‌ ಬ್ಯಾನರ್‌, ತಂಪು ಪಾನೀಯ ಬಾಟಲಿ ಗಳು, ಕಾಗದ, ರಟ್ಟಿನ ಪೆಟ್ಟಿಗೆ, ತರಕಾರಿ ಖಾಲಿ ಟ್ರೇಗಳೇ ಕಾಣಿಸುತ್ತದೆ. ಕೆಲವು ತಿಂಗಳ ಹಿಂದೆಯಷ್ಟೇ ಪುರಭವನ ನವೀಕರಣಗೊಳಿಸಲಾಗಿತ್ತು. ಆ ವೇಳೆ ಹಾಕಲಾಗಿದ್ದ ಕಬ್ಬಿಣ ಮತ್ತು ಕಸದ ರಾಶಿ, ಕಾಮಗಾರಿಗೆ ಬಳಸಿ ಉಳಿದ ವಸ್ತುಗಳನ್ನು ಪುರಭವನದ ಆವರಣದ ಬದಿಯಲ್ಲಿ ರಾಶಿ ಹಾಕಲಾಗಿದ್ದು, ಇದರಿಂದ ಪುರಭವನದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.

ಅಸಹ್ಯ ಪಡಬೇಕಾದ ಸ್ಥಿತಿ
ನಗರದ ವಿವಿಧೆಡೆ ಫ‌ುಟ್‌ಪಾತ್‌ ಒತ್ತುವರಿ ಮಾಡಿ ವ್ಯಾಪಾರ ಮಾಡುತ್ತಿರುವವರ ತೆರವು ಕಾರ್ಯಾಚರಣೆಗಳು ನಡೆದರೆ ಅಲ್ಲಿಂದ ವಶಪಡಿಸಿಕೊಂಡ ವಸ್ತುಗಳನ್ನು ಕೂಡ ತಂದು ಪುರಭವನದ ಆವರಣದಲ್ಲಿ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಿಗೆ ಆಗಮಿಸುವ ಜನರು ಕಸದ ರಾಶಿ ನೋಡಿ ಅಸಹ್ಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಪಾಲಿಕೆ ಬೇಜಾವಾಬ್ದಾರಿಯನ್ನು ನೋಡಿ ಆಕ್ರೋಶ ವ್ಯಕ್ತಪಡಿಸುಂತಾಗಿದೆ. ಗುಜಿರಿ ರಾಶಿಗೆ ಮಳೆ ನೀರು ಬಿದ್ದು, ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಯೂ ಇದೆ. ಒಂದೊಮ್ಮೆ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದರೆ ವಾಹನ ಪಾರ್ಕಿಂಗ್‌ ಮಾಡಲು ಕಷ್ಟ ಪಡಬೇಕಾದ ಸ್ಥಿತಿ ಎದುರಾಗುತ್ತದೆ ಎನ್ನುವ ಆರೋಪವೂ ಕಾರ್ಯಕ್ರಮ ಆಯೋಜಕರಿಂದ ಕೇಳಿ ಬರುತ್ತಿದೆ.

ಜಾಗದ ಕೊರತೆ?
ಹಾಕಲು ಸೂಕ್ತ ಜಾಗದ ಕೊರತೆ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಹಾಗೂ ಇನ್ನಿತರ ಸಂದರ್ಭ ದೊರೆಯುವ ಗುಜಿರಿ ವಸ್ತುಗಳನ್ನು ಪುರಭವನದ ಆವರಣ ಹಾಗೂ ಪಾಲಿಕೆ ಹಿಂಭಾಗದಲ್ಲಿ ರಾಶಿ ಹಾಕಲಾಗುತ್ತಿದೆ. ನಗರದ ವಿವಿಧ ಭಾಗದಲ್ಲಿ ಪಾಲಿಕೆ ಅಧೀನದ ಜಾಗಗಳನ್ನು ಅನಧೀಕೃತವಾಗಿ ಒತ್ತುವರಿ ಮಾಡಿದ್ದರೂ ಅದರ ವಿರುದ್ಧ ಕ್ರಮ ಜರಗಿಸಲು ಹಿಂದೇಟು ಹಾಕುತ್ತಿರುವ ಪಾಲಿಕೆ ತಮ್ಮ ಆವಶ್ಯಕತೆಗೆ ಬೇಕಾದ ಸ್ಥಳಗಳನ್ನು ಇರಿಸಿಕೊಳ್ಳಲು ವಿಫಲವಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಉದ್ಯಾನವನ ಮಾಡಿದರೆ ಪುರಭವನಕ್ಕೆ ಶೋಭೆ 
ಪುರಭವನದಲ್ಲಿ ದಿನನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಸಮಾರಂಭಗಳು ನಡೆಯುತ್ತಿರುತ್ತವೆ. ಪುರಭವನದ ಮೇರುಗನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸುಂದರ ಉದ್ಯಾನವನವನ್ನು ನಿರ್ಮಿಸಬಹುದು. ಇದರಿಂದ ಅಲ್ಲಿಗೆ ಬರುವ ಜನರ ಮನಸ್ಸಿಗೂ ನೆಮ್ಮದಿ ದೊರೆಯುವುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರಗಿಸಬೇಕು ಎಂಬುದು ಸಾರ್ವಜನಿಕರ ಆಶಯ.

Advertisement

ಶೀಘ್ರ ತೆರವಿಗೆ ಸೂಚನೆ
ಪುರಭವನದ ಆವರಣದಲ್ಲಿ ರಾಶಿ ಹಾಕಿರುವ ಗುಜಿರಿ ವಸ್ತುಗಳನ್ನು ಮಹಾನಗರ ವ್ಯಾಪ್ತಿಯಲ್ಲಿ ಇರುವ ಸರಕಾರಿ ಜಾಗಗಳನ್ನು ಗುರುತಿಸಿ ಅಲ್ಲಿಗೆ ಸ್ಥಳಾಂತರಿಸುವ ಕೆಲಸ ಶೀಘ್ರವೇ ಆಗಲಿದೆ.
 - ಭಾಸ್ಕರ್‌ ಕೆ., ಮೇಯರ್‌

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next