Advertisement

“ನಮ್ಮ ಮೆಟ್ರೋ’ದಲ್ಲಿ ಹಿಂದಿ: ಎಚ್‌ಡಿಕೆ, ಕರವೇ ವಿರೋಧ

11:11 AM Jun 24, 2017 | Team Udayavani |

ಬೆಂಗಳೂರು: ನಮ್ಮ ಮೆಟ್ರೋ  ನಿಲ್ದಾಣ ಹಾಗೂ ರೈಲುಗಳಲ್ಲಿ ಹಿಂದಿ ಬಳಕೆ ವಿರುದ್ಧ ರಾಜ್ಯದ ಎಲ್ಲರೂ ಧ್ವನಿ ಎತ್ತಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮೆಟ್ರೋದಲ್ಲಿ ಹಿಂದಿಯ ಬಳಕೆ ಅಗತ್ಯವೇ ಇಲ್ಲ. ಹಿಂದಿ ಬಳಸುವ ಮೂಲಕ ಹಂತ ಹಂತವಾಗಿ ಪ್ರಾದೇಶಿಕ ಭಾಷೆಯನ್ನು ನಾಶ ಮಾಡುವ ಪ್ರಯತ್ನ ನಡೆದಿದೆ.

Advertisement

ಇದನ್ನು ತಕ್ಷಣ ನಿಲ್ಲಿಸದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು. ಹಿಂದಿ ಬಳಸಿದರೆ ತಪ್ಪೇನು ಎಂದು ಬಿಜೆಪಿಯ ಸಿ.ಟಿ.ರವಿ ಪ್ರಶ್ನಿಸುತ್ತಾರೆ. ರಾಷ್ಟ್ರೀಯ ಪಕ್ಷದವರು ಹೇಗೆ ರಾಜ್ಯದ ಹಿತಾಸಕ್ತಿ ಬಲಿ ಕೊಡುತ್ತಾರೆ ಎಂಬುದಕ್ಕೆ ಅವರ ಮಾತೇ ಸಾಕ್ಷಿ ಎಂದು ತಿಳಿಸಿದರು.

ಕರವೇಯಿಂದ ಹೋರಾಟ: ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ಹಿಂದಿ ಬಳಕೆ ಖಂಡಿಸಿ ಶುಕ್ರವಾರ ಶಾಂತಿನಗರದ ಬಿಎಂಆರ್‌ಸಿ ಕಚೇರಿ ಎದುರು ಪ್ರಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಿಂದಿ ನಾಮಫ‌ಲಕಗಳ ತೆರವಿಗೆ ವಾರದ ಗಡುವು ನೀಡಿದರು. 

ಗ್ರಾಹಕರಿಗೆ ಮಾಹಿತಿ ನೀಡುವ ನೆಪದಲ್ಲಿ ಅನವಶ್ಯಕವಾಗಿ ಹಿಂದಿ ಬಳಕೆ ಮಾಡಲಾಗುತ್ತಿದೆ. ಹಿಂದಿ ಒಂದು ರಾಜ್ಯ ಭಾಷೆ ಹೊರತು, ರಾಷ್ಟ್ರಭಾಷೆ ಅಲ್ಲ. ಹೀಗಿರುವಾಗ, ಅನ್ಯರಾಜ್ಯದ ಭಾಷೆಯನ್ನು “ನಮ್ಮ ಮೆಟ್ರೋ’ದಲ್ಲಿ ಬಳಸುವುದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ||

ಯಾವುದೇ ಕಾರಣಕ್ಕೂ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫ‌ಲಕಗಳಾಗಲಿ ಮತ್ತು ಧ್ವನಿ ಮುದ್ರಿತ ಪ್ರಕಟಣೆಗಳಾಗಲಿ ಇರಕೂಡದು. ವಾರದಲ್ಲಿ ತೆರವುಗೊಳಿಸಬೇಕು. ಇಲ್ಲದಿದ್ದರೆ ನಿಲ್ದಾಣಗಳಿಗೆ ಮುತ್ತಿಗೆ ಹಾಕಿ ಹಿಂದಿ ಫ‌ಲಕಗಳನ್ನು ಕಿತ್ತುಹಾಕಲಾಗುವುದು ಎಂದು ಎಚ್ಚರಿಸಿದರು. 

Advertisement

ಪ್ರತಿಭಟನೆಯಲ್ಲಿ ಟಿ.ಎ. ನಾರಾಯಣಗೌಡ ಮಾತನಾಡಿ, “ನಮ್ಮ ಮೆಟ್ರೋ’ದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಮಾತ್ರ ಬಳಸುವಂತೆ ಆಗ್ರಹಿಸಿದರು. ಅಷ್ಟಕ್ಕೂ ಈ ಹಿಂದೆ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗ ಮತ್ತು ನಾಗಸಂದ್ರದಿಂದ ಸಂಪಿಗೆ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲಿ ನಾಮಫ‌ಲಕಗಳು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿವೆ. ಹೊಸ ಮಾರ್ಗದಲ್ಲಿ ಯಾಕೆ ಹಿಂದಿ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವಾರದೊಳಗೆ ಹಿಂದಿ ನಾಮಫ‌ಲಕಗಳನ್ನು ತೆರವು ಮಾಡುವಂತೆ ಒತ್ತಾಯಿಸಿದರು. ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಅವರಿಗೆ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next