“ನಮ್ ತಾಯಾಣೆಗೂ ನಾನ್ ಹೀರೋ ಅಲ್ಲ, ಪ್ರೊಡ್ನೂಸರ್ ಅಷ್ಟೇ …’ ಅಂತ ಚಿತ್ರದ ಜಾಹೀರಾತಿನಲ್ಲೇ ಹಾಕಿಸಿಕೊಂಡು ಬಿಟ್ಟಿದ್ದರು ಸ್ಕಂದ ಆಡಿಯೋದ ಪ್ರಸನ್ನ. ಈ ಮೂಲಕ ಈ ಚಿತ್ರದ ಹೀರೋ ಬೇರೆ ಯಾರೋ ಇರುತ್ತಾರೆ ಎಂದು ಸೂಕ್ಷ್ಮವಾಗಿ ಹಿಂಟ್ ಕೊಟ್ಟಿದ್ದರು. ಆದರೆ, ಆ ಹೀರೋ ಯಾರೂ? ಅವರು ಉತ್ತರಿಸಿರಲಿಲ್ಲ. ರೆಸಾರ್ಟನಲ್É ಅವ್ರೇ ಅಂತ ಇತ್ತು. ಹೋಗಲಿ ನಿರ್ದೇಶಕರು ಯಾರು ಎಂದರೆ ಅದಕ್ಕೂ ಸರಿಯಾದ ಉತ್ತರವಿಲ್ಲ. ಕೋಟಿ ಕೇಳ್ತಾವ್ರೇ ಅಂತ ಜಾಹೀರಾತಿನಲ್ಲಿತ್ತೇ ಹೊರತು, ಆ ಕೋಟಿ ಕೇಳ್ಳೋ ಪುಣ್ಯಾತ್ಮ ಯಾರು ಅಂತ ಮಾತ್ರ ಬಿಟ್ಟುಕೊಟ್ಟಿರಲಿಲ್ಲ.
ಈಗ ಕೊನೆಗೂ ಉತ್ತರ ಸಿಕ್ಕಿದೆ. “ಗಣೇಶ್ ಮೆಡಿಕಲ್ಸ್’ನ ಹೀರೋ ಆಗಿ ಸತೀಶ್ ನೀನಾಸಂ ನಟಿಸುತ್ತಿದ್ದರೆ, ಚಿತ್ರದ ನಿರ್ದೇಶನವನ್ನು ವಿಜಯಪ್ರಸಾದ್ ಮಾಡಲಿದ್ದಾರೆ. ಇವರಿಬ್ಬರೂ ಪ್ರಸನ್ನ ಜೊತೆಗೆ ಈ ಹಿಂದೆ ಕೆಲಸ ಮಾಡಿದವರೇ. ಪ್ರಸನ್ನ ನಿರ್ಮಾಣದ “ನೀರ್ ದೋಸೆ’ ಚಿತ್ರವನ್ನು ವಿಜಯಪ್ರಸಾದ್ ನಿರ್ದೇಶಿಸಿದರೆ, “ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲಿ ಸತೀಶ್ ನಾಯಕರಾಗಿದ್ದರು. ತಮ್ಮ ಮೊದಲ ಚಿತ್ರದ ನಿರ್ದೇಶಕ ಮತ್ತು ಎರಡನೆಯ ಚಿತ್ರದ ನಾಯಕರನ್ನೇ ಇಟ್ಟುಕೊಂಡು ಮೂರನೆಯ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ಪ್ರಸನ್ನ.
ವಿಜಯಪ್ರಸಾದ್ ಮತ್ತು ಸತೀಶ್ ಈ ಹಿಂದೆ “ಪೆಟ್ರೋಮ್ಯಾಕ್ಸ್’ ಎಂಬ ಚಿತ್ರ ಮಾಡಬೇಕಿತ್ತು. ಚಿತ್ರ ಸೆಟ್ಟೇರಿದರೂ, ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಈಗ “ಪೆಟ್ರೋಮ್ಯಾಕ್ಸ್’ ಪಕ್ಕಕ್ಕಿಟ್ಟು ಇಬ್ಬರೂ “ಗಣೇಶ್ ಮೆಡಿಕಲ್ಸ್’ ಚಿತ್ರದ ಮೂಲಕ ಒಟ್ಟಾಗುತ್ತಿದ್ದಾರೆ. “ವಿಜಯಪ್ರಸಾದ್ ಅವರ ಜೊತೆಗೆ ಈ ಹಿಂದೆಯೇ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸ್ಟ್ರಕ್ ಆಗಿತ್ತು. ಈಗ ಕಾಲ ಕೂಡಿ ಬಂದಿದೆ. ವಿಜಯಪ್ರಸಾದ್ ಬಹಳ ಒಳ್ಳೆಯ ಕಥೆ ಮಾಡಿದ್ದಾರೆ. ಶೂಟಿಂಗ್ ಶುರು ಮಾಡಬೇಕು. ಅದಕ್ಕೂ ಮುನ್ನ ಇಬ್ಬರೂ ನಮ್ಮ ಈಗಿರುವ ಚಿತ್ರಗಳನ್ನು ಮುಗಿಸಬೇಕು’ ಎನ್ನುತ್ತಾರೆ ಸತೀಶ್ ನೀನಾಸಂ.
ಅಂದಹಾಗೆ, “ಗಣೇಶ್ ಮೆಡಿಕಲ್ಸ್’ ಚಿತ್ರ ಶುರುವಾಗುವುದೇನಿದ್ದರೂ ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಹೊತ್ತಿಗೇ. ಅದಕ್ಕೂ ಮುನ್ನ ವಿಜಯಪ್ರಸಾದ್ “ಲೇಡೀಸ್ ಟೈಲರ್’ ಚಿತ್ರ ಮುಗಿಸಬೇಕು. ಇನ್ನು ಸತೀಶ್ ಸಹ ಇನ್ನೊಂದು (ಜೇಕಬ್ ವರ್ಗೀಸ್ ಶಿಷ್ಯ ನಿರ್ದೇಶನದ ಹೆಸರಿಡದ) ಚಿತ್ರವನ್ನು ಮುಗಿಸಬೇಕು. ಇಬ್ಬರೂ ಈಗ ಒಪ್ಪಿರುವ ಚಿತ್ರಗಳನ್ನು ಮುಗಿಸಿ, “ಗಣೇಶ್ ಮೆಡಿಕಲ್ಸ್’ನ ಶಟರ್ ತೆಗೆಯಬೇಕಿದೆ. ಇನ್ನು ಚಿತ್ರವೇನಿದ್ದರೂ ಮುಂದಿನ ವರ್ಷವೇ ಬಿಡುಗಡೆ.