ಕೋಲ್ಕತ : ಪಶ್ಚಿಮ ಬಂಗಾಲದ ಜನರ ದುರಿತಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಳುವ ತೃಣಮೂಲ ಕಾಂಗ್ರೆಸ್‌ನ ಸ್ವಾರ್ಥಪುರ ರಾಜಕೀಯವೇ ಕಾರಣ ಎಂದು ಬಹಿರಂಗ ಟೀಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಂದು ರಾಜ್ಯದಲ್ಲಿ ಮಮತಾ ನಡೆಸುತ್ತಿರುವ “ಸಿಂಡಿಕೇಟ್ ಪಾಲಿಟಿಕ್ಸ್’ ವಿರುದ್ಧ ಹರಿಹಾಯ್ದರು.
ಪಶ್ಚಿಮ ಬಂಗಾಲದ ಜನರು ತಾವು ಎದುರಿಸುತ್ತಿರುವ ಸರ್ವ ಬಗೆಯ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಲು ತ್ರಿಪುರದ ಚುನಾವಣೆಗಳಿಂದ ಪ್ರೇರಿತರಾಗಿ ರಾಜ್ಯದ ಸ್ವಾರ್ಥಪುರ ರಾಜಕಾರಣದ ವಿರುದ್ಧ ಒಗ್ಗೂಡಿ ಹೋರಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ಪ್ರಧಾನಿ ಮೋದಿ ಪಶ್ಚಿಮ ಮಿಡ್ನಾಪುರದಲ್ಲಿಂದು ನಡೆದ ಕಿಸಾನ್ ಕಲ್ಯಾಣ್ ರಾಲಿಯಲ್ಲಿ ಮಾತನಾಡುತ್ತಿದ್ದರು. ಮಮತಾ ಬ್ಯಾನರ್ಜಿ ಸರಕಾರ ನಡೆಸುತ್ತಿರುವ ಸಿಂಡಿಕೇಟ್ ಪಾಲಿಟಿಕ್ಸ್ ನಿಂದಾಗಿ ರಾಜ್ಯದ ಅಭಿವೃದ್ಧಿ ಕೆಲಸಗಳೆಲ್ಲವೂ ಗೂಟ ಹೊಡೆದು ನಿಂತು ಬಿಟ್ಟಿವೆ. ಹಾಗಾಗಿ ಒಂದು ಕಾಲದ ಮಹಾನ್ ನೆಲ ಎನಿಸಿಕೊಂಡಿದ್ದ ಬಂಗಾಲ ಇಂದು ತನ್ನ ಪರಂಪರೆಯನ್ನು ನಾಚಿಸುವಷ್ಟು ತಳ ಮಟ್ಟಕ್ಕೆ ಒತ್ತಲ್ಪಟ್ಟಿದೆ. ಸಿಂಡಿಕೇಟ್ ಪಾಲಿಟಿಕ್ಸ್‌ನ ಅನುಮತಿ ಇಲ್ಲದೆ ರಾಜ್ಯದಲ್ಲಿ ಏನೂ ನಡೆಯುವಂತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
“ನೀವಿಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರಬೇಕಾ ? ನಿಮಗೆ ಸಿಂಡಿಕೇಟ್ ಅನುಮತಿ ಬೇಕು; ನೀವಿಲ್ಲಿ ವ್ಯಾಪಾರ ವಹಿವಾಟು ಮಾಡಬೇಕಾ ? ನಿಮಗೆ ಸಿಂಡಿಕೇಟ್ ಅನುಮತಿ ಬೇಕು; ಕಾಲೇಜು ಸೇರ್ಪಡೆ ಕೂಡ ಸಿಂಡಿಕೇಟ್ ಅನುಮತಿ ಇಲ್ಲದೆ ಸಾಧ್ಯವಿಲ್ಲ; ರಾಜ್ಯ ಸರಕಾರ ಮಾ, ಮಾಟಿ, ಮಾನುಷ್ ಎಂದು ಹೇಳುತ್ತಲೇ ಇರುತ್ತದೆ; ಆದರೆ ಅದರ ಕರಾಳ ಮುಖ ಈಗ ಜಗಜ್ಜಾಹೀರಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಈಚಿನ ಪಶ್ಚಿಮ ಬಂಗಾಲದ ಪಂಚಾಯತ್ ಚುನಾವಣೆಯಲ್ಲಿ ನಡೆದ ಅಭೂತಪೂರ್ವ ಹಿಂಸೆಯನ್ನು ಉಲ್ಲೇಖೀಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಸತ್ತೆಯಲ್ಲಿ ನಂಬಿಕೆ ಇಲ್ಲದಿರುವುದನ್ನು ಇಂದು ಜಗಜ್ಜಾಹೀರು ಮಾಡಿದೆ ಎಂದು ಹೇಳಿದರು. ನಿಮ್ಮ ವಿರೋಧಿಗಳನ್ನು ಕೊಂದು ಮುಗಿಸಿ ಎಂಬ ಸಿಂಡಿಕೇಟ್ ಇಲ್ಲಿ ಕಾರ್ಯಾಚರಿಸುತ್ತಿದೆ. ಕೇಂದ್ರ ಸರಕಾರ ಪಶ್ಚಿಮ ಬಂಗಾಲಕ್ಕೆಂದು ಕಳುಹಿಸುವ ಹಣವನ್ನು ಸಿಂಡಿಕೇಟ್ ಅನುಮತಿ ಇಲ್ಲದೆ ಯಾವುದಕ್ಕೂ ಬಳಸುವಂತಿಲ್ಲವಾಗಿದೆ ಎಂದು ಮೋದಿ ಹೇಳಿದರು.