ಮಡಿಕೇರಿ: ಕೊಡಗಿನಲ್ಲಿ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಸುರಿಯಲಾರಂಭಿಸಿದೆ. ಆದರೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದ್ದು, ಈ ಬಾರಿ ಶೇ. 50ರಷ್ಟು ಮಳೆಯ ಕೊರತೆ ಎದುರಾಗಿದೆ.
2018ರ ಅನಂತರ ಪ್ರತಿವರ್ಷ ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುತ್ತಿತ್ತು. ಆದರೆ ಪ್ರಸ್ತುತ ಬಿಸಿಲಿನಲ್ಲೇ 15 ದಿನ ಕಳೆದು ಹೋಗಿದ್ದು, ಇದೀಗ ಮತ್ತೆ ಮಳೆಯ ವಾತಾವರಣ ಕಂಡು ಬಂದಿದೆ. ಜುಲೈಯಲ್ಲಿ ಸುರಿದ ಮಳೆಗೆ ತುಂಬಿ ಹರಿದಿದ್ದ ನದಿ, ತೊರೆ, ಜಲಾಶಯಗಳು ಬಿಸಿಲಿನ ವಾತಾವರಣದಿಂದಾಗಿ ನೀರಿನ ಕೊರತೆಯನ್ನು ಎದುರಿಸುತ್ತಿವೆ.
ಬರದ ಛಾಯೆ ಕಂಡು ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊಡಗಿನ ಮಳೆ ದೈವ ಎಂದೇ ಕರೆಯಲ್ಪಡುವ ಶ್ರೀಪಾಡಿ ಇಗ್ಗುತ್ತಪ್ಪನಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು. ಶುಕ್ರವಾರ ರಾತ್ರಿಯಿಂದ ಮತ್ತೆ ಮಳೆಯಾಗುತ್ತಿದ್ದು, ಜಿಲ್ಲೆಯ ಜನ ಹಾಗೂ ಕೃಷಿಕ ವರ್ಗ ಕೊಂಚ ನೆಮ್ಮದಿಯಿಂದ ಇದ್ದಾರೆ.
ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯನ್ನು ಮಳೆಯ ಕೊರತೆ ಕಾಡುತ್ತಿದೆ. ಪ್ರಸ್ತುತ ಜನವರಿಯಿಂದ ಇಲ್ಲಿಯವರೆಗಿನ 1,640.34 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2,665.73 ಮಿ.ಮೀ, ಮಳೆಯಾಗಿತ್ತು.
ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.51 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.76 ಮಿ.ಮೀ. ಮಳೆಯಾಗಿತ್ತು.