Advertisement

ಕೇರಳ, ಕೊಡಗಿನಲ್ಲಿ ಮತ್ತೆ ಅತಿವೃಷ್ಟಿ ಆತಂಕ

09:35 AM Apr 24, 2019 | Lakshmi GovindaRaju |

ಬೆಂಗಳೂರು: ಕಳೆದ ವರ್ಷ ಕೇರಳ ಮತ್ತು ಕೊಡಗಿನಲ್ಲಿ ಘಟಿಸಿದ ಪ್ರಾಕೃತಿಕ ವಿಕೋಪ ಈ ವರ್ಷವೂ ಮರುಕಳಿಸಲಿದೆ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯ ನಿವೃತ್ತ ಉಪ ಮಹಾ ನಿರ್ದೇಶಕ ಡಾ.ಎಚ್‌.ಎಸ್‌.ಎಂ.ಪ್ರಕಾಶ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಹವಾಯಿ ಮತ್ತು ಮಾರಿಷಸ್‌ನ ಫೋರ್‌ವೆುಸಾದಲ್ಲಿ ನಡೆಯುತ್ತಿರುವ ಜ್ವಾಲಾಮುಖೀ ಸ್ಫೋಟಕ್ಕೂ ಕೊಡಗು, ಕೇರಳದಲ್ಲಿ ಸಂಭವಿಸುವ ಅತಿವೃಷ್ಟಿಗೂ ಸಂಬಂಧವಿದೆ. ಅಲ್ಲಿ ಜ್ವಾಲಾಮುಖೀ ಸ್ಫೋಟಗೊಂಡು ಮೋಡಗಳು ರಚನೆಯಾದ ಬಳಿಕ ಅವು ಅಲ್ಲಿಂದ ಭಾರತದೆಡೆಗೆ ಬರಲಿವೆ.

ಭಾರತಕ್ಕೆ ಪರ್ವತಗಳು ಉತ್ತರ ದಿಕ್ಕಿನಿಂದ ಬರುತ್ತಿದ್ದು, ಇಲ್ಲಿ ವಾಯುಭಾರವಾಗಿ ಮಳೆ ಬಂದು ಅತಿವೃಷ್ಟಿ ಸಂಭವಿಸಲಿದೆ. ಜ್ವಾಲಾಮುಖೀ ಮುನ್ನ ರೂಪುಗೊಳ್ಳುವ ಮ್ಯಾಗ ದ್ರಾವಣದಿಂದಾಗಿಯೂ ನೀರು ಆವಿಯಾಗಿ ಮೋಡ ರೂಪುಗೊಂಡು ಮಳೆ ಬರುವ ಸಾಧ್ಯತೆಯಿದೆ ಎಂದು “ಉದಯವಾಣಿ’ಗೆ ಪ್ರಕಾಶ್‌ ತಿಳಿಸಿದರು.

ಕಳೆದ ವರ್ಷ ಹವಾಯಿ ಮತ್ತು ಮಾರಿಷಸ್‌ನಲ್ಲಿ ಜ್ವಾಲಾಮುಖೀ ತೀವ್ರ ಸ್ವರೂಪದಲ್ಲಿ ಸ್ಫೋಟಗೊಂಡಿತ್ತು. ಈ ವರ್ಷವೂ ಏಪ್ರಿಲ್‌ ವೇಳೆ ಜ್ವಾಲಾಮುಖೀಗಳು ಸ್ಫೋಟಗೊಳ್ಳುತ್ತಿವೆ. ಇದಕ್ಕೆ ತಕ್ಕಂತೆ 15 ದಿನಗಳ ಹಿಂದೆ ಹವಾಯಿಯಲ್ಲಿ ಬಹುದೊಡ್ಡ ಜ್ವಾಲಾಮುಖೀ ಸ್ಫೋಟವಾಗಿದೆ.

ಇದು ಇನ್ನೂ ಕೆಲವು ದಿನ ನಿರಂತರವಾಗಿರಲಿದೆ. ಕಳೆದ ವರ್ಷದಂತೆ ಈ ವರ್ಷವೂ 5 ಹಂತದಲ್ಲಿ ಕುಂಭದ್ರೋಣ ಮಳೆ ಸುರಿಯುವ ಲಕ್ಷಣ ಪ್ರಕೃತಿಯಲ್ಲಿ ಕಂಡು ಬರುತ್ತಿದೆ. ಮಾರಿಷಸ್‌ನ ಜ್ವಾಲಾಮುಖೀ ಸ್ಫೋಟದಿಂದಾಗಿ 15 ದಿನದ ಹಿಂದೆ ಕೇರಳದಲ್ಲಿ ಮೊದಲ ಕುಂಭದ್ರೋಣ ಮಳೆ ಬಂದಿದೆ. ಇದೇ ರೀತಿ 15-20 ದಿನಗಳ ಅಂತರದಲ್ಲಿ ಮೂರ್‍ನಾಲ್ಕು ಹಂತದಲ್ಲಿ ಮಳೆ ಸುರಿಯಲಿದೆ.

Advertisement

ಆಗಸ್ಟ್‌ನಲ್ಲಿ ಪ್ರವಾಹ ಉಂಟು ಮಾಡುವ ಸಾಧ್ಯತೆಯಿದೆ. ಮೊದಲ 3-4 ಹಂತದ ಮಳೆಯಿಂದ ನೀರು ಮಣ್ಣಿನ ಒಳಗೆ ಸೇರಿಕೊಂಡಿರುತ್ತದೆ. ನಂತರ ಬರುವ ಮಳೆಯನ್ನು ಮಣ್ಣು ಕೂಡ ಹಿಡಿದಿಟ್ಟುಕೊಳ್ಳಲಾರದ ಸ್ಥಿತಿ ತಲುಪಲಿದೆ. ಈ ಹಂತದಲ್ಲಿ ಮಣ್ಣು, ಕಲ್ಲು ಬಂಡೆಗಳು ಜಾರುವ ಸ್ಥಿತಿಗೆ ಬಂದಿರುತ್ತವೆ. ಭೂಕುಸಿತ ಉಂಟಾಗಲಿದೆ.

ಅಲ್ಲದೆ ಈ ಬಾರಿ ಇಬ್ಬನಿ ಬೀಳುವುದು ಕೂಡ ಕಡಿಮೆಯಾಗಿರುವುದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದೆ. ಇಬ್ಬನಿ ಇದ್ದರೆ ಮಣ್ಣಿನಲ್ಲಿರುವ ನೀರಿನಾಂಶ ಹೊರ ಬಂದು ವಾತಾವರಣದಲ್ಲಿ ತಂಪಿನ ಅಂಶ ಇರುತ್ತದೆ. ಕಳೆದ ಬಾರಿ ಈ ಸಮಯದಲ್ಲಿ ಇಬ್ಬನಿ ಕಡಿಮೆಯಾಗಿತ್ತು.

ಇಬ್ಬನಿ ಇಲ್ಲವೆಂದರೆ ಮಣ್ಣು ಒಣಗಿದೆ ಎಂದರ್ಥ. ಈ ರೀತಿಯ ಲಕ್ಷಣಗಳು ಮತ್ತೂಮ್ಮೆ ಪ್ರಾಕೃತಿಕ ವಿಕೋಪ ನಡೆಯುವುದರ ಮನ್ಸೂಚನೆ. ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರ ಗಮನಕ್ಕೆ ತರಲಾಗಿದೆ ಎಂದರು.

ಕೇರಳ, ತಮಿಳುನಾಡಿನಲ್ಲಿ ಪ್ರವಾಹ: 1924ರಲ್ಲಿ ಹವಾಯಿಯಲ್ಲಿ ಇಂಡೆಕ್ಸ್‌ 4 ಮಟ್ಟದಲ್ಲಿ ಉಂಟಾದ ಜ್ವಾಲಾಮುಖೀ ಸ್ಫೋಟದಿಂದ ಕೇರಳ ಮತ್ತು ತಮಿಳುನಾಡಿನಲ್ಲಿ ಪ್ರವಾಹ, ಭೂಕುಸಿತ ಉಂಟಾಗಿತ್ತು. ಜ್ವಾಲಾಮುಖೀ ಸ್ಫೋಟಗೊಂಡ ನಂತರ ಹೊರಬರುವ ಲಾವಾ ಮತ್ತು ಬೂದಿಯ ಪ್ರಮಾಣದ ಆಧಾರದಲ್ಲಿ ಇಂಡೆಕ್ಸ್‌ ಸೂಚಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next