ತಾಳಿಕೋಟೆ: ಗರ್ಭಿಣಿಯನ್ನು ಆಕೆಯ ಮನೆಯವರೇ ನಡು ರಸ್ತೆಯಲ್ಲಿ ಎಳೆದಾಡಿ ಬರ್ಬರವಾಗಿ ಕೊಲೆ ಮಾಡುವುದರೊಂದಿಗೆ ಸೀಮೆ ಎಣ್ಣೆ ಸುರಿದು ಸುಟ್ಟು ಹಾಕಿದ ಅಮಾನವೀಯ ಘಟನೆ ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಕನಾಳ ಗ್ರಾಮದಲ್ಲಿ ನಡೆದಿದೆ.
ಗುಂಡಕನಾಳ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಾನುಬೇಗಂ ಅತ್ತಾರ (20) ಕೊಲೆಯಾದ ಮಹಿಳೆ. ಕೊಲೆಗೆ ಹಿಂದೂ ಧರ್ಮದ ಪರಿಶಿಷ್ಠ ಪಂಗಡದ ಯುವಕನೊಂದಿಗೆ ಪ್ರೀತಿಸಿ ಮದುವೆಯಾಗಿದ್ದೆ ಕಾರಣ ಎನ್ನಲಾಗುತ್ತಿದೆ.
ವಿವರ: ಸುಮಾರು 2 ವರ್ಷದಿಂದ ಗುಂಡಕನಾಳ ಗ್ರಾಮದ ಬೇಡರ ಸಮಾಜದ ಸಾಯಬಣ್ಣ (ಮುದಕಪ್ಪ) ಕೊಣ್ಣೂರ ಎಂಬ ಯುವಕನೊಂದಿಗೆ ಬಾನುಬೇಗಂ ಪ್ರೀತಿಸುತ್ತಿದ್ದಳು. ಇದು ಇಬ್ಬರ ಮನೆಯವರಿಗೆ ಗೊತ್ತಾಗಿದ್ದರಿಂದ ಯುವತಿ ಮನೆಯವರು ಬುದ್ಧಿವಾದ ಹೇಳಿದ್ದರೆನ್ನಲಾಗುತ್ತಿದೆ. ಕಳೆದ ಜನೇವರಿ ತಿಂಗಳಿನಲ್ಲಿ ಸಾಯಬಣ್ಣ ಹಾಗೂ ಬಾನುಬೇಗಂ ಗೋವಾಕ್ಕೆ ಫಲಾಯನಗೈದಿದ್ದರು.
ನಂತರ ಯುವತಿ ಪೋಷಕರು ಲೈಂಗಿಕ ದೌರ್ಜನ್ಯದ ದೂರನ್ನು ತಾಳಿಕೋಟೆ ಠಾಣೆಯಲ್ಲಿ ದಾಖಲಿಸಿದ್ದರು. ಬಾನುಬೇಗಂ ಗರ್ಬಿಣಿಯಾಗಿದ್ದರಿಂದ ಸಾಯಬಣ್ಣ ಮುದ್ದೇಬಿಹಾಳಕ್ಕೆ ಯುವತಿಯೊಂದಿಗೆ ಆಗಮಿಸಿ ಸಬ್ ರಜಿಸ್ಟರ್ ನೋಂದಣಿ ಕಚೇರಿಯಲ್ಲಿ ಕಾನುನೂ ಬದ್ಧ ಮದುವೆಯಾಗಿ ಗುಂಡಕನಾಳ ಗ್ರಾಮಕ್ಕೆ 4 ದಿನಗಳ ಹಿಂದೆ ಬಂದು ನೆಲೆಸಿದ್ದರು. ಇದನ್ನು ಅರಿತ ಪೋಷಕರು
ಸಮುದಾಯದ ಮರ್ಯಾದೆ ಹಾಳು ಮಾಡಿದ್ದಾರೆಂದು ಬಾನುಬೇಗಂ ಮನೆಯವರಾದ ಇಬ್ರಾಹಿಂ ಅತ್ತಾರ, ಅಕ್ಬರ್ ಮಹ್ಮದಸಾಬ ಅತ್ತಾರ, ಇಮಾಮಸಾಬ ಅತ್ತಾರ, ರಂಜಾನಬಿ ಅತ್ತಾರ, ದಾವಲಬಿಸಲ್ಮಾ ಜಮಾದಾರ, ಅಜಮಾ ಜಿಲಾನಿ ದಖನಿ, ಜಲಾನಿ
ದಖನಿ, ದಾವಲಬಿ ದನ್ನೂರ ಒಳಗೊಂಡು ಇನ್ನಿತರರು ಗುಂಪು ಯುವಕನ ಮನೆಗೆ ನುಗ್ಗಿ ಯುವಕನನ್ನು ಬಡಿಗೆ ಮತ್ತು ಚೂರಿಗಳಿಂದ ಇರಿದು ಕೊಲೆಮಾಡಲು ಯತ್ನಿಸಿದ್ದಾರೆ. ಇವರಿಂದ ತಪ್ಪಿಸಿಕೊಂಡು ಸಾಯಬಣ್ಣ ಪರಾರಿಯಾಗಿದ್ದಾನೆ.
ಬಾನುಬೇಗಂಳನ್ನು ತಲೆ ಮತ್ತು ಕೈಕಾಲು ಮುರಿಯುವ ಹಾಗೆ ಹೊಡೆದು ನಡು ರಸ್ತೆಯಲ್ಲಿ ಎಳೆದಾಡಿ ಹಲ್ಲೆ ಮಾಡಿದ್ದಾರೆ. ನಂತರ ಎಲ್ಲರೂ ಸೇರಿ ಮಹಿಳೆ ಮೈಮೇಲೆ ಸೀಮೆ ಎಣ್ಣೆ ಸುರುವಿ ಸುಟ್ಟುಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಬಾನುಬೇಗಂ ಪತಿ ಸಾಯಬಣ್ಣ ಕೊಣ್ಣೂರ ತಾಳಿಕೋಟೆ ಠಾಣೆಗೆ ದೂರು ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಪ್ರಭುಗೌಡ ಪಾಟೀಲ, ಸಿಪಿಐ ಶಿರಹಟ್ಟಿ, ಪಿಎಸ್‌ಐ ಎಂ.ಬಿ. ಬಿರಾದಾರ ಭೇಟಿ
ನೀಡಿ ತನಿಖೆ ಕೈಗೊಂಡಿದ್ದಾರೆ.