Advertisement

ದೇಶದಲ್ಲಿ 95 ಸಾವಿರ ಮೀರಿದ ಸೋಂಕಿತರ ಸಂಖ್ಯೆ

12:48 AM May 19, 2020 | Team Udayavani |

ಲಾಕ್‌ಡೌನ್‌ ಸೇರಿದಂತೆ ಹಲವು ರೀತಿಯ ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಜಿಗಿತ ಕಂಡುಬಂದಿದೆ.

Advertisement

ಸದ್ಯ ದೇಶದಲ್ಲಿ 95 ಸಾವಿರಕ್ಕಿಂತ ಅಧಿಕ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.

ತಮಿಳುನಾಡು, ಗುಜರಾತ್‌, ದಿಲ್ಲಿ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ ಸ್ಥಾನ ಪಡೆದುಕೊಂಡಿವೆ. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 2,347 ಹೊಸ ಮತ್ತು 63 ಸಾವಿನ ಪ್ರಕರಣಗಳು ಸೇರ್ಪಡೆಯಾಗಿವೆ.

ದಾಖಲೆಯ 4,987ಸಾವಿರ ಕೇಸು: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರವಿವಾರ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 4,987 ಕೇಸುಗಳು ಏರಿಕೆಯಾಗಿವೆ, ಇದೊಂದು ದಾಖಲೆಯ ಜಿಗಿತ.

ಶನಿವಾರ ಬೆಳಗ್ಗೆ 8ರಿಂದ ರವಿವಾರ ಬೆಳಗ್ಗೆ 8 ವರೆಗಿನ ಮಾಹಿತಿ ಇದಾಗಿದೆ. ಈ ಅವಧಿಯಲ್ಲಿ 120 ಸಾವುಗಳು ಸಂಭವಿಸಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ 67, ಗುಜರಾತ್‌ನಲ್ಲಿ 19, ಉತ್ತರ ಪ್ರದೇಶದಲ್ಲಿ 9, ಪಶ್ಚಿಮ ಬಂಗಾಲದಲ್ಲಿ 7 ಮಂದಿ ಅಸುನೀಗಿದ್ದಾರೆ. ಇದರ ಜತೆಗೆ ದೇಶದಲ್ಲಿ ಗುಣಮುಖರಾದವರ ಪ್ರಮಾಣ ಶೇ.37.51ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Advertisement

50 ಲಕ್ಷದತ್ತ ಓಟ: ಇನ್ನು ಜಗತ್ತಿನ ವಿಚಾರ ಗಮನಿಸುವುದಿದ್ದರೆ, ಸೋಂಕಿತರ ಸಂಖ್ಯೆ 50 ಲಕ್ಷದತ್ತ ಸಾಗುತ್ತಿದೆ. 3.14 ಲಕ್ಷ ಮಂದಿಗಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 18.40 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ ಸಾವಿನ ಸಂಖ್ಯೆ 1 ಲಕ್ಷದ ಸನಿಹಕ್ಕೆ ಬಂದಿದೆ.

ರಾಷ್ಟ್ರಪತಿ ಭವನದ ಅಧಿಕಾರಿಗೆ ಸೋಂಕು
ರಾಷ್ಟ್ರಪತಿ ಭವನಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್‌ ಸಹಾಯಕ ಆಯುಕ್ತರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರನ್ನು ದಿಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ರಾಷ್ಟ್ರಪತಿ ಭವನದ ಹಲವು ಪೊಲೀಸರು ಹಾಗೂ ಸಿಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ರಾಷ್ಟ್ರಪತಿ ಭವನ ಕಟ್ಟಡದ ಒಳಗೆ ಪೊಲೀಸ್‌ ಸಹಾಯಕ ಆಯುಕ್ತರ ಕಚೇರಿ ಇತ್ತು.

ಕಳೆದ ತಿಂಗಳು ರಾಷ್ಟ್ರಪತಿ ಭವನದ ಸ್ವಚ್ಛತಾ ಸಿಬಂದಿಯ ಸಂಬಂಧಿಕರಿಗೆ ಕೋವಿಡ್ ಸೋಂಕು ತಗಲಿದ್ದ ರಿಂದ ಭವನದಲ್ಲಿದ್ದ 115 ಕುಟುಂಬಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಈ ಪೈಕಿ ಯಾರೊಬ್ಬರಲ್ಲೂ ಸೋಂಕು ಕಂಡು ಬಂದಿರಲಿಲ್ಲ.

ಕೋವಿಡ್ ಗೆದ್ದ ಯೋಧರು
ಮೂತ್ರಪಿಂಡ ಹಾಗೂ ಕ್ಯಾನ್ಸರ್‌ ಬಾಧಿತರಾಗಿದ್ದ ಐವರು ಬಿಎಸ್‌ಎಫ್ ಯೋಧರು ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಕೋವಿಡ್ ಪಾಸಿಟಿವ್‌ ಕಂಡು ಬಂದಿದ್ದ ಮೂವರಿಗೆ ಮೂತ್ರಪಿಂಡ ಸಮಸ್ಯೆ ಹಾಗೂ ಇಬ್ಬರಿಗೆ ಕ್ಯಾನ್ಸರ್‌ ಇತ್ತು. ಇದೀಗ ಇವರು ಕೋವಿಡ್ ವೈರಸನ್ನು ಮಣಿಸಿದ್ದಾರೆ. ಇದರೊಂದಿಗೆ ಕೇಂದ್ರೀಯ ಸಶಸ್ತ್ರ ಪಡೆಯ 74 ಸಿಬಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next