Advertisement

ಕೈ ಕೋಟೆಯಲ್ಲಿ ಶಾ ಕಣಕಹಳೆ

06:00 AM Apr 22, 2018 | Team Udayavani |

ಲಕ್ನೋ: ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಪ್ರವೇಶವಾಗಿದ್ದು, ವಂಶಾಡಳಿತ ರಾಜಕಾರಣವನ್ನು ನಿರ್ಮೂಲನೆ ಮಾಡಿಯೇ ಸಿದ್ಧ ಎಂದು ಅವರು ಘೋಷಿಸಿದ್ದಾರೆ. ಶನಿವಾರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಂಸದೀಯ ಕ್ಷೇತ್ರವಾದ ರಾಯ್‌ಬರೇಲಿಯಲ್ಲಿ ಗಾಂಧಿ ಕುಟುಂಬದ ವಿರುದ್ಧ ಶಾ ಅವರು ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಈ ಮೂಲಕ ಅಮಿತ್‌ ಶಾ ಅವರು 2019ರ ಲೋಕಸಭೆ ಚುನಾವಣೆಗೆ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.

Advertisement

ಇಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಶಾ, “ನೆಹರೂ-ಗಾಂಧಿ ಕುಟುಂಬವು ಅಮೇಠಿ ಮತ್ತು ರಾಯ್‌ಬರೇಲಿ ಜನರಿಗಾಗಿ ಏನನ್ನೂ ಮಾಡಲಿಲ್ಲ. ಅವರು ನಿಮ್ಮನ್ನು ವಂಚಿಸುತ್ತಾ ವಂಶರಾಜಕಾರಣವನ್ನೇ ಮಾಡುತ್ತಾ ಬಂದರು. ಇಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಯ್‌ಬರೇಲಿಯನ್ನು ಪರಿವಾರ್‌ವಾದ್‌ನಿಂದ ರಕ್ಷಿಸಿ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿದೆ. 60 ವರ್ಷಗಳಲ್ಲಿ ಕಾಂಗ್ರೆಸ್‌ ಮಾಡದ್ದನ್ನು ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ ಮಾಡಿ ತೋರಿಸಲಿದೆ’ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರು ಕೇಸರಿ ಭಯೋತ್ಪಾದನೆ ಎಂಬ ಪದ ಬಳಕೆ ಮಾಡಿದ್ದರು. ಆದರೆ, ಈಗ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಖುಲಾಸೆಗೊಂಡಿದ್ದಾರೆ. ರಾಹುಲ್‌ ಅವರು ಹಿಂದೂಗಳನ್ನು ಅವಹೇಳನ ಮಾಡಿದ್ದಕ್ಕೆ ದೇಶದ ಕ್ಷಮೆ ಯಾಚಿಸಬೇಕು ಎಂದೂ ಅಮಿತ್‌ ಶಾ ಆಗ್ರಹಿಸಿದ್ದಾರೆ. ಇದೇ ವೇಳೆ, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರದ ಸಾಧನೆಯನ್ನೂ ಹಾಡಿ ಹೊಗಳಿದ್ದಾರೆ. 

ಬಿಜೆಪಿ ಸೇರ್ಪಡೆ: ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಗಾಂಧಿ ಕುಟುಂಬದ ಆಪ್ತರಾದ ಎಂಎಲ್‌ಸಿ ದಿನೇಶ್‌ ಪ್ರತಾಪ್‌ ಸಿಂಗ್‌ ಅವರು ಶನಿವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮತ್ತಿತರರು ಆಗಮಿಸಿದ್ದರು.

ಬೆಂಕಿ ಅವಘಡ
ಅಮಿತ್‌ ಶಾ ಅವರು ನಡೆಸಿದ ಸಾರ್ವಜನಿಕ ಕಾರ್ಯಕ್ರಮದ ಸ್ಥಳದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆಯೂ ಶನಿವಾರ ರಾಯ್‌ಬರೇಲಿಯಲ್ಲಿ ನಡೆಯಿತು. ಶಾ ಮತ್ತು ಯೋಗಿ ಅವರು ವೇದಿಕೆಯಲ್ಲಿ ಕುಳಿತಿರುವಂತೆಯೇ ಬೆಂಕಿ ಕಾಣಿಸಿ ಕೊಂಡಿದ್ದು, ಜನರೆಲ್ಲ ಭಯಭೀತರಾಗಿ ಓಡತೊಡಗಿದರು. ನಂತರ ಕಾರ್ಯಕ್ರಮ ವನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸಲಾಯಿತು.

Advertisement

ಕಾಂಗ್ರೆಸ್‌ ಜತೆ ಬಿಎಸ್‌ಪಿ ಮೈತ್ರಿ?
ಗಾಂಧಿ ಕುಟುಂಬದ ತೆಕ್ಕೆಯಿಂದ ಅಮೇಠಿ ಮತ್ತು ರಾಯ್‌ಬರೇಲಿಯನ್ನು ಕಸಿದುಕೊಳ್ಳಲು ಬಿಜೆಪಿ ಯತ್ನಿಸುತ್ತಿರುವ ನಡುವೆಯೇ, 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯಹಸ್ತ ಚಾಚಲು ಬಿಎಸ್‌ಪಿ ನಾಯಕಿ ಮಾಯಾವತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರು ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವ ಮೂಲಕ, ಕಾಂಗ್ರೆಸ್‌ ಮತಗಳು ವಿಭಜನೆಯಾಗದಂತೆ ತಡೆಯಲು ಮುಂದಾಗಿದ್ದಾರೆ ಎಂದು ಬಿಎಸ್‌ಪಿ ನಾಯಕರೊಬ್ಬರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷವು ಅಮೇಠಿಯಲ್ಲಿ 2004ರಿಂದಲೂ, ರಾಯ್‌ಬರೇಲಿಯಲ್ಲಿ 2009ರಿಂದಲೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಈಗ ಬಿಎಸ್‌ಪಿ  ಕೂಡ ಇದೇ ದಾರಿಯಲ್ಲಿ ಸಾಗಿದರೆ, ಬಿಎಸ್‌ಪಿಗೆ ಹೋಗಬಹುದಾದ 
ಮತಗಳು ಕಾಂಗ್ರೆಸ್‌ ತೆಕ್ಕೆಗೆ ಬರುವ ಸಾಧ್ಯತೆ ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next