Advertisement

ಹರಿಯುವ ನೀರಿನಲ್ಲಿ, ಒಂದೇ ದಿನ ವಿಸರ್ಜನೆಯ ಮಾದರಿ

11:56 PM Aug 31, 2019 | sudhir |

ಉಡುಪಿ: ಈ ಬಾರಿ ಗಣಪತಿ ವಿಗ್ರಹಗಳನ್ನು ತಮ್ಮ ಕೆರೆಗಳಲ್ಲಿ ವಿಸರ್ಜಿಸಬಾರದು ಎಂದು ಕೆಲವು ದೇವಸ್ಥಾನಗಳು ನಿರ್ಬಂಧ ಹೇರಿವೆ. ವಿಗ್ರಹಗಳಿಗೆ ರಾಸಾಯನಿಕ ಬಣ್ಣಗಳನ್ನು ಬಳಸುವುದೇ ಇದಕ್ಕೆ ಕಾರಣ.

Advertisement

ಉಡುಪಿಯ ಅತಿ ಹಿರಿಯ ಗಣೇಶೋತ್ಸವ ಸಮಿತಿಯಾದ ಕಡಿಯಾಳಿ ಗಣೇಶೋತ್ಸವವು 1996ರವರೆಗೆ ಶ್ರೀಕೃಷ್ಣಮಠದ ಸರೋವರದಲ್ಲಿ ಗಣಪತಿ ವಿಗ್ರಹವನ್ನು ವಿಸರ್ಜಿಸುತ್ತಿತ್ತು. ಆರೆಸ್ಸೆಸ್‌ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಅವರು ಗಣಪತಿ ವಿಗ್ರಹವನ್ನು ಹರಿಯುವ ನೀರಿಗೆ ವಿಸರ್ಜಿಸಬೇಕೆ ವಿನಾ ನಿಂತ ನೀರಿನಲ್ಲಿ ವಿಸರ್ಜಿಸಬಾರದು ಎಂದು ಕಡಿಯಾಳಿ ಗಣೇಶೋತ್ಸವದವರಿಗೆ ಸಲಹೆ ಕೊಟ್ಟರು. ಕಡಿಯಾಳಿ ಗಣೇಶೋತ್ಸವದವರು 1997ರಿಂದ ಇದುವರೆಗೆ ಮಲ್ಪೆ ಸಮುದ್ರಕ್ಕೆ ವಿಗ್ರಹ ವಿಸರ್ಜನೆ ಮಾಡುತ್ತಿದ್ದಾರೆ.

ಬನ್ನಂಜೆ ದೇವಸ್ಥಾನದವರು ತಮ್ಮ ಕೆರೆಯಲ್ಲಿ ವಿಗ್ರಹ ವಿಸರ್ಜಿಸಬಾರದೆಂದು ಹೇಳಿದ್ದಾರೆ. ಶ್ರೀಕೃಷ್ಣಮಠದ ಪರ್ಯಾಯ ಶ್ರೀಗಳು ಬಣ್ಣ ಹಾಕಿದ ವಿಗ್ರಹವನ್ನು ವಿಸರ್ಜಿಸಬಾರದೆಂದು ಸೂಚನೆ ಕೊಟ್ಟಿದ್ದಾರೆ.

ಶ್ರೀಕೃಷ್ಣಮಠದಲ್ಲಿ ಗಣಪತಿ ವಿಗ್ರಹ ಮಾಡುವ ಸೋಮನಾಥರು ಈ ಬಾರಿ ನೈಸರ್ಗಿಕ ಬಣ್ಣ ಹಾಕಿ ವಿಗ್ರಹ ರಚಿಸುತ್ತಿದ್ದಾರೆ. ರಥಬೀದಿಯಲ್ಲಿ ಪೂಜೆಗೊಳ್ಳುವ ಗಣೇಶನ ವಿಗ್ರಹಕ್ಕೆ ಬಣ್ಣ ಹಾಕದೆ ದೃಷ್ಟಿಯನ್ನು ಮಾತ್ರ ಬಿಡಿಸುತ್ತಾರೆ. ಕೃಷ್ಣಮಠದ ಗಣೇಶನಿಗಾಗಿ ರಕ್ತಚಂದನವನ್ನು ತೇದುವ ಕೆಲಸಕ್ಕೆ ಈಗಾಗಲೇ ಮುಂದಾಗಿದ್ದಾರೆ. ಹೀಗೆ ಕ್ರಮೇಣ ಒಂದೊಂದೆ ಕಡೆ ಈ ಪದ್ಧತಿ ಜಾರಿಗೆ ಬಂದರೆ ಜನರಲ್ಲೂ ಜಾಗೃತಿ ಮೂಡುತ್ತದೆ. ಇದೇ ರೀತಿ ಕೆರೆಗೆ ವಿಗ್ರಹವನ್ನು ವಿಸರ್ಜಿಸುವ ಬದಲು ಹರಿಯುವ ನೀರಿಗೆ ಹಾಕುವ ಕ್ರಮವನ್ನೂ ಜಾರಿಗೊಳಿಸಿದರೆ ಉತ್ತಮ.

1996ರಲ್ಲಿ ಶ್ರೀಪೇಜಾವರ ಮಠಾಧೀಶರು ಒಂದೂರಿನಲ್ಲಿ ಪೂಜೆಗೊಂಡ ವಿವಿಧ ವಿಗ್ರಹಗಳನ್ನು ಜತೆ ಸೇರಿ ವಿಸರ್ಜಿಸಿದರೆ ಉತ್ತಮ ಎಂದು ಕಡಿಯಾಳಿ ಗಣೇಶೋತ್ಸವ ಸಮಿತಿಯವರಿಗೆ ಸಲಹೆ ಕೊಟ್ಟರು. 1997ರಲ್ಲಿ ಮೂರ್‍ನಾಲ್ಕು ಗಣೇಶೋತ್ಸವದವರು ಇದೇ ರೀತಿ ಒಂದೇ ಮೆರವಣಿಗೆಯಲ್ಲಿ ವಿಸರ್ಜನೆ ನಡೆಸಿದರು. ಆದರೆ ಕಾರಣಾಂತರದಿಂದ ಮತ್ತೆ ಅದು ನಡೆಯಲಿಲ್ಲ. ಕಡಿಯಾಳಿಯಿಂದ ಮಲ್ಪೆ ಕಡಲ ತೀರದವರೆಗೆ ನಗರವನ್ನು ಸುತ್ತಿಕೊಂಡು ಮೆರವಣಿಗೆ ಹೋಗುವಾಗ 12 ಕಿ.ಮೀ. ಆಗುತ್ತದೆ. ಎಲ್ಲ ಗಣೇಶೋತ್ಸವ ಸಮಿತಿಯವರು ಮೊದಲೆ ನಿಗದಿಪಡಿಸಿ ನಿರ್ದಿಷ್ಟ ದಿನಗಳಲ್ಲಿ ಪೂಜಿಸಬೇಕು. ಒಂದು ನಗರದಲ್ಲಿ ಪೂಜೆಗೊಳ್ಳುವ ಎಲ್ಲ ಗಣಪತಿ ವಿಗ್ರಹಗಳು ಒಂದೇ ಮೆರವಣಿಗೆಯಲ್ಲಿ ಜತೆ ಸೇರಿದರೆ ಅದರ ವೈಭವವೇ ಬೇರೆ ಆಗುತ್ತದೆ. ಸಾಕಷ್ಟು ಖರ್ಚುಗಳು ಉಳಿತಾಯವಾಗುತ್ತದೆ, ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಇಂತಹ ಪ್ರಯತ್ನಗಳನ್ನು ಎಲ್ಲ ಊರಿನವರೂ ಮಾಡಿದರೆ ಮಾದರಿ ಸಂದೇಶವನ್ನು ಸಮಾಜಕ್ಕೆ ಕೊಟ್ಟಂತಾಗುತ್ತದೆ.

Advertisement

– ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next