Advertisement

ನಿಜಾರ್ಥದಲ್ಲಿ “ಅಚ್ಛೇ ದಿನ್‌’ಜಾರಿಗೆ: ಖೂಬಾ

02:49 PM Mar 17, 2018 | Team Udayavani |

ಬೀದರ: ಜನ ಸಾಮಾನ್ಯರ, ರೈತರ, ಕೃಷಿ ಕಾರ್ಮಿಕರ ಬದುಕು ಉತ್ತಮಗೊಳಿಸುವ ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ “ಅಚ್ಛೆದಿನ್‌’ ಘೋಷಣೆ ನಿಜವಾದ ಅರ್ಥದಲ್ಲಿ ಜಾರಿಗೆ ಬಂದಿದೆ. ಕೇಂದ್ರದ ಒಳ್ಳೆ ಆಡಳಿತದಿಂದ ಸುದಿನ ಬಂದಿವೆ ಎಂದು ಸಂಸದ ಭಗವಂತ ಖೂಬಾ ಬಣ್ಣಿಸಿದರು.

Advertisement

ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಶುಕ್ರವಾರ ಅಂಚೆ ಕಚೇರಿ ಪಾಸ್‌ಪೊರ್ಟ್‌ ಸೇವಾಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ಯೋಜನೆಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಫಸಲ್‌ ಬಿಮಾ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನದಲ್ಲಿ ಬೀದರ ಜಿಲ್ಲೆ ದೇಶದ ಗಮನ ಸೆಳೆಯುವ ಸಾಧನೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಯ ವೇಗ ಹೆಚ್ಚಿದೆ. ಸಾವಿರಾರು ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿವೆ. ಒಟ್ಟು 11 ಹೊಸ ರೈಲುಗಳು ಆರಂಭವಾಗಿವೆ. ಕೃಷಿ ಕ್ಷೇತ್ರದ ಬಲವರ್ಧನಗೆ ಹಲವು ಯೋಜನೆ ಜಾರಿಗೆ ಬಂದಿವೆ ಎಂದು ಮಾಹಿತಿ ನೀಡಿದರು. ಎರಡು ದಿನಗಳ ಹಿಂದೆ ಕೊಲ್ಹಾಪುರ ರೈಲಿಗೆ ಅನುಮೋದನೆ ಸಿಕ್ಕಿದೆ. ರೈಲ್ವೆ ಪ್ರಯಾಣ ಇನ್ನಷ್ಟು ಹಿಕತರವಾಗಲಿದೆ ಎಂದರು.

ವೈಯಕ್ತಿಕ ನೆರವಿನ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ 3 ಲಕ್ಷ ಜನ ಕೇಂದ್ರದ ಯೋಜನೆಗಳ ಫಲಾನುಭವಿಯಾಗಿದ್ದಾರೆ. ಕ್ಷೇತ್ರದ ಎಲ್ಲ ಜನರಿಗೆ ಕೇಂದ್ರದ ಸವಲತ್ತುಗಳನ್ನು ತಲುಪಿಸುವ ಕೆಲಸ ನಡೆಯುತ್ತಿದೆ ಎಂದ ಅವರು, ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭವಾಗಲು 7 ದಶಕ ಬೇಕಾಯಿತು ಎನ್ನುವುದು ಗಮನಿಸಬೇಕಾದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕೆಲಸಗಳಿಗಾಗಿ ವಿದೇಶಗಳಿಗೆ ಪ್ರಯಾಣಿಸುವ ಅಗತ್ಯವಿರುತ್ತದೆ. ವಿದೇಶ ಪ್ರಯಾಣಕ್ಕೆ ಪಾಸ್‌ ಪೋರ್ಟ್‌ ಅವಶ್ಯಕ ದಾಖಲಾತಿಯಾಗಿರುತ್ತದೆ. ಈ ದಾಖಲಾತಿ ಪಡೆಯಲು ದಲ್ಲಾಳಿಗಳು ಮತ್ತು ಮಧ್ಯಸ್ಥಿಕೆದಾರರ ಕಾಟ ಹೆಚ್ಚಾಗಿತ್ತು. ಜಿಲ್ಲೆಯ ಜನತೆ ಪಾಸ್‌ಪೋರ್ಟ್‌ ಪಡೆಯಲು ಮಹಾನಗರಗಳಿಗೆ ಅಲೆದಾಡುವುದನ್ನು ತಪ್ಪಿಸಿ ಸುಲಭವಾಗಿ ದೊರೆಯುವಂತಾಗಲು ನಗರದಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಇದರಿಂದ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ ಎಂದರು.

Advertisement

ಬೆಂಗಳೂರಿನ ಪಾಸ್‌ಪೊರ್ಟ್‌ ಅಧಿಕಾರಿ ಹರೀಶ್ವರನ್‌ ಮಾತನಾಡಿ, ಪಾಸ್‌ಪೋರ್ಟ್‌ ಪಡೆಯುವಲ್ಲಿನ ಸಮಸ್ಯೆ ನಿವಾರಿಸಲು ಕಳೆದ ವರ್ಷ ಅಂಚೆ ಕಚೇರಿ ಪಾಸ್‌ಪೋರ್ಟ್‌ ಯೋಜನೆ ಆರಂಭಿಸಿದ್ದು, ಈವರೆಗೆ 10 ಕೇಂದ್ರಗಳನ್ನು ಆರಂಭಿಸಲಾಗಿದೆ. ಬೀದರ್‌ನದ್ದು 11ನೇ ಕೇಂದ್ರವಾಗಿದೆ. ರಾಯಚೂರಿನಲ್ಲಿ 12ನೇ ಕೇಂದ್ರ ಸೋಮವಾರ ಕಾರ್ಯಾರಂಭ ಮಾಡಲಿದೆ. ಹಿಂದೆ ಸಿರಿವಂತರು ಮಾತ್ರ ಪಾಸ್‌ಪೋರ್ಟ್‌ ಪಡೆಯುತ್ತಿದ್ದರು. ಕಾಲ ಬದಲಾಗಿದೆ. ಈಗ ಪಾಸ್‌ಪೋರ್ಟ್‌ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿದೆ ಎಂದರು.

ಶಾಸಕ ರಹೀಂ ಖಾನ್‌ ಮಾತನಾಡಿದರು. ಜಿಪಂ ಅಧ್ಯಕ್ಷೆ ಭಾರತಬಾಯಿ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಪ್ರಧಾನ ಅಂಚೆ ಕಚೇರಿಯ ಪ್ರಭಾರಿ ಅಧೀಕ್ಷಕ ಎಸ್‌.ಎಸ್‌. ಪಾಟೀಲ ಮತ್ತಿತರ ಗಣ್ಯರು ಇದ್ದರು. ಮಂಗಲಾ ಭಾಗವತ್‌ ನಿರೂಪಿಸಿದರು.

ಖೂಬಾ ಕಾರ್ಯವೈಖರಿಗೆ ರಾಕೇಶಸಿಂಗ್‌ ಮೆಚ್ಚುಗೆ
ಹೊಸ ಹೊಸ ಯೋಜನೆಗಳನ್ನು ಜಿಲ್ಲೆಗೆ ತರುವಲ್ಲಿ ಸಂಸದ ಭಗವಂತ ಖೂಬಾ ಮುಂದಿದ್ದಾರೆ. ಮಾತನಾಡದೆಯೇ ಕ್ಷೇತ್ರದ ಕೆಲಸ ಮಾಡಿಕೊಳ್ಳುವ ಸಾಮರ್ಥ್ಯ ಅವರಲ್ಲಿದೆ. ಜನರಿಗಾಗಿ, ಅಭಿವೃದ್ಧಿಗಾಗಿ ಶ್ರಮಿಸುವ ಸಂಸದರನ್ನು ಜಿಲ್ಲೆಯ ಮತದಾರರು ಆಯ್ಕೆ ಮಾಡಿದ್ದಾರೆ ಎಂದು ಜಬ್ಬಲಪುರ ಸಂಸದ ರಾಕೇಶಸಿಂಗ್‌ ಅವರು ಖೂಬಾ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜಾಗತೀಕಣದಿಂದಾಗಿ ಜೀವನ ಶೈಲಿಯಲ್ಲಿ ಹಲವು ಬದಲಾವಣೆಗಳಾಗಿವೆ. ಅದಕ್ಕನುಗುಣ ವಿದೇಶಗಳಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಪಾಸ್‌ಪೋರ್ಟ್‌ಗಳು ಜನತೆಗೆ ಸುಲಭವಾಗಿ ದೊರೆಯಲು ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೇವಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next