ಪುತ್ತೂರು: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ದೇಶದಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಮಾ. 11ರಂದು ರವಿವಾರ ಆಯೋಜಿಸಲಾಗಿದ್ದು, ಪುತ್ತೂರು ತಾಲೂಕಿನಾದ್ಯಂತ ಒಟ್ಟು 149 ಬೂತ್‌ಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನಾದ್ಯಂತ ಸುಮಾರು 21,138 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಗುರಿಯನ್ನು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 3,096 ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿಯನ್ನು ತಾಲೂಕು ಆರೋಗ್ಯ ಇಲಾಖೆ ಇಟ್ಟುಕೊಂಡಿದೆ.
ಪ್ರತ್ಯೇಕ ಬೂತ್ ವ್ಯವಸ್ಥೆ
ಗ್ರಾಮಾಂತರ ಭಾಗಗಳಲ್ಲಿ 145 ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 18 ಬೂತ್‌ಗಳನ್ನು ತೆರೆಯಲಾಗಿತ್ತು. ಗ್ರಾಮಾಂತರದ ಕಡಬ ಹಾಗೂ ಉಪ್ಪಿನಂಗಡಿ ಮತ್ತು ಪುತ್ತೂರು ನಗರ ವ್ಯಾಪ್ತಿಯ ರೈಲ್ವೇ ನಿಲ್ದಾಣ ಮತ್ತು ಬಸ್ಸು ನಿಲ್ದಾಣದಲ್ಲಿ ಪ್ರತ್ಯೇಕ ಬೂತ್ ಗಳನ್ನು ತೆರೆಯಲಾಗಿತ್ತು. ನಗರದಲ್ಲಿ ಒಂದು ಸಂಚಾರಿ ಬೂತ್ ವ್ಯವಸ್ಥೆಯನ್ನು ಮಾಡಲಾಗಿತ್ತು. ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್, ಶಾಲಾ-ಕಾಲೇಜು ಎನ್ನೆಸೆಸ್ ಘಟಕಗಳ ಸಹಯೋಗದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು.
ನಗರಸಭಾ ವ್ಯಾಪ್ತಿಯ ಸರಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಂಜಲ್ಪಡ್ಪು , ನೆಹರೂನಗರ, ಅಜೇಯನಗರ ಸಹಿತ 18 ಬೂತ್‌ಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿತ್ತು
ಸುಳ್ಯ: 10,346 ಮಕ್ಕಳಿಗೆ ಲಸಿಕೆ
ಸುಳ್ಯ: ತಾಲೂಕಿನ ವಿವಿಧ ಭಾಗಗಳಲ್ಲಿ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಎರಡನೆ ಹಂತದ ಕಾರ್ಯಕ್ರಮ ರವಿವಾರ ನಡೆಯಿತು. ತಾಲೂಕಿನ 10,856 ಮಕ್ಕಳ ಪೈಕಿ 10,346 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಶೇ. 95.3ರಷ್ಟು ಪ್ರಗತಿ ದಾಖಲಾಗಿದೆ. ನಗರ, ಅರಂತೋಡು, ಬೆಳ್ಳಾರೆ, ಜಾಲ್ಸೂರು, ಗುತ್ತಿಗಾರು ಜಿ.ಪಂ. ಕ್ಷೇತ್ರದ ಅಂಗನವಾಡಿ, ಆಯ್ದ ಶಾಲೆ ಸಹಿತ 75 ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು. ಎರಡು ಸಂಚಾರಿ ಬೂತ್ ಮತ್ತು ಒಂದು ದೇವಾಲಯದಲ್ಲೂ ಲಸಿಕೆ ನೀಡಲಾಗಿದೆ. ರವಿವಾರ ಲಸಿಕೆಗೆ ಬಾಕಿ ಉಳಿದ ಮಕ್ಕಳಿಗೆ ಸೋಮವಾರ ಮತ್ತು ಮಂಗಳವಾರ ಮನೆ-ಮನೆ ಭೇಟಿ
ಮೂಲಕ ಲಸಿಕೆ ನೀಡಲಾಗುತ್ತದೆ.
ತಾಲೂಕಿನ 31,269 ಮನೆಗಳಿಗೆ 75 ಕೇಂದ್ರದಿಂದ ಭೇಟಿ ಮಾಡಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಅವರು ‘ಉದಯವಾಣಿ’ಗೆ ತಿಳಿಸಿದ್ದಾರೆ. ನಗರದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ನ.ಪಂ. ಸದಸ್ಯ ಕೆ.ಎಂ. ಮುಸ್ತಾಫ ಮಗುವಿಗೆ ಲಸಿಕೆ ನೀಡುವ ಮೂಲಕ ಉದ್ಘಾಟಿಸಿದರು. ಮಲೆನಾಡು ಚಾರಿಟೆಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ರಿಯಾಝ್, ಆರೋಗ್ಯ ಸಹಾಯಕಿ ಭವಾನಿ ಕೆ.ಕೆ., ಅಂಗನವಾಡಿ ಕಾರ್ಯಕರ್ತೆ ಶೋಭಾ ಗಾಂಧಿನಗರ, ಲತಾ ಕಾಯರ್ತೋಡಿ, ಶಶಿಕಲಾ, ಹನೀಫ್ ಬೀಜದಕೊಚ್ಚಿ ಪಾಲ್ಗೊಂಡರು.