Advertisement

ಹೆಸರಿನಲ್ಲೇನಿದೆ ?

08:45 AM Jul 15, 2022 | Team Udayavani |

ಹೆಸರಿನಲ್ಲೇನಿದೆ? ಎಂದು ಅಂದುಕೊಂಡರೆ ಹೆಸರುಗಳು ಹಾಗೆ ಒಮ್ಮೊಮ್ಮೆ ನಮ್ಮನ್ನು ಅವರ ಕಡೆ ತಿರುಗಿ ನೋಡುವ ಹಾಗೆ ಮಾಡಿಬಿಡುತ್ತವೆ. ಹಾಗಾದರೆ ಒಬ್ಬ ಮನುಷ್ಯನಿಗೆ ಹೆಸರು ಎಷ್ಟು ಮುಖ್ಯವಾಗುತ್ತದೆ ಎಂದು ನಾವು ಯೋಚಿಸಿದರೆ ನಮಗೆ ಹೊಸ ಹೊಸ ವಿಚಾರಗಳು ತಿಳಿದು ಬರುತ್ತದೆ. ಹೆಸರು ಇಲ್ಲದೆ ನಾವು ಯಾವ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಿಲ್ಲ. ವ್ಯಕ್ತಿ ಕೆಲವೊಮ್ಮೆ ತನ್ನ ಸಾಧನೆಯಿಂದ ಗುರುತಿಸಿಕೊಂಡರೆ ಇನ್ನು ಕೆಲವೊಮ್ಮೆ ತನ್ನ ಹೆಸರಿಂದಲೂ ಗುರುತಿಸಿಕೊಳ್ಳುತ್ತಾನೆ.

Advertisement

ಹಾಗಾದರೆ ಹೆಸರು ಯಾವತರ ಇರಬೇಕು ಎಂಬುದರ ಬಗ್ಗೆಯೂ ನಾವು ಯೋಚಿಸಬೇಕು. ಏಕೆಂದರೆ ಹಳೆ ಕಾಲದಲ್ಲಾದರೆ ದೇವರು ಹೆಸರುಗಳನ್ನೇ ಜನರಿಗೆ ಇಡಲಾಗುತ್ತಿತ್ತು ಅಥವಾ ತಮ್ಮ ವಂಶದಲ್ಲಿ ಇರುವ ಹಿರಿಯರ ಹೆಸರುಗಳು ಹೇಗಿದ್ದಾವೋ ಹಾಗೆ ತಮ್ಮ ಮಗ, ಮಗಳು, ಮೊಮ್ಮಗ, ಮೊಮ್ಮಗಳಿಗೆ ಇಡುತ್ತಿದ್ದರು. ರಾಮ, ಶಂಕರ, ಭೀಮ, ಪಾರ್ವತಿ, ಲಕ್ಷ್ಮೀ ಇತ್ಯಾದಿ ಹೆಸರುಗಳು ಸಾಮಾನ್ಯವಾಗಿದ್ದವು. ಆದರೆ ಈಗ ಕಾಲ ಬದಲಾಗಿದೆ.

ಈಗಿನ ಕಾಲದ ಹೆಸರುಗಳನ್ನೂ ನೋಡಿದರೆ ಅದರ ಅರ್ಥ ಏನಿರಬಹುದು ಎಂದು ತೆಲೆಗೆ ಕೈ ಇಟ್ಟು ಒಮ್ಮೆ ಯೋಚಿಸಬೇಕಾಗುತ್ತದೆ. ಅದರಲ್ಲಿ ಕೆಲವು ಹೆಸರುಗಳಂತು ಕನ್ನಡ ಪಾದವಾ ಅಥವಾ ಇಂಗ್ಲಿಷ್ ಅಥವಾ ಪೂರ್ಚಗೀಸ್ ಪದವಾ ಎನ್ನುವುದೇ ಗೊತ್ತಾಗುವುದಿಲ್ಲ. ಹೆಸರಿನ ಅರ್ಥ ಬಿಡಿ ಒಮ್ಮೊಮ್ಮೆ ಉಚ್ಚಾರ ಮಾಡಲು ಕಷ್ಟವಾಗುತ್ತದೆ.

ನಾನೊಮ್ಮೆ ನಮ್ಮದೇ ಊರಿನ ಮದುವೆಗೆ ಹೋದಾಗ ಅಲ್ಲಿ ಬೇರೆ ಬೇರೆ ಊರಿನವರು ಬಂದಿದ್ದರು. ಅದರಲ್ಲಿ ಒಬ್ಬಳು ನನ್ನ ಪಕ್ಕದಲ್ಲಿ ಕುಳಿತವರಿಗೆ ತನ್ನ ಹೆಸರನ್ನು, ತನ್ನ ಓದು ಅಭ್ಯಾಸಗಳ ಬಗ್ಗೆ ಹೇಳುತ್ತಿದ್ದಳು. ನಂತರ ಅವಳು ಅಲ್ಲಿಂದ ಹೋದ ಮೇಲೆ ನನ್ನ ಪಕ್ಕದವರು ನನ್ನ ಮುಖನೋಡಿ ಅವಳ ಹೆಸರು ಏನು ಅಂದು ಕೇಳದರು. ನನಗು ಆ ಹೆಸರನ್ನು ಕೇಳಿಸಿಕೊಂಡರು ಉಚ್ಚರ ಮಾಡಲು ಬರಲಿಲ್ಲ ಮತ್ತೆ ಈಗಿನ ಕಾಲದವರು ಏನೇನೋ ಅರ್ಥವಿಲ್ಲದ ಹೆಸರನ್ನು ಇಟ್ಟುಕೊಳ್ಳುತ್ತಾರೆ ಎಂದು ಅವರು ಗೊಣಗುತ್ತಾ ಕುಳಿತರು.

ಇನ್ನು ಒಮ್ಮೆ ನಾನು ನನ್ನ ಗೆಳತಿಯ ಮನೆಗೆ ಹೋದಾಗ ಅಲ್ಲಿ ಅವರ ಮನೆಗೆ ಅತಿಥಿಗಳು ಬಂದಿದ್ದರು ಅವರಲ್ಲಿ ಒಬ್ಬ ತನ್ನ ಹೆಸರು ಕಾರ್ಲ ಎಂದು ಹೇಳಿದ ನನಗೆ ಆಶ್ಚರ್ಯ. ಈ ರೀತಿಯ ಹೆಸರುಗಳನ್ನೂ ಇಟ್ಟು ಕೊಳ್ಳುವವರು ಇದ್ದಾರೆಯೇ ಎಂದು. ಹೀಗೆ ಒಂದೊಂದು ಚಿತ್ರ ವಿಚಿತ್ರ ಹೆಸರುಗಳನ್ನೂ ಕೇಳಿದಾಗಲು ತಲೆಗೆ ಹುಳ ಬಿಟ್ಟಂತೆ ಆಗುತ್ತದೆ. ಕೆಲವರು ಹೆಸರುಗಳನ್ನೂ ಕೇಳಿ ಅಲ್ಲಿಯೇ ಅದರ ಅರ್ಥವನ್ನು ಕೇಳಿ ಬಿಡುತ್ತಾರೆ. ಹೆಸರಿನ ಅರ್ಥ ತಿಳಿದವನು ಗುಡ್ ಎನಿಸಿಕೊಂಡರೆ, ತಿಳಿಯದವನು ಪೆಚ್ಚು ಮೊರೆ ಹಾಕ ಬೇಕಾಗುತ್ತದೆ.

Advertisement

ಹಾಗಾದರೆ ಹೆಸರುಗಳು ಅಂದರೆ ಹೇಗಿರಬೇಕು ಎಂದು ನಾವು ಯೋಚಿಸಿದರೆ ಹೀಗೇ ಇರಬೇಕು ಎಂದು ಹೇಳುವುದು ಕಷ್ಟ ಆದರೆ ನಾವು ಇಡುವ ಹೆಸರುಗಳು ಒಂದ ಅರ್ಥವತ್ತಾದ ಸುಂದರವಾದ ಹೆಸರಾಗಿರಬೇಕು. ಅದು ಏನನ್ನೋ ಹೇಳುವ ಹಾಗೆ ಇರಬೇಕು. ಹೆಸರುಗಳನ್ನೂ ಕೇಳಿದಾಗ ಮುಖದಲ್ಲೊಂದು ನಗು ಬರಬೇಕು. ಮನಸ್ಸಿನ ಆಳದಲ್ಲಿ ಕುಳಿತುಕೊಳ್ಳುವ ಹಾಗೆ ಇರಬೇಕು.

ಒಮ್ಮೆಮ್ಮೆ ನಮ್ಮ ಹೆಸರುಗಳು ನಮ್ಮ ಊರನ್ನು ಪ್ರತಿನಿಧಿಸುವ ಹಾಗೆ ಇರುತ್ತದೆ. ಯಲವ್ವ, ಮಾರಮ್ಮ, ಸಿದ್ದಪ್ಪ, ಕರಿಯಪ್ಪ, ಬೀರಪ್ಪ ಹೀಗೆ ಇತ್ಯಾದಿ ಹೆಸರುಗಳನ್ನು ಕೇಳಿದರೆ ಇದು ಹಳ್ಳಿಯವರೇ ಎಂದು ತಿಳಿದು ಬಿಡುತ್ತದೆ. ಅದರಲ್ಲಿಯೂ ಬಯಲು ಸೀಮೆಯವರ ಹೆಸರು ಅವರ ಭಾಷೆಯಂತೆ ಅವರ ಸಂಸ್ಕೃತಿಯನ್ನು ಪ್ರತಿನಿಧಿಸುವ ಹಾಗೆ ಇರುತ್ತದೆ.

ಹೀಗೆ ಒಂದೊಂದು ಹೆಸರು ಒಂದೊಂದು ರೀತಿಯಲ್ಲಿ ನಮ್ಮ ದೇಶದ ವೈವಿಧ್ಯತೆಯಂತೆ ಇದೆ. ಆದರೆ ಈ ಹೆಸರಿನಲ್ಲೇನಿದೆ ಅಂತಹ ಮಹತ್ವ ಎಂದು ನಮಗೆ ಪ್ರಶ್ನೆ ಮೂಡಬಹುದು. ಆದರೆ ನಮ್ಮ ಹೆಸರು ಕೆಲವೊಮ್ಮೆ ನಮ್ಮನ್ನು ಪ್ರತಿನಿಧಿಸುವ ಜೊತೆ ಜೊತೆ ನಮ್ಮ ಊರು, ಜಿಲ್ಲೆ, ದೇಶವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಹೆಸರುಗಳು ಯಾವಾಗಲೂ ಸುಲಭವಾಗಿದ್ದಷ್ಟು, ಜನರ ಮನಸ್ಸಿಗೆ ಹತ್ತಿರವಾಗುವ ಹಾಗೆ ಇದ್ದಷ್ಟು ನಮ್ಮನು ಜನರು ನೆನಪಿನಲ್ಲಿ ಇಟ್ಟುಕೊಳ್ಳಲು ಇಷ್ಟ ಪಡುತ್ತಾರೆ. ಹೆಸರು ಸುಲಭವಿದ್ದಾಗ ಅವರಿಗೆ ನಮ್ಮನ್ನು ಗುರುತಿಸಲು ಸಾಧ್ಯವಾಗುತ್ತದೆ.

ಇದಿಷ್ಟು ಹೆಸರುಗಳ ಬಗ್ಗೆ ಆದರೆ ಹೆಸರುಗಳನ್ನು ಕರೆಯುವಾಗ ನಾವು ಒಂದು ರೀತಿಯ ವಿಚಿತ್ರ ಅಭ್ಯಾಸವನ್ನು ಮಾಡಿಕೊಂಡಿದ್ದೇವೆಯಲ್ಲ ಅದರ ಬಗ್ಗೆಯೂ ಸ್ವಲ್ಪ ಯೋಚಿಸಬೇಕು. ಆ ಹೆಸರು ಉದ್ದವಿರಲಿ, ಚಿಕ್ಕದಿರಲಿ ಅದನ್ನು ಅರ್ಧ ಕತ್ತರಿಸಿ ಹೇಳುವುದೇ ಈಗಿನ ರೂಢಿ ಅಥವಾ ಈಗಿನ ಕಾಲದ ಪ್ಯಾಷನ್ ಎಂದೇ ಕರೆಯಬಹುದು. ಹೆಸರುಗಳನ್ನು ಇಡುವುದು ಒಂದು ರೀತಿಯ ಕಲೆಯಾದರೆ ಅದನ್ನು ಕರೆಯುವುದು ಇನ್ನೊಂದು ರೀತಿಯ ಕಲೆ.

ಅದು ಏನೇ ಇರಲಿ ಬಿಡಿ ಹೆಸರುಗಳನ್ನೂ ಇಡುವಾಗ ಇನ್ನು ಮುಂದಾದರೂ ಸ್ವಲ್ಪ ಯೋಚಿಸಿ ಇಡೋಣ. ಹೆಸರುಗಳು ಹೆಸರುಗಳಂತೆಯೇ ಇರಲಿ.

– ಮಧುರ ಎಲ್ ಭಟ್ಟ
ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next