ಕೊಲಂಬೋ: ವಿದೇಶಿ ವಿನಿಮಯದ ಕೊರತೆಯ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾ ಪೆಟ್ರೋಲ್ ಬೆಲೆಯನ್ನು ಶೇ.24.3ರಷ್ಟು ಹಾಗೂ ಡೀಸೆಲ್ ಬೆಲೆಯನ್ನು ಶೇ.38.4ರಷ್ಟು ಏರಿಕೆ ಮಾಡುವ ಮೂಲಕ ಇಂಧನ ಬೆಲೆ ಗಗನಕ್ಕೇರಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಭಟ್ಕಳ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ; ಅತ್ಯಾಚಾರ ಮಾಡಿ ಕೊಲೆಗೈದಿರುವ ಶಂಕೆ
ಏಪ್ರಿಲ್ 19ರ ನಂತರ ಶ್ರೀಲಂಕಾ ಎರಡನೇ ಬಾರಿ ತೈಲ ಬೆಲೆಯನ್ನು ಹೆಚ್ಚಳ ಮಾಡಿದ್ದು, ಇದೀಗ ಲಂಕಾದಲ್ಲಿ ಹೆಚ್ಚು ಬಳಕೆಯಾಗುವ ಒಕ್ಟೇನ್ 92 ಪೆಟ್ರೋಲ್ ಬೆಲೆ ಲೀಟರ್ ಗೆ 420 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ಲೀಟರ್ ಬೆಲೆ 400 ರೂಪಾಯಿಗೆ ಹೆಚ್ಚಳವಾಗಿದೆ.
ಒಕ್ಟೇನ್ 92 ಪೆಟ್ರೋಲ್ ಬೆಲೆ ಲೀಟರ್ ಗೆ ಶೇ.24.3ರಷ್ಟು (82 ರೂಪಾಯಿ) ಮತ್ತು ಡೀಸೆಲ್ ಬೆಲೆ ಶೇ.38.4ರಷ್ಟು (111 ರೂಪಾಯಿ) ಏರಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಲೋನ್ ಪೆಟ್ರೋಲಿಯಂ ಕಾರ್ಪೋರೇಶನ್ (ಸಿಪಿಸಿ) ತಿಳಿಸಿದೆ.
ಇಂದು ಮುಂಜಾನೆ 3ಗಂಟೆಯಿಂದ ಇಂಧನ ಬೆಲೆಯನ್ನು ಪರಿಷ್ಕರಿಸಲಾಗಿದೆ. ಇಂಧನ ಬೆಲೆ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ನಿಟ್ಟಿನಲ್ಲಿ ಇಂಧನ ಬೆಲೆ ಪರಿಷ್ಕರಿಸಲಾಗಿದೆ ಎಂದು ವಿದ್ಯುತ್ ಮತ್ತು ಇಂಧನ ಖಾತೆ ಸಚಿವೆ ಕಾಂಚನಾ ವಿಜೆಸೇಕರ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
ಇಂಧನ ಕೊರತೆಯ ಜೊತೆ ಬೆಲೆ ಏರಿಕೆ ಕೂಡಾ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ. ಇಂಧನ ಬೆಲೆ ಏರಿಕೆಯ ಪರಿಣಾಮ, ಆಟೋ ರಿಕ್ಷಾ ಬಾಡಿಗೆ ಕೂಡಾ ಹೆಚ್ಚಳ ಮಾಡಿದ್ದು, ಪ್ರತಿ ಮೊದಲ ಕಿಲೋ ಮೀಟರ್ ಗೆ 90 ರೂಪಾಯಿ, ನಂತರ ಪ್ರತಿ ಕಿಲೋ ಮೀಟರ ಗೆ 80 ರೂಪಾಯಿಯಂತೆ ಬಾಡಿಗೆ ದರ ಏರಿಕೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ.