ವಿಧಾನ ಪರಿಷತ್: ತಿರುಮಲ- ತಿರುಪತಿಯಲ್ಲಿ ಛತ್ರಕ್ಕೆ ಸಂಬಂಧಪಟ್ಟ 7 ಎಕರೆ 5 ಸೆಂಟ್ಸ್ ಭೂಮಿಗೆ ಸಂಬಂಧಪಟ್ಟ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹಿತಾಸಕ್ತಿಗೆ ವ್ಯತಿರಿಕ್ತವಾಗುವಂತೆ ನೀಡಿದ ಉತ್ತರವನ್ನು ಸಚಿವರೇ ಹಿಂಪಡೆದ ಪ್ರಸಂಗ ಬುಧವಾರ ನಡೆಯಿತು.
ಜೆಡಿಎಸ್‌ನ ಆರ್.ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಮುಜರಾಯಿ ಸಚಿವ ರುದ್ರಪ್ಪಲಮಾಣಿ ನೀಡಿದ ಉತ್ತರವು ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿರುವ ಪ್ರಕರಣಕ್ಕೆ ವ್ಯತಿರಿಕ್ತ ಎಂಬ ಬಗ್ಗೆ ಆಡಳಿತ ಪಕ್ಷದಿಂದಲೇ ಆಕ್ಷೇಪ ವ್ಯಕ್ತವಾಗಿದ್ದರಿಂದ ಉತ್ತರ ಹಿಂಪಡೆದು ಪೇಚಿಗೆ ಸಿಲುಕಿದರು.
ಆಂಧ್ರಪ್ರದೇಶದಲ್ಲಿರುವ ತಿರುಮಲ- ತಿರುಪತಿ ದೇವಸ್ಥಾನದ ಆವರಣದಲ್ಲಿ ಛತ್ರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಅಧೀನದಲ್ಲಿ 7 ಎಕರೆ 60 ಸೆಂಟ್ಸ್ ಭೂಮಿಯಿದೆ. ಈ ಪೈಕಿ ತಿರುಮಲ ತಿರುಪತಿ ದೇವಸ್ಥಾನದ ಕೋರಿಕೆಯಂತೆ ವೆಸ್ಟ್‌ಮಾದ ರಸ್ತೆ ವಿಸ್ತರಣೆಗಾಗಿ 55 ಸೆಂಟ್ಸ್ ಭೂಮಿ ನೀಡಲಾಗಿದೆ. ಉಳಿದ 7 ಎಕರೆ 5 ಸೆಂಟ್ಸ್ ಭೂಮಿಯನ್ನು ರಾಜ್ಯ ಸರ್ಕಾರದ ವಶದಲ್ಲಿದ್ದರೂ ಸ್ವತ್ತಿನ ಹಕ್ಕು (ಟೈಟಲ್) ತಿರುಮಲ ತಿರುಪತಿ ದೇವಸ್ಥಾನದ ಹೆಸರಿನಲ್ಲಿದೆ ಎಂದು ಉತ್ತರ ನೀಡಿದ್ದರು. ಇದಕ್ಕೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಆಗ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ, “ಭೂಮಿ ರಾಜ್ಯ ಸರ್ಕಾರದ ವಶದಲ್ಲಿದ್ದರೂ ಸ್ವತ್ತಿನ ಹಕ್ಕು ಟಿಟಿಡಿ ಹೆಸರಿನಲ್ಲಿದೆ ಎಂದು ನೀಡಿರುವ ಉತ್ತರ ತಪ್ಪಾಗಿದೆ. ಸ್ವತ್ತಿನ ಹಕ್ಕು ರಾಜ್ಯ ಸರ್ಕಾರದ ಹೆಸರಿನಲ್ಲಿಲ್ಲ ಎಂದರೆ ಆಸ್ತಿಯೇ ಕೈತಪ್ಪುವ ಸಾಧ್ಯತೆ ಇದೆ. ವಿಧಾನ ಪರಿಷತ್‌ನಲ್ಲಿ ಸಚಿವರ ಉತ್ತರ ನೀಡಿದ್ದಾರೆ ಎನ್ನುವುದಾದರೆ ಆಂಧ್ರ ಹೈಕೋರ್ಟ್‌ನಲ್ಲಿರುವ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಾದವೇ ಬಿದ್ದುಹೋಗಲಿದೆ. ಕೂಡಲೇ ಸರ್ಕಾರ ಉತ್ತರ ವಾಪಸ್ ಪಡೆಯಬೇಕು’ ಎಂದರು.
ಬಳಿಕ ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಸಚಿವ ರುದ್ರಪ್ಪ ಲಮಾಣಿ, “ಉತ್ತರ ವಾಪಸ್ ಪಡೆಯಲಾಗುವುದು. ವಕೀಲರೊಂದಿಗೆ ಚರ್ಚಿಸಿ ಶೀಘ್ರವೇ ಉತ್ತರ ಒದಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು. ಬಳಿಕ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಉತ್ತರವನ್ನು ತಡೆಹಿಡಿಯಲಾಗಿದೆ ಎಂದು ಪ್ರಕಟಿಸುವ ಮೂಲಕ ಚರ್ಚೆಗೆ ತೆರೆ ಎಳೆದರು.