Advertisement

ಮರಳು ಲಭ್ಯತೆಗೆ ಉಸ್ತುವಾರಿ ಸಚಿವರೇ ಕಾರಣ: ಉಡುಪಿ ಬ್ಲಾಕ್‌ ಕಾಂಗ್ರೆಸ್

07:55 AM May 05, 2018 | Karthik A |

ಉಡುಪಿ: ಕರಾವಳಿ ಜಿಲ್ಲೆಯಾದ್ಯಂತ ಸಿ.ಆರ್‌.ಝಡ್‌. ಮರಳು ತೆರವುಗೊಳಿಸುವ ಕಾರ್ಯ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯದ್ದಾಗಿದ್ದು, ಇದರ ನಿರ್ವಹಣೆಯನ್ನು ಸಚಿವಾಲಯವೇ ರಚಿಸಿರುವ ಸಮಿತಿಯೇ ಮಾಡುತ್ತಿದೆ. ಇದರಲ್ಲಿ ರಾಜ್ಯ ಸರಕಾರದ ಯಾವುದೇ ಪಾತ್ರ ಇಲ್ಲದಿದ್ದರೂ ಬಿಜೆಪಿ ಮುಖಂಡರು ಕಾಂಗ್ರೆಸ್‌ ಪಕ್ಷ ಹಾಗೂ ರಾಜ್ಯ ಸರಕಾರದ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಬ್ಲಾಕ್‌ ಕಾಂಗ್ರೆಸ್‌ ಟೀಕಿಸಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್‌ ಮಧ್ವರಾಜ್‌ ವಿಶೇಷ ಮುತುವರ್ಜಿ ವಹಿಸಿ ರಾಜ್ಯ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಕೆ.ಸಿ.ಝಡ್‌.ಎಂ.ಎ. ಸಭೆಯನ್ನು ಆದಷ್ಟು ಬೇಗ ನಡೆಸಿ ಶೀಘ್ರವೇ ಜಿಲ್ಲೆಯ ಜನರಿಗೆ ಮರಳು ದೊರಕಿಸಲು ವಿನಂತಿಸಿದ್ದರು. ಇದರ ಪರಿಣಾಮ 2017ರ ಜು.25 ರಂದು ಡಿಸಿ ಕಚೇರಿಯಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕೆ.ಸಿ.ಝಡ್‌.ಎಂ.ಎ. ಸಭೆ ನಡೆಸಿ ಉಡುಪಿ ಹಾಗೂ ದ. ಕನ್ನಡ ಜಿಲ್ಲೆಗೆ 2017-18ನೇ ಸಾಲಿನಲ್ಲಿ ಸಿಆರ್‌ಝಡ್‌ ವ್ಯಾಪ್ತಿಯ ಮರಳು ಪರವಾನಿಗೆ ದೊರಕಿಸಿಕೊಡಲು ಪಕ್ಷಾತೀತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ. ಅಲ್ಲದೆ ಆ ಬಳಿಕ ಉಡುಪಿ ಡಿಸಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಗಳನ್ನು ನಡೆಸಿ ಮರಳು ಜನರಿಗೆ ಲಭ್ಯವಾಗಲು ಹಾಗೂ ಜಿಲ್ಲೆಯ ಮರಳನ್ನು ಜಿಲ್ಲೆಗೇ ಬಳಕೆ ಮಾಡುವಂತೆ ಮಾಡಿದ್ದಾರೆ.

ಸಂಸದರು ಮುತುವರ್ಜಿ ವಹಿಸಿ ಮಾಡಬೇಕಾದ ಕೆಲಸವನ್ನು ಮಾಡದೇ ಕಾಂಗ್ರೆಸ್‌, ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಇದರ ಬದಲು ಬಿಜೆಪಿ ಈ ಬಗ್ಗೆ ತಮ್ಮ ಪಕ್ಷದ ವತಿಯಿಂದ ಕರಾವಳಿ ಭಾಗದ ಸಚಿವರನ್ನು ಒಳ ಗೊಂಡ 5 ಲೋಕಸಭಾ ಸದಸ್ಯರು ಇನ್ನಾದರೂ ಕೇಂದ್ರ ಸರಕಾರದಿಂದ ಜನರಿಗೆ ಉತ್ತಮವಾಗಿ ಕರಾವಳಿಯ ಮರಳು ದೊರೆಯುವಂತೆ ಮಾಡಲಿ ಎಂದು ಬ್ಲಾಕ್‌ ಕಾಂಗ್ರೆಸ್‌ 
ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ ಸವಾಲೆಸೆದರು.

ನೈಜ ಕಾರಣ ಏನು?
ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ನಾನ್‌ ಸಿ.ಆರ್‌.ಝಡ್‌. ಪ್ರದೇಶದ ನದಿಗಳಲ್ಲಿ ನೀರಿನ ಒಳಗಿನ ಮರಳುಗಾರಿಕೆಯನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ನಿಷೇಧಿಸಿರುವುದೇ ಮರಳಿನ ಕೊರತೆಗೆ ಕಾರಣ. ಕೇಂದ್ರ ಸರಕಾರದ ನೀತಿ ಇದಕ್ಕೆ ಕಾರಣವಾಗಿದೆ. ಇದನ್ನು ಕರಾವಳಿ ಜಿಲ್ಲೆಗಳ ಬಿಜೆಪಿ ನಾಯಕರು ಮರೆತಿದ್ದಾರೆ. ಅಲ್ಲದೆ ಇಲ್ಲಸಲ್ಲದ ಅಪ ಪ್ರಚಾರ ನಡೆಸಿ ಮರಳು ಲಭ್ಯವಿಲ್ಲವೆಂದು ಬೊಬ್ಬೆ ಹೊಡೆಯುವ ಬಿಜೆಪಿ ನಾಯಕರು ಯಾವ ಪ್ರಾಮಾಣಿಕ ಪ್ರಯತ್ನವನ್ನೂ ನಡೆಸಿಲ್ಲ ಎಂದು ಆರೋಪಿಸಿದರು.

ಆರೋಪ ನಿಲ್ಲಿಸಲಿ
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು 2016ರ ಡಿ.15 ಹಾಗೂ 2018ರ ಜ.2 ರಂದು ಡಿಸಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ನಾನ್‌ ಸಿ.ಆರ್‌.ಝಡ್‌. ಪ್ರದೇಶದಲ್ಲಿ ಗುರುತಿಸಿದ 16 ಮರಳು ಬ್ಲಾಕ್‌ಗಳನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಗೆ ಶಿಫಾರಸು ಮಾಡಿಸಿರುತ್ತಾರೆ. ಅಲ್ಲದೆ ರಾಜ್ಯದಿಂದ ಈಗಾಗಲೇ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಶಿಫಾರಸು ಮಾಡಿದರೂ ಅನುಮತಿ ಪಡೆಯುವಲ್ಲಿ ಬಿಜೆಪಿ ಮುಖಂಡರು ಪ್ರಯತ್ನ ಮಾಡಿಲ್ಲ ಎಂದು ಆಪಾದಿಸಿದರು. ಇನ್ನಾದರೂ ಬಿಜೆಪಿಯವರು ರಾಜ್ಯ ಸರಕಾರ, ಕಾಂಗ್ರೆಸ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಆರೋಪ ನಿಲ್ಲಿಸಲಿ ಎಂದು ಹೇಳಿದ್ದಾರೆ.

Advertisement

ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್‌, ಕಾಂಗ್ರೆಸ್‌ ಮುಖಂಡ ಅಮೃತ್‌ ಶೆಣೈ, ನಗರಸಭಾ ಸದಸ್ಯ ನಾರಾಯಣ ಕುಂದರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರಶಾಂತ್‌ ಪೂಜಾರಿ ಮೊದಲಾದವರು ಪಕ್ಷದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next