ಹೊಸದಿಲ್ಲಿ: ವಿವಾದಿತ ಹೇಳಿಕೆಗಳನ್ನು ನೀಡಿ ಮುಜುಗರ ಉಂಟು ಮಾಡುವಂಥವರನ್ನು ಪಕ್ಷವು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ರವಾನಿಸಿದೆ. ಭೋಪಾಲದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ದಿಲ್ಲಿಯ ಸಂಸದರಾದ ಪರ್ವೇಶ್ ಸಾಹಿಬ್ ಸಿಂಗ್ ವರ್ಮ ಮತ್ತು ರಮೇಶ್ ಬಿಧೂರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿಲ್ಲ.
ಈ ಮೂವರು ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ದ್ವೇಷಭಾಷಣ, ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದರು.ಪ್ರಜ್ಞಾ ಸಿಂಗ್ ಠಾಕೂರ್ ಅವರು ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯನ್ನು “ದೇಶಭಕ್ತ’ ಎಂದು ಹೇಳಿದ್ದು ಪಕ್ಷಕ್ಕೆ ಹಾನಿಯುಂಟು ಮಾಡಿದೆ. ಈ ಹೇಳಿಕೆಗೆ ಪ್ರತಿಯಾಗಿ ಸ್ವತಃ ಪ್ರಧಾನಿ ಮೋದಿಯೇ ಅಸಮಾಧಾನ ವ್ಯಕ್ತಪಡಿಸಿ, “ಗಾಂಧೀಜಿಯವರ ಟೀಕೆ ಅಥವಾ ಗೋಡ್ಸೆಗೆ ಬೆಂಬಲವಾಗಿ ಹೇಳಿಕೆ ನೀಡುವುದು ಕೆಟ್ಟ ನಡವಳಿಕೆಯಾಗಿದೆ.
ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅವರು ಕ್ಷಮೆ ಕೇಳಿದ್ದಾರಾದರೂ ನಾನು ಅವರನ್ನು ಪೂರ್ಣವಾಗಿ ಕ್ಷಮಿಸಲಾರೆ’ ಎಂದು ಐದು ವರ್ಷಗಳ ಹಿಂದೆ ಹೇಳಿದ್ದರು. ಸಾಧ್ವಿ ಪ್ರಜ್ಞಾ ಈಗ ಟಿಕೆಟ್ ವಂಚಿತರಾಗಿದ್ದಾರೆ. ಅದೇ ರೀತಿ ದಕ್ಷಿಣ ದಿಲ್ಲಿ ಸಂಸದ ರಮೇಶ್ ಬಿಧೂರಿಯವರು ಕಳೆದ ವರ್ಷ ಲೋಕಸಭೆ ಕಲಾಪದ ವೇಳೆ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿಯನ್ನು ಉಗ್ರ ಎಂದು ಕರೆದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಪಶ್ಚಿಮ ದಿಲ್ಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮ ಟಿಕೆಟ್ ವಂಚಿತರಾಗಿರುವುದು ಹಲವರಿಗೆ ಆಶ್ಚರ್ಯ ತಂದಿದೆ. ಆದರೆ ಅವರೂ ದ್ವೇಷ ಭಾಷಣದಿಂದಲೇ ಖ್ಯಾತರಾಗಿದ್ದಾರೆ. 2020ರ ದಿಲ್ಲಿ ದಂಗೆ ವೇಳೆ ಅವರು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಇಬ್ಬರು ನಾಯಕರಿಗೂ ಪಕ್ಷವು ಟಿಕೆಟ್ ನೀಡಿಲ್ಲ.
ಹೇಳಿದ್ದೇನು?
ಮುಂಬಯಿ ದಾಳಿಯ ವೇಳೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿಗೆ ನನ್ನ ಶಾಪವೇ ಕಾರಣ.
– ಪ್ರಜ್ಞಾ ಸಿಂಗ್ ಠಾಕೂರ್,
ಭೋಪಾಲ ಸಂಸದೆ ಅವರ ತಲೆ ಸರಿ ಮಾಡುವುದಕ್ಕೆ, ಅವರನ್ನು ಸರಿ ದಾರಿಗೆ ತರುವುದಕ್ಕೆ ಸಂಪೂರ್ಣ ಬಹಿಷ್ಕಾರ ವೊಂದೇ ದಾರಿ.
– ಪರ್ವೇಶ್ ಸಾಹಿಬ್ ಸಿಂಗ್ ವರ್ಮ, ಪಶ್ಚಿಮ ದಿಲ್ಲಿ ಸಂಸದ
ಈತ (ಡ್ಯಾನಿಶ್ ಅಲಿ) ಉಗ್ರವಾದಿ ಯಾಗಿದ್ದಾನೆ, ಭಯೋತ್ಪಾದಕ ನಾಗಿದ್ದಾನೆ.
– ರಮೇಶ್ ಬಿಧೂರಿ,
ದಕ್ಷಿಣ ದಿಲ್ಲಿ ಸಂಸದ