ನವದೆಹಲಿ:ಇತ್ತೀಚೆಗಷ್ಟೇ ಭಾರತೀಯ ವಾಯುಪಡೆಗೆ ಐದು ರಫೇಲ್ ಯುದ್ಧ ವಿಮಾನ ಸೇರ್ಪಡೆಗೊಂಡ ಬೆನ್ನಲ್ಲೇ ಇದೀಗ ಮತ್ತೆ ಮೂರು ರಫೇಲ್ ಯುದ್ಧ ವಿಮಾನ ನವೆಂಬರ್ 5ರಂದು ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಭಾರತೀಯ ವಾಯುಪಡೆಗೆ ಮತ್ತಷ್ಟು ಬಲತುಂಬಲಿದೆ ವರದಿ ತಿಳಿಸಿದೆ.
ಜುಲೈ 26ರಂದು ಫ್ರಾನ್ಸ್ ನಿಂದ ಅಬುಧಾಬಿ ಮೂಲಕ ಭಾರತಕ್ಕೆ ಐದು ರಫೇಲ್ ಯುದ್ಧ ವಿಮಾನ ಹೊರಟಿತ್ತು. ಜುಲೈ 29ರಂದು ಅಂಬಾಲಾ ವಾಯುನೆಲೆಗೆ ಬಂದಿಳಿದಿತ್ತು. ಈಗಾಗಲೇ ಭಾರತದ ವಾಯುಪಡೆಗೆ ಸೇರ್ಪಡೆಗೊಳ್ಳುವ ಮೂಲಕ ಲಡಾಖ್ ನ ಗಡಿಪ್ರದೇಶದಲ್ಲಿ ನೆಲೆ ನಿಂತಿದೆ.
ನವೆಂಬರ್ 5ರಂದು ಮತ್ತೆ 3 ರಫೇಲ್ ಯುದ್ಧ ವಿಮಾನ ಅಂಬಾಲಾ ವಾಯುನೆಲೆಗೆ ಬರಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ. ಈಗಾಗಲೇ ಫ್ರಾನ್ಸ್ ನಲ್ಲಿ ಐಎಎಫ್ ನ ಏಳು ಮಂದಿ ಪೈಲಟ್ ಗೆ ರಫೇಲ್ ಯುದ್ಧ ವಿಮಾನ ಹಾರಾಟದ ತರಬೇತಿ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಬಿಹಾರ ಪ್ರಥಮ ಹಂತದ ಚುನಾವಣೆ: “ಕೈ” ಕೊಟ್ಟ ಇವಿಎಂ ಯಂತ್ರಗಳು, ಮತದಾರರ ಆಕ್ರೋಶ
ಮೊದಲ ಹಂತದ ಐದು ರಫೇಲ್ ಯುದ್ಧ ವಿಮಾನ ಸೆಪ್ಟೆಂಬರ್ 10ರಂದು ವಾಯುಪಡೆಗೆ ಸೇರ್ಪಡೆಯಾಗಿತ್ತು. ಈ ಸಂದರ್ಭದಲ್ಲಿ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್, ಭಾರತದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಹಾಜರಿದ್ದರು.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫ್ರಾನ್ಸ್ ಜತೆ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಒಟ್ಟು 59 ಸಾವಿರ ಕೋಟಿ ರೂಪಾಯಿಗಳ ಒಪ್ಪಂದವಾಗಿರುವುದಾಗಿ ವರದಿ ತಿಳಿಸಿದೆ.