Advertisement

Bangladesh ಪೊಲೀಸರೇ ಬೀದಿಗೆ: ಜನರೇ ಪೊಲೀಸರು!

12:50 AM Aug 08, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಶಾಂತಿ ವ್ಯವಸ್ಥೆಯನ್ನು ಕಾಪಾಡಬೇಕಿದ್ದ ಪೊಲೀಸರು ತಮ್ಮ ಕೆಲಸಕ್ಕೆ ಗೈರು ಹಾಜರಾದರೆ ಢಾಕಾ ಸೇರಿದಂತೆ ವಿವಿಧ ನಗರಗಳಲ್ಲಿ ಟ್ರಾಫಿಕ್‌ ನಿರ್ವಹಣೆ ಸೇರಿ ಅನೇಕ ಕೆಲಸ ಗಳನ್ನು ಬುಧವಾರ ವಿದ್ಯಾರ್ಥಿಗಳೇ ಕೈಗೊಂಡರು! ಶೇಖ್‌ ಹಸೀನಾ ದೇಶ ತೊರೆದ ಬಳಿಕವೂ ಢಾಕಾದಲ್ಲಿ ಅರಾಜಕತೆ ಇನ್ನೂ ಮುಂದುವರಿದಿದೆ.

Advertisement

ಪ್ರತಿಭಟನೆ ವೇಳೆ ಮೃತಪಟ್ಟ ಪೊಲೀಸ್‌ ಕುಟುಂಬ ಗಳಿಗೆ ಸೂಕ್ತ ಪರಿಹಾರ ಮತ್ತು ಕುಟುಂಬ ಸದಸ್ಯರಿಗೆ ಉದ್ಯೋಗ ಸೇರಿದಂತೆ 9 ಬೇಡಿಕೆಗಳೊಂದಿಗೆ ಪೊಲೀಸರು ಕೆಲಸಕ್ಕೆ ಗೈರಾಗಿದ್ದಾರೆ. ಪರಿಣಾಮ ಬಾಂಗ್ಲಾ ದೇಶ ಸ್ಕೌಟ್ಸ್‌ ಸಹಿತ ವಿದ್ಯಾರ್ಥಿಗಳು ಪೊಲೀಸರ
ಕೆಲಸವನ್ನು ನಿರ್ವಹಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ಪೊಲೀಸ್‌ ಪಡೆಯ ಪ್ರತೀ ಸದಸ್ಯರೂ ಹಂತ ಹಂತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಎ.ಕೆ.ಎಂ. ಶಹೀದುರ್‌ ರೆಹಮಾನ್‌ ಹೇಳಿದ್ದಾರೆ.

ಪೊಲೀಸರಿಗೆ ಮನವಿ
“ಪೊಲೀಸರು ಸಾರ್ವಜನಿಕರ ಸ್ನೇಹಿತರು. ಪೊಲೀಸ್‌ ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಗಾಳಿ ಸುದ್ದಿಯನ್ನು ನಿರ್ಲಕ್ಷಿಸಿ ಎಲ್ಲ ಪೊಲೀಸರು ತಮ್ಮ ಕರ್ತವ್ಯಕ್ಕೆ ಹಿಂದಿರಗಬೇಕು ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಎಐಜಿ ರೆಹಮಾನ್‌ ಮನವಿ ಮಾಡಿಕೊಂಡಿದ್ದಾರೆ.

ಠಾಣೆಗಳ ಮೇಲೆ ದಾಳಿ
ಪೊಲೀಸ್‌ ಠಾಣೆಗಳ ಮೇಲೂ ದಾಳಿ ನಡೆದಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸಿದೆ. ಈ ಮಧ್ಯೆ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ರ್ಯಾಪಿಡ್‌ ಆ್ಯಕ್ಷನ್‌ ಬೆಟಾಲಿಯನ್‌ (ಆರ್‌ಎಬಿ), ಢಾಕಾ ಮೆಟ್ರೋಪಾಲಿಟಿನ್‌ ಪೊಲೀಸ್‌(ಡಿಎಂಪಿ)ನ ಉನ್ನತ ಹುದ್ದೆಗಳನ್ನು ಮರು ರಚಿಸಲಾಗಿದ್ದು, ಎ.ಕೆ.ಎಂ. ರೆಹಮಾನ್‌ ಅವರನ್ನು ಆರ್‌ಎಬಿನ ಪೊಲೀಸ್‌ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಹಬೀಬುರ್‌ ರೆಹಮಾನ್‌ ಅವರನ್ನು ಢಾಕಾ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೊಬೆಲ್‌ ಪುರಸ್ಕೃತ ಮೊಹಮ್ಮದ್‌ ಯುನುಸ್‌ ಅವರನ್ನು ಮಧ್ಯಂತರ ಸರಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿವೆ.

Advertisement

ಈ ಮಧ್ಯೆ, ಬಾಂಗ್ಲಾದೇಶದ ಉದ್ಯಮ ಸಮೂಹವು ಕೂಡಲೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನರ್‌ ಸ್ಥಾಪಿಸುವಂತೆ ಮಧ್ಯಾಂತರ ಸರಕಾರಕ್ಕೆ ಮನವಿ ಮಾಡಿದೆ. ಕಳೆದ 2 ದಿನಗಳಿಂದ ಫ್ಯಾಕ್ಟರಿಗಳ ಮೇಲೂ ದಾಳಿ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next